ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ‘ಜನರ ಪ್ರಣಾಳಿಕೆ’ ಬಿಡುಗಡೆ

ವಿಧಾನಸಭೆ ಚುನಾವಣೆ: ಎಸ್‌ಆರ್‌ ಅಭಿಯಾನ ಸಮೀಕ್ಷೆ
Last Updated 31 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೂಚನಾ ಏವಂ ರೋಜಗಾರ್‌ ಅಭಿಯಾನ (ಎಸ್‌ಆರ್‌ ಅಭಿಯಾನ) ಸಮೀಕ್ಷೆ ನಡೆಸಿ, ‘ಜನರ ಪ್ರಣಾಳಿಕೆ’ಯನ್ನು ಬಿಡುಗಡೆ ಮಾಡಿದೆ. ಇದರಲ್ಲಿರುವ ಅಂಶಗಳನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ.

ರಾಜಸ್ಥಾನದ ವಿಧಾನಸಭೆಗೆ ಡಿಸೆಂಬರ್‌ 7ರಂದು ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಈವರೆಗೂ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಆದರೆ, ತಮ್ಮ ಪ್ರಣಾಳಿಕೆಯು ಜನರಿಂದ ಪಡೆದ ಮಾಹಿತಿಯನ್ನು ಒಳಗೊಂಡಿರುತ್ತದೆ ಎಂದು ಬಹುತೇಕ ಪಕ್ಷಗಳು ಹೇಳಿವೆ.

ಆಹಾರ ಭದ್ರತೆ, ಕಾರ್ಮಿಕ ಮತ್ತು ಅಸಂಘಟಿತ ವಲಯ, ನರೇಗಾ, ಆರೋಗ್ಯ, ಶಿಕ್ಷಣ, ಉದ್ಯೋಗ,
ಪ್ರಜಾಸತ್ತಾತ್ಮಕ ಆಡಳಿತ, ಗಣಿಗಾರಿಕೆ ವಿಷಯಗಳು, ಯುವ ಜನರು, ಮಹಿಳೆಯರು, ಮಕ್ಕಳ ಹಕ್ಕುಗಳು, ಕೃಷಿ, ಭೂ ಸ್ವಾಧೀನ, ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಅಲೆಮಾರಿ ಬುಡಕಟ್ಟು ಜನಾಂಗ, ಅಂಗವಿಕಲರು ಹಾಗೂ ಲಿಂಗ ಪರಿವರ್ತಿತರ ಹಕ್ಕುಗಳ ಕುರಿತು ಸಂವಾದ, ಚರ್ಚೆಗಳನ್ನು ನಡೆಸಿ ಎಸ್‌ಆರ್‌ ಅಭಿಯಾನ ಪ್ರಣಾಳಿಕೆ ಸಿದ್ಧಪಡಿಸಿದೆ.

ಪ್ರಣಾಳಿಕೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅಭಿಯಾನದ ನಿಖಿಲ್‌ ಡೇ, ‘ರಾಜಸ್ಥಾನದಲ್ಲಿ ಬಾಲಕಾರ್ಮಿಕರು ಹೆಚ್ಚಿದ್ದಾರೆ. ಸರ್ಕಾರಿ ಶಿಕ್ಷಕರನ್ನು ಇತರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಮಕ್ಕಳಿಗೆ ಪಾಠ ಹೇಳುವಲ್ಲಿ ತೊಂದರೆಯಾಗುತ್ತಿರುವುದು ಅಧ್ಯಯನದಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

‘ಗೆಲ್ಲುವ ಪಕ್ಷವು ನಮ್ಮ ಪ್ರಣಾಳಿಕೆಯಲ್ಲಿನ ಕೆಲವು ಅಂಶಗಳನ್ನಾದರೂ ಅಳವಡಿಸಿಕೊಳ್ಳುವ ವಿಶ್ವಾಸವಿದೆ’ ಎಂದ ಅವರು, ಬಿಜೆಪಿ ತನ್ನ ಪ್ರತಿನಿಧಿಯನ್ನು ಕಳಿಸದಿರುವುದು ಬೇಸರ ತಂದಿದೆ ಎಂದರು.ಆಮ್‌ ಆದ್ಮಿ ಪಾರ್ಟಿ, ಸಿಪಿಐ, ಸಮಾಜವಾದಿ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾಂಗ್ರೆಸ್‌ ಪಕ್ಷವು ಪ್ರಣಾಳಿಕೆ ಸಿದ್ಧಪಡಿಸಲು ಜನರಿಂದ ಆನ್‌ಲೈನ್‌ ಮೂಲಕ ಸಲಹೆಗಳನ್ನು ಕೋರಿದೆ. ನವೆಂಬರ್‌ ಎರಡನೇ ವಾರದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಹರೀಶ್‌ ಚೌಧರಿ, ‘ನಮ್ಮ ಪ್ರಣಾಳಿಕೆಯು ಜನರ ಪ್ರಣಾಳಿಕೆಯಾಗಿರುತ್ತದೆ. ರೈತರ ಸಂಕಷ್ಟ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆ ನಮ್ಮ ಆದ್ಯತೆಯಾಗಿದೆ’ ಎಂದು
ಹೇಳಿದ್ದಾರೆ.

‘ಜನರ ನಿರೀಕ್ಷೆಗಳನ್ನು ನಮ್ಮ ಪ್ರಣಾಳಿಕೆ ಒಳಗೊಂಡಿರುತ್ತದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT