ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು: ರಾಜ್ಯಸಭೆಯಲ್ಲಿ ಗದ್ದಲ

ಅಧಿವೇಶನ ವಿಸ್ತರಣೆಗೆ ಪ್ರತಿಪಕ್ಷಗಳ ತರಾಟೆ: ಸದನದ ನಿಯಮಾವಳಿ ಗಾಳಿಗೆ ತೂರಿದ ಆರೋಪ
Last Updated 9 ಜನವರಿ 2019, 20:27 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಬುಧವಾರ ರಾಜ್ಯಸಭೆ ಅಂಗೀಕರಿಸಿತು.

ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳ ಗದ್ದಲ, ಗಲಾಟೆ ನಡುವೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ ಗೆಹ್ಲೋಟ್‌ ‘ಸಂವಿಧಾನದ 124ನೇ ತಿದ್ದುಪಡಿ ಮಸೂದೆ–2019’ ಮಂಡಿಸಿದರು.

ಮಂಗಳವಾರ ಲೋಕಸಭೆ ಬಹುಮತದ ಅಂಗೀಕಾರ ಪಡೆದ ನಂತರ ಮಸೂದೆ ರಾಜ್ಯಸಭೆಗೆ ಬಂದಿದೆ. ಮಸೂದೆಗೆ ಅಂಗೀಕಾರ ಪಡೆಯುವ ಉದ್ದೇಶದಿಂದ ಸರ್ಕಾರ ರಾಜ್ಯಸಭೆಯ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಿತ್ತು.

ಅಧಿವೇಶನ ಅವಧಿ ವಿಸ್ತರಿಸಿದ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡವು.

‘ವಿರೋಧ ಪಕ್ಷಗಳ ಗಮನಕ್ಕೂ ತಾರದೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಸದನದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು, ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಯನ್ನು ಅವಮಾನಿಸಿದೆ’ ಎಂದು ಆರೋಪ ಮಾಡಿದವು.

ಕಾಂಗ್ರೆಸ್‌, ಟಿಎಂಸಿ, ಎಐಎಡಿಎಂಕೆ ಸದಸ್ಯರು ರಾಜ್ಯಸಭಾ ನಿಯಮಾವಳಿ ಪುಸ್ತಕ ತಮ್ಮ ಸಮರ್ಥನೆಗೆ ಪೂರಕವಾಗಿ ಬಳಸಿಕೊಂಡರು. ಇದು ತಮ್ಮಿಂದಾದ ವೈಯಕ್ತಿಕ ತಪ್ಪು ಎಂದು ಉಪ ಸಭಾಧ್ಯಕ್ಷ ಹರಿವಂಶ ಒಪ್ಪಿಕೊಂಡರು.

ಸಚಿವ ಅರುಣ್ ಜೇಟ್ಲಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿಜಯ್‌ ಗೋಯೆಲ್‌ ಉಪ ಸಭಾಧ್ಯಕ್ಷರ ಬೆಂಬಲಕ್ಕೆ ನಿಂತರು. ಕಲಾಪ ಸಲಹಾ ಮಂಡಳಿ ಸಭೆಯಲ್ಲಿ ಅಧಿವೇಶನ ವಿಸ್ತರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.

ಸದನವು ನಿಯಮಾವಳಿ ಪ್ರಕಾರ ನಡೆಯಬೇಕು ಮತ್ತು ಮಸೂದೆಯನ್ನು ಆಯ್ಕೆ ಸಮಿತಿ ಪರಿಶೀಲನೆಗೆ ಕಳಿಸಬೇಕು ಎಂದು ಡಿಎಂಕೆಯ ಕನಿಮೊಳಿ ಒತ್ತಾಯಿಸಿದರು. ಕಾಂಗ್ರೆಸ್‌ನ ಆನಂದ ಶರ್ಮಾ, ಎಎಪಿಯ ಸಂಜಯ ಸಿಂಗ್‌ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

ಮಸೂದೆಯನ್ನು ಆಯ್ಕೆ ಸಮಿತಿಗೆ ಕಳಿಸಲು ಉಪ ಸಭಾಧ್ಯಕ್ಷರು ನಿರಾಕರಿಸಿದರು. ಆಗ ಕನಿಮೊಳಿ ಅವರು ಬೇಡಿಕೆಯನ್ನು ಮತಕ್ಕೆ ಹಾಕುವಂತೆ ನಿರ್ಣಯ ಮಂಡಿಸಿದರು. ಆದರೆ, ವಿರೋಧ ಪಕ್ಷಗಳು ಅವರಿಗೆ ಬೆಂಬಲ ನೀಡಲಿಲ್ಲ.

ಸಂಪ್ರದಾಯ ಉಲ್ಲಂಘನೆ: ‘ಸಂಸದೀಯ ಸ್ಥಾಯಿಸಮಿತಿಗಳ ಪರಿಶೀಲನೆಯ ನಂತರವಷ್ಟೇ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸುವುದು ವಾಡಿಕೆ. ರಾಜ್ಯಸಭೆ ರಬ್ಬರ್‌ ಸ್ಟ್ಯಾಂಪ್‌ ಅಲ್ಲ’ ಎಂದು ಆನಂದ ಶರ್ಮಾ ತರಾಟೆಗೆ ತೆಗೆದುಕೊಂಡರು.

ಸರ್ಕಾರ ಮೇಲ್ಜಾತಿ ಮೀಸಲಾತಿಯಲ್ಲಿ ರಾಜಕೀಯ ಮಾಡುತ್ತಿದೆ. ಲೋಕಸಭಾ ಚುನಾವಣೆಗೂ ಮುನ್ನ ಇದೊಂದು ರಾಜಕೀಯ ಗಿಮಿಕ್‌ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿದವು.

‘ಸರ್ಕಾರದ ಉದ್ದೇಶ ಉದಾತ್ತವಾಗಿದೆ. ಹೀಗಾಗಿ ಮಸೂದೆಯ ಉದ್ದೇಶವೂ ಒಳ್ಳೆಯದಾಗಿರುತ್ತದೆ’ ಎಂದು ಸಚಿವ ಗೆಹ್ಲೋಟ್‌ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ನೆರೆಯ ರಾಷ್ಟ್ರದ ಮುಸ್ಲಿಮೇತರರಿಗೆ ಪೌರತ್ವ ನೀಡುವ ಮಸೂದೆಗೆ ಸಂಬಂಧಿಸಿದಂತೆ ಗೃಹ ಸಚಿವ ರಾಜನಾಥ್‌ ಸಿಂಗ್‌ ಸದನದಲ್ಲಿ ಹೇಳಿಕೆ ನೀಡುವಂತೆ ಪಟ್ಟು ಹಿಡಿದ ಕಾಂಗ್ರೆಸ್‌, ಡಿಎಂಕೆ, ಆರ್‌ಜೆಡಿ, ಟಿಎಂಸಿ ಮತ್ತು ಆಮ್‌ ಆದ್ಮಿ ಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸಿದರು.

ಮಾನದಂಡ ನಿಗದಿ ಪಡಿಸಲು ರಾಜ್ಯಗಳಿಗೆ ಮುಕ್ತ ಅವಕಾಶ

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ವರ್ಗಗಳನ್ನು ಗುರುತಿಸುವ ಮಾನದಂಡ ನಿಗದಿ ಪಡಿಸಲು ರಾಜ್ಯಗಳಿಗೆ ಮುಕ್ತ ಅವಕಾಶವಿದೆ ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

ಸಂವಿಧಾನದ 124ನೇ ತಿದ್ದುಪಡಿ ಮಸೂದೆ–2019 ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ, ‘ಮೀಸಲಾತಿಗೆ ಮಾನದಂಡ ನಿಗದಿಪಡಿಸಲು ಸಂವಿಧಾನವು ರಾಜ್ಯಗಳಿಗೆ ಅಧಿಕಾರ ನೀಡಿದೆ’ ಎಂದು ಅವರು ಹೇಳಿದರು.

ಈ ಮೀಸಲಾತಿ ಪಡೆಯಲು ₹8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು. ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರಬಾರದು ಎಂದು ಸೋಮವಾರ ನಡೆದಿದ್ದ ಕೇಂದ್ರ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿತ್ತು.

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ₹5 ಲಕ್ಷ ವಾರ್ಷಿಕ ಆದಾಯ ಮೀರಿರಬಾರದು ಎಂದು ರಾಜ್ಯಗಳು ಮಾನದಂಡ ರೂಪಿಸಬಹುದು. ಈ ಮೀಸಲಾತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಕ್ಕೆ ಅನ್ವಯಿಸುತ್ತದೆ ಎಂದು ಪ್ರಸಾದ್‌ ಹೇಳಿದರು.

ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಸೂದೆ ಮಂಡಿಸಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದವು.‘ಹೌದು ನಮ್ಮಿಂದ ತಡವಾಗಿರಬಹುದು, ಆದರೆ,ಈ ಮಸೂದೆ ಮಂಡಿಸಲು ನಾವು ಧೈರ್ಯ ಮಾಡಿದ್ದೇವೆ’ ಎಂದು ಸಚಿವರು ತಿರುಗೇಟು ನೀಡಿದರು.

ಸಂಸ್ಕೃತಿ ರಕ್ಷಣೆಗೆ ಬದ್ಧ: ರಾಜನಾಥ್

‘ಈಶಾನ್ಯ ಭಾರತದ ಅಸ್ಮಿತೆ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಗೆ ತಿಳಿಸಿದರು.

‘ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಈಶಾನ್ಯ ಭಾರತದ ಜನರಲ್ಲಿ ತಪ್ಪುಗ್ರಹಿಕೆಗಳು ಹರಡಿವೆ. ಆದರೆ ಈ ಮಸೂದೆಯಿಂದ ಆ ಜನರಿಗೆ ಅನುಕೂಲವಾಗಲಿದೆ’ ಎಂದರು.

‘ಈ ಮಸೂದೆಯನ್ನು ವಿರೋಧಿಸಿ ಅಸ್ಸಾಂನಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದಿವೆ. ಈಶಾನ್ಯ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದೇನೆ’ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಪರಿಸ್ಥಿತಿ ಈಗ ನಿಯಂತ್ರಣದಲ್ಲಿ ಇದೆ. ಆ ಪ್ರದೇಶಗಳಲ್ಲಿಶಾಂತಿ ನೆಲೆಸಬೇಕು. ಸ್ಥಳೀಯರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT