ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ 1989 ಈಗ 2019: ಬಿಜೆಪಿ ಪ್ರಣಾಳಿಕೆಯಲ್ಲಿ ರಾಮಮಂದಿರ ವಿಚಾರ ಸದಾ ಹಸಿರು

Last Updated 6 ನವೆಂಬರ್ 2019, 10:37 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಮ ಮಂದಿರ ನಿರ್ಮಾಣ ಕುರಿತಂತೆ ನಮ್ಮ ನಿಲುವನ್ನು ನಾವು ಪುನರುಚ್ಚರಿಸುತ್ತೇವೆ. ಅಯೋಧ್ಯೆಯಲ್ಲಿ ಶೀಘ್ರ ರಾಮಮಂದಿರ ನಿರ್ಮಿಸಲುಸಂವಿಧಾನದ ಚೌಕಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಬಳಸಿಕೊಳ್ಳುತ್ತೇವೆ’ ಎಂದು ಬಿಜೆಪಿ ಸೋಮವಾರ ಪ್ರಕಟಿಸಿರುವ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ (ಪುಟ 36) ಭರವಸೆ ನೀಡಿದೆ.

ಬಿಜೆಪಿ 1989ರಿಂದಲೂಬಿಜೆಪಿ ತನ್ನ ಪ್ರಣಾಳಿಕೆಗಳಲ್ಲಿ ರಾಮ ಮಂದಿರ ವಿಚಾರವನ್ನು ಪ್ರಸ್ತಾಪಿಸುತ್ತಲೇ ಇದೆ. ಆದರೆ ಕಳೆದ ಬಾರಿಯ ಪ್ರಣಾಳಿಕೆಗೂ(2014) ಈ ಬಾರಿಯ ಪ್ರಣಾಳಿಕೆಗೂ ರಾಮಮಂದಿರ ವಿಚಾರದಲ್ಲಿ ಬಿಜೆಪಿ ನಿಲುವು ಘೋಷಿಸುವ ಪದಗಳ ಪ್ರಯೋಗದಲ್ಲಿಯೂ ಕಿಂಚಿತ್ತೂ ಬದಲಾವಣೆ ಆಗಿಲ್ಲ. ವಿಚಾರಗಳು ಮತ್ತು ಅದನ್ನು ಪ್ರಸ್ತಾಪಿಸುವ ಪದಗಳುಯಥಾವತ್ತು (ಸೇಂ ಟು ಸೇಂ) ಇವೆ ಎನ್ನುವುದು ಗಮನಾರ್ಹ ಸಂಗತಿ.

ಅಂದಿನಿಂದ ಇಂದಿನವರೆಗೆ ಬಿಜೆಪಿ ಪ್ರಣಾಳಿಕೆಗಳಲ್ಲಿ ರಾಮ ಮಂದಿರ ವಿಚಾರ ಹೇಗೆಲ್ಲಾ ಪ್ರಸ್ತಾಪವಾಗಿದೆ? ಇಲ್ಲಿದೆ ಉತ್ತರ...

ಬಿಜೆಪಿ 1989ರ ಪ್ರಣಾಳಿಕೆಯಲ್ಲಿ ರಾಮಮಂದಿರ ವಿಚಾರ
ಬಿಜೆಪಿ 1989ರ ಪ್ರಣಾಳಿಕೆಯಲ್ಲಿ ರಾಮಮಂದಿರ ವಿಚಾರ

ಸೋಮನಾಥ ಮಂದಿರದ ಮಾದರಿ

‘1948ರಲ್ಲಿ ಸೋಮನಾಥ ಮಂದಿರ ನಿರ್ಮಿಸಿದ ಮಾದರಿಯಲ್ಲಿಅಯೋಧ್ಯೆಯಲ್ಲಿ ರಾಮ ಜನ್ಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದೆ. ಉದ್ವಿಗ್ನತೆ ಹೆಚ್ಚಾಗುತ್ತಿದೆ ಎಂದು ಬಿಜೆಪಿ ತನ್ನ 1989ರ ಪ್ರಣಾಳಿಕೆಯಲ್ಲಿ ಹೇಳಿತ್ತು. ಸೋಮನಾಥ ಮಂದಿರ ಮಾದರಿಯನ್ನು ಪ್ರಸ್ತಾಪಿಸಿದ್ದು ಈ ಪ್ರಣಾಳಿಕೆಯ ವೈಶಿಷ್ಟ್ಯ.

1991ರ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರ
1991ರ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರ

ದೇಶದ ಹೆಮ್ಮೆ

‘ರಾಮ ಜನ್ಮಸ್ಥಾನದಲ್ಲಿ (ಅಯೋಧ್ಯೆ) ಶ್ರೀ ರಾಮ ಮಂದಿರ ನಿರ್ಮಿಸುವುದು ನಿಚ್ಚಳವಾಗಿ ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ದೇಶದ ಆತ್ಮಗೌರವದಪ್ರತೀಕ. ಬಿಜೆಪಿಗೆ ಇದು ರಾಷ್ಟ್ರೀಯ ವಿಚಾರ. ಯಾವುದೇ ಪಟ್ಟಭದ್ರ ಹಿತಾಸಕ್ತಿ ಈ ವಿಷಯವನ್ನು ಸಮಾಜ ಒಡೆಯಲು ಅಥವಾಕೋಮು ಸೌಹಾರ್ದ ಕದಡಲು ಬಳಸಲು ಬಿಜೆಪಿ ಅವಕಾಶ ನೀಡುವುದಿಲ್ಲ. ರಾಮ ಜನ್ಮಸ್ಥಾನದಲ್ಲಿರುವ ಬಾಬ್ರಿ ಕಟ್ಟಡವನ್ನು ಗೌರವಪೂರ್ವಕ ಸ್ಥಳಾಂತರಿಸಿ,ಅದೇ ಸ್ಥಳದಲ್ಲಿರಾಮ ಮಂದಿರ ಕಟ್ಟಲು ಪಕ್ಷವು ಬದ್ಧವಾಗಿದೆ’ ಎಂದು ಬಿಜೆಪಿ ತನ್ನ 1991ರ ಪ್ರಣಾಳಿಕೆಯಲ್ಲಿ ಹೇಳಿತ್ತು.

‘ಮಸೀದಿ’ಪದವನ್ನು ಪ್ರಸ್ತಾಪಿಸದಿರುವುದು ಮತ್ತು ರಾಮಮಂದಿರ ನಿರ್ಮಾಣವನ್ನುರಾಷ್ಟ್ರೀಯ ವಿಚಾರ ಎಂದು ಕರೆದಿದ್ದು ಈ ಪ್ರಣಾಳಿಕೆಯ ಗಮನಾರ್ಹ ಅಂಶ.

1996ರ ಪ್ರಣಾಳಿಕೆಯಲ್ಲಿ ರಾಮ ಮಂದಿರ ವಿಚಾರ
1996ರ ಪ್ರಣಾಳಿಕೆಯಲ್ಲಿ ರಾಮ ಮಂದಿರ ವಿಚಾರ

ದೇಶದ ಕನಸು

‘ಸಾಂಸ್ಕೃತಿಕ ರಾಷ್ಟ್ರೀಯತೆಗೆ ಇನ್ನಷ್ಟು ಶಕ್ತಿ ತುಂಬುವ ಉದ್ದೇಶದಿಂದ ಬಿಜೆಪಿ ಅಯೋಧ್ಯೆಯಲ್ಲಿರಾಮ ಮಂದಿರ ನಿರ್ಮಾಣ ಚಳವಳಿಗೆ ಕೈಜೋಡಿಸಿತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಯೋಧ್ಯೆಯಲ್ಲಿರುವ ರಾಮ ಜನ್ಮಸ್ಥಾನದಲ್ಲಿಯೇ ಭವ್ಯ ಶ್ರೀರಾಮ ಮಂದಿರ ನಿರ್ಮಿಸಲು ಸಹಕರಿಸುವ ಮೂಲಕ ಭಾರತ ಮಾತೆಯನ್ನು ನಮಿಸುತ್ತದೆ. ನಮ್ಮ ದೇಶದ ಲಕ್ಷಾಂತರ ಜನರು ರಾಮ ಮಂದಿರದ ಕನಸು ಕಂಡಿದ್ದಾರೆ. ರಾಮನ ಪರಿಕಲ್ಪನೆ ಅವರೆಲ್ಲರ ಅಂತಃಪ್ರಜ್ಞೆಯ ಭಾಗವೇ ಆಗಿದೆ’ ಎಂದು ಬಿಜೆಪಿ 1996 ಪ್ರಣಾಳಿಕೆ ಸಾರಿ ಹೇಳಿತ್ತು.

ಭಾವುಕ ಭಾಷೆ, ದೇಶಭಕ್ತಿಯೊಡನೆ ರಾಮಭಕ್ತಿಯನ್ನು ಮಿಳಿತಗೊಳಿಸುವ ಯತ್ನ ಈ ಪ್ರಣಾಳಿಕೆಯಲ್ಲಿ ಗಮನ ಸೆಳೆಯುವ ವಿಚಾರ.

1998ರ ಪ್ರಣಾಳಿಕೆಯಲ್ಲಿ ರಾಮ ಮಂದಿರ
1998ರ ಪ್ರಣಾಳಿಕೆಯಲ್ಲಿ ರಾಮ ಮಂದಿರ

ವಿವಿಧ ಮಾರ್ಗಗಳು

‘ತಾತ್ಕಾಲಿಕ ದೇಗುಲ ಅಸ್ತಿತ್ವದಲ್ಲಿರುವ ಅಯೋಧ್ಯೆಯ ರಾಮ ಜನ್ಮಸ್ಥಾನದಲ್ಲಿ ಭವ್ಯ ಮಂದಿರ ನಿರ್ಮಿಸಲು ಎಲ್ಲ ಅಗತ್ಯ ನೆರವು ನೀಡಲುಬಿಜೆಪಿ ಬದ್ಧವಾಗಿದೆ. ಭಾರತೀಯರ ಅಂತಃಪ್ರಜ್ಞೆಯಲ್ಲಿ ರಾಮನಿದ್ದಾನೆ. ರಾಮ ಮಂದಿರ ನಿರ್ಮಾಣಕ್ಕಾಗಿ ಎಲ್ಲ ಸಾಂವಿಧಾನಿಕ, ಕಾನೂನು ಮಾರ್ಗ ಮತ್ತು ಸಂಧಾನ ಮಾರ್ಗಗಳನ್ನುಬಿಜೆಪಿ ಪರಿಶೋಧಿಸಲಿದೆ’ ಎಂದು 1998ರ ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿತ್ತು.

ನಂತರ ವರ್ಷಗಳ ಬಿಜೆಪಿಪ್ರಣಾಳಿಕೆಗಳಲ್ಲಿ ಕಾಣಿಸುವ ‘ವಿವಿಧ ಮಾರ್ಗಗಳನ್ನು ಪರಿಶೋಧಿಸುವ ವಿಚಾರ’ಕ್ಕೆ ಭೂಮಿಕೆ ಒದಗಿಸಿದ ಪ್ರಣಾಳಿಕೆ ಇದು. ರಾಮ ಮಂದಿರ ಕುರಿತಂತೆ ಬಿಜೆಪಿಯ ವಿಚಾರಧಾರೆಯಲ್ಲಿ ಆದ ಪಲ್ಲಟವನ್ನೂ ಇದು ಸೂಚಿಸುತ್ತದೆ.

2004ರ ಬಿಜೆಪಿ ಪ್ರಣಾಳಿಕೆ
2004ರ ಬಿಜೆಪಿ ಪ್ರಣಾಳಿಕೆ

ಸಂಧಾನದ ಘೋಷಣೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ ಬಿಜೆಪಿ, ‘ಮಾತುಕತೆ (ಸಂಧಾನ) ಮೂಲಕ ವಿವಾದ ಪರಿಹರಿಸಲು ಯತ್ನಿಸಲಾಗುವುದು. ಹಿಂದೂ–ಮುಸ್ಲಿಂ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭಿಸಲಾಗುವುದು’ ಎಂದು ಘೋಷಿಸಿತ್ತು.

ಅದು ಬಿಜೆಪಿ ಅಧಿಕಾರದಲ್ಲಿದ್ದು ಚುನಾವಣೆ ಎದುರಿಸಬೇಕಾಗಿದ್ದ ಕಾಲಘಟ್ಟ. ಹೀಗಾಗಿಯೇ ಈವರೆಗಿನ ಪ್ರಣಾಳಿಕೆಗಳಲ್ಲಿ ಉಲ್ಲೇಖವಾಗುತ್ತಿದ್ದ ಭಾವುಕ ಭಾಷೆ, ದೇಶಭಕ್ತಿಯನ್ನು ರಾಮಭಕ್ತಿಗೆ ಸಮೀಕರಿಸುವ ವಿಚಾರಗಳು 2004ರ ಪ್ರಣಾಳಿಕೆಯಲ್ಲಿ ಇರಲಿಲ್ಲ. ಅದಲ್ಲದೇ, ಸಂಧಾನ ಮತ್ತು ಸೌಹಾರ್ದಕ್ಕೆ ಹೆಚ್ಚು ಒತ್ತು ನೀಡಿದ್ದು ಈ ಪ್ರಣಾಳಿಕೆಯ ಗಮನಾರ್ಹ ಸಂಗತಿ. ‘ಅಯೋಧ್ಯೆಯಲ್ಲಿ ರಾಮಮಂದಿರ’ ಎಂದಷ್ಟೇ ಈ ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿದೆ. ಆದರೆ ಈ ಮೊದಲಿನ ಪ್ರಣಾಳಿಕೆಗಳಲ್ಲಿ ‘ಅಯೋಧ್ಯೆಯ ರಾಮ ಜನ್ಮಸ್ಥಾನದಲ್ಲಿ ರಾಮಮಂದಿರ’ ಎನ್ನುವ ಉಲ್ಲೇಖ ಇರುತ್ತಿತ್ತು.

2009ರ ಬಿಜೆಪಿ ಪ್ರಣಾಳಿಕೆ
2009ರ ಬಿಜೆಪಿ ಪ್ರಣಾಳಿಕೆ

ಜನರ ಅಪೇಕ್ಷೆ

‘ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಬೇಕು ಎಂದು ಭಾರತ ಮತ್ತು ವಿಶ್ವದ ವಿವಿಧೆಡೆ ನೆಲೆಸಿರುವ ಜನರು ಅಪೇಕ್ಷಿಸುತ್ತಿದ್ದಾರೆ. ಸಂಧಾನ ಮಾರ್ಗ ಮತ್ತು ನ್ಯಾಯಾಂಗ ಹೋರಾಟ ಸೇರಿದಂತೆ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಬಿಜೆಪಿ ಸಹಕರಿಸಲಿದೆ’ ಎಂದು 2009ರ ಪ್ರಣಾಳಿಕೆಯಲ್ಲಿ ಬಿಜೆಪಿಹೇಳಿತ್ತು.

2004 ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತ್ತು. ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಯುಪಿಎ–1 ಸರ್ಕಾರದ ವಿರುದ್ಧ ಕಣಕ್ಕಿಳಿದಿದ್ದ ಬಿಜೆಪಿಯ ಈ ಪ್ರಣಾಳಿಕೆಯಲ್ಲಿ ‘ಬದ್ಧತೆ’ಯ ಮಾತು ಅಥವಾ ಭಾವುಕ ಪದಗಳನ್ನು ತರಲಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಬದಲಿಗೆ ‘ಜನರ ಅಪೇಕ್ಷೆ’ಯನ್ನು ಗೌರವಿಸುವ ಪದಗುಚ್ಛವನ್ನು ಹೆಣೆಯಲಾಯಿತು.

2014ರ ಪ್ರಣಾಳಿಕೆಯಲ್ಲಿ ರಾಮ ಮಂದಿರ ವಿಚಾರ
2014ರ ಪ್ರಣಾಳಿಕೆಯಲ್ಲಿ ರಾಮ ಮಂದಿರ ವಿಚಾರ

ಸಾಧ್ಯತೆಗಳ ಪರಿಶೀಲನೆ

2014ರ ಪ್ರಣಾಳಿಕೆಯಲ್ಲಿ ಬಿಜೆಪಿಯು ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆಸಂವಿಧಾನದ ಚೌಕಟ್ಟಿನಲ್ಲಿ ಲಭ್ಯವಿರುವ ಎಲ್ಲ ಸಾಧ್ಯತೆಗಳನ್ನು ಪರಿಶೋಧಿಸಲಾಗುವುದು’ ಎಂಬಭರವಸೆಯನ್ನು ಮಾತ್ರವೇ ನೀಡಿತು.ಕೇವಲ ಒಂದೇ ವಾಕ್ಯದಲ್ಲಿ ಅಯೋಧ್ಯೆ ವಿಚಾರದ ಉಲ್ಲೇಖ ಮುಗಿದುಹೋಗಿದ್ದು ಗಮನಾರ್ಹ ಸಂಗತಿ.

2019ರ ಪ್ರಣಾಳಿಕೆಯಲ್ಲಿ ರಾಮ ಮಂದಿರ ವಿಚಾರ
2019ರ ಪ್ರಣಾಳಿಕೆಯಲ್ಲಿ ರಾಮ ಮಂದಿರ ವಿಚಾರ

ಸೇಂ ಟು ಸೇಂ

2014ರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಜೆಪಿ 2019ರಲ್ಲಿಯೂ ಪುನರುಚ್ಚರಿಸಿದೆ. ಕಳೆದ ಜನವರಿಯಿಂದ ಈಚೆಗೆ ಹೆಚ್ಚಾಗಿ ಕೇಳಿಬರುತ್ತಿದ್ದ ಸುಗ್ರೀವಾಜ್ಞೆಯ ಒತ್ತಾಯದಯಾವುದೇ ಪ್ರಸ್ತಾಪ ಮಾಡಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಅಯೋಧ್ಯೆ ವಿವಾದ ನಡೆದು ಬಂದ ಹಾದಿ
ಅಯೋಧ್ಯೆ ವಿವಾದ ನಡೆದು ಬಂದ ಹಾದಿ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT