ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಮಾರ್ಷಲ್‌ಗಳ ಹೊಸ ಸಮವಸ್ತ್ರದ ಬಗ್ಗೆ ಆಕ್ಷೇಪ: ಪರಾಮರ್ಶೆಗೆ ಒಪ್ಪಿಗೆ

ಪರಿಶೀಲಿಸಲು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮ್ಮತಿ
Last Updated 19 ನವೆಂಬರ್ 2019, 10:39 IST
ಅಕ್ಷರ ಗಾತ್ರ

ನವದೆಹಲಿ:ರಾಜ್ಯಸಾಭೆಯ ಮಾರ್ಷಲ್‌ಗಳಿಗೆ ಮಿಲಿಟರಿ ಶೈಲಿಯ ಸಮವಸ್ತ್ರ ಮತ್ತು ಟೋಪಿ ನೀಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಅದನ್ನು ಪರಾಮರ್ಶೆಗೆ ಒಳಪಡಿಸಲು ಸೂಚಿಸಿದ್ದಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಹೊಸ ಸಮವಸ್ತ್ರದೊಂದಿಗೆ ಮಾರ್ಷಲ್‌ಗಳು ಕಾಣಿಸಿಕೊಂಡಿದ್ದರು. ಮಾರ್ಷಲ್‌ಗಳಿಗೆ ಮಿಲಿಟರಿ ಶೈಲಿಯ ಸಮವಸ್ತ್ರ ನೀಡಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಮಾರ್ಷಲ್‌ಗಳ ಸಾಂಪ್ರದಾಯಿಕ ಸಮವಸ್ತ್ರ ‘ಬಂದ್‌ಗಲಾ ಮತ್ತು ಪೇಟ’ವನ್ನು ಬದಲಿಸಿ ಅವರಿಗೆ ತಿಳಿ ನೀಲಿ ಬಣ್ಣದ, ಮಿಲಿಟರಿ ಶೈಲಿಯ ಸಮವಸ್ತ್ರ ಮತ್ತು ಟೋಪಿ ನೀಡಲಾಗಿತ್ತು. ಹಿರಿಯ ಮಾರ್ಷಲ್‌ಗಳ ಅಂಗಿಯ ತೋಳಿನಲ್ಲಿ ನಾಲ್ಕು ಪಟ್ಟಿಗಳಿದ್ದರೆ ಇತರರ ಅಂಗಿಯ ತೋಳಿನಲ್ಲಿ ಎರಡು ಪಟ್ಟಿಗಳನ್ನು ಇರಿಸಲಾಗಿತ್ತು.

ಇದಕ್ಕೆ ನಿವೃತ್ತ ಸೇನಾಧಿಕಾರಿಗಳೂ ಸೇರಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಸೇನಾ ಸಮವಸ್ತ್ರವನ್ನು ಇತರರು ನಕಲು ಮಾಡುವುದು ಕಾನೂನುಬಾಹಿರ. ಉಪರಾಷ್ಟ್ರಪತಿ ಕಚೇರಿ, ರಾಜ್ಯಸಭೆ ಮತ್ತು ಸಚಿವ ರಾಜನಾಥ್ ಸಿಂಗ್ ಅವರು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭಾವಿಸುತ್ತೇನೆ’ ಎಂದು ನಿವೃತ್ತ ಜನರಲ್ ವೇದಪ್ರಕಾಶ್ ಮಲಿಕ್ ಟ್ವೀಟ್ ಮಾಡಿದ್ದರು.

ಇದಕ್ಕೆ ಕೇಂದ್ರ ಸಚಿವ ವಿ.ಕೆ.ಸಿಂಗ್ ಸಹಮತ ವ್ಯಕ್ತಪಡಿಸಿದ್ದಾರೆ. ಮಾರ್ಷಲ್ ಸಮವಸ್ತ್ರಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು.

ರಾಜ್ಯಸಭೆಯೊಳಗೆ ಪ್ರವೇಶಿಸಲು ಅನುಮತಿ ಇರುವ ನಾಲ್ವರು ಮಾರ್ಷಲ್‌ಗಳಿಗೆ ಸೋಮವಾರ ಹೊಸ ಸಮವಸ್ತ್ರ ನೀಡಲಾಗಿತ್ತು. ಅವರಲ್ಲಿ ಇಬ್ಬರು ಸಭಾಪತಿಯ ಪೀಠದ ಇಕ್ಕೆಲಗಳಲ್ಲಿ ನಿಂತಿರುತ್ತಾರೆ. ಉಳಿದಿಬ್ಬರು ಸನ್ನದ್ಧ ಸ್ಥಿತಿಯಲ್ಲಿರುತ್ತಾರೆ.

‘ಆಧುನಿಕ ವಿನ್ಯಾಸ, ನೋಡಲು, ಬಳಸಲು ಸುಲಭವಾಗಿರುವಂಥ ಸಮವಸ್ತ್ರ ನೀಡುವಂತೆ ಮಾರ್ಷಲ್‌ಗಳಿಂದಲೇ ಮನವಿ ಬಂದಿತ್ತು. ಹಲವು ಸುತ್ತಿನ ಚರ್ಚೆ ನಡೆಸಿದ ನಂತರ ಈ ಬದಲಾವಣೆ ಮಾಡಲಾಗಿದೆ’ ಎಂದು ಹಿರಿಯ ಅಧಿಕಾರಿ ಪ್ರಜಾವಾಣಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT