ಸತತ ಎರಡನೇ ಬಾರಿ ಆರ್‌ಬಿಐ ರೆಪೊ ದರ ಶೇ 0.25 ಇಳಿಕೆ

ಬುಧವಾರ, ಏಪ್ರಿಲ್ 24, 2019
33 °C

ಸತತ ಎರಡನೇ ಬಾರಿ ಆರ್‌ಬಿಐ ರೆಪೊ ದರ ಶೇ 0.25 ಇಳಿಕೆ

Published:
Updated:

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನು (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಶೇ 0.25ರಷ್ಟು ಇಳಿಸಿದೆ. ಇದರಿಂದ ವಾಹನ ಮತ್ತು ಗೃಹಸಾಲ ಮತ್ತಷ್ಟು ಅಗ್ಗವಾಗಲಿದೆ. 

ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) 2019–20ನೇ ಹಣಕಾಸು  ವರ್ಷದ ಮೊದಲ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದೆ. ಸತತ ಎರಡನೇ ಬಾರಿ ಆರ್‌ಬಿಐ ರೆಪೊ ದರ  ಕಡಿಮೆಗೊಳಿಸಿದೆ. ಆರು ಸದಸ್ಯರಲ್ಲಿ ನಾಲ್ವರು ರೆಪೊ ದರ ಕಡಿಮೆಗೊಳಿಸುವುದಕ್ಕೆ ಸಮ್ಮತಿಸಿದರೆ, ಇಬ್ಬರು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದರು ಎಂದು ಆರ್‌ಬಿಐ ತಿಳಿಸಿದೆ.

ಫೆಬ್ರವರಿಯಲ್ಲಿ ಆರ್‌ಬಿಐ ಪ್ರಕಟಿಸಿದ ಕಳೆದ ಸಾಲಿನ ದ್ವೈಮಾಸಿಕ ಹಣಕಾಸು ನೀತಿಯಲ್ಲಿಯೂ ಶೇ.0.25ರಷ್ಟು ದರವನ್ನು ಇಳಿಕೆ ಮಾಡಿತ್ತು. ಈ ಪರಿಣಾಮ ರೆಪೊ ದರ ಶೇ.6.50ರಿಂದ ಶೇ.6.25ಕ್ಕೆ ಇಳಿಕೆಯಾಗಿತ್ತು. ಈಗ ಮತ್ತೆ ರೆಪೊ ದರ ಶೇ.0.25 ಕಡಿತವಾಗಿದ್ದು, ಶೇ.6ಕ್ಕೆ ತಲುಪಲಿದೆ. 'ಆರ್ಥಿಕ ಬೆಳವಣಿಗೆಗೆ ವೇಗ ನೀಡುವ ಸಲುವಾಗಿ ರೆಪೊ ದರವನ್ನು ಆರ್‌ಬಿಐ ಮತ್ತೆ ಇಳಿಕೆ ಮಾಡಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರೆಪೊ ದರ ಇಳಿದರೆ ಗೃಹ ಸಾಲದ ಬಡ್ಡಿ ಕಡಿತ

ಆರ್‌ಬಿಐ ಬಡ್ಡಿ ದರ ಇಳಿಕೆಯಾದರೆ, ಗೃಹ ಮತ್ತು ವಾಹನ ಸಾಲಗಳ ಬಡ್ಡಿ ದರ ಇಳಿಸಲು ಬ್ಯಾಂಕ್‌ಗಳಿಗೆ ಸಾಧ್ಯವಾಗಲಿದೆ. ರೆಪೊ ದರ ಇಳಿಕೆಯ ಲಾಭವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ರೆಪೊ ದರ ಇಳಿಕೆಯ ಬೆನ್ನಲ್ಲಿ ಕೆಲವು ಬ್ಯಾಂಕ್‌ಗಳು ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಅಲ್ಪ ಇಳಿಕೆ ಮಾಡಿದ್ದವು. ಈಗ ಮತ್ತೆ ಕಡಿತ ಮಾಡಿರುವುದರಿಂದ ಬಡ್ಡಿ ದರ ಮತ್ತಷ್ಟು ಕಡಿತವಾಗಲಿವೆ. ಸಾಲ ಮಾಡಿದವರಿಗೆ ಇದರಿಂದ ಅನುಕೂಲವಾದರೆ, ಠೇವಣಿಗಳನ್ನು ಇಡುವ ಮಂದಿಗೆ ಕಡಿಮೆ ರಿಟರ್ನ್ಸ್‌ ದೊರೆಯುತ್ತದೆ ಎನ್ನುತ್ತಾರೆ ತಜ್ಞರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !