ಶನಿವಾರ, ಡಿಸೆಂಬರ್ 14, 2019
22 °C

ಆರ್‌ಬಿಐ ಆಕ್ಷೇಪಗಳ ಬದಿಗೊತ್ತಿ ಚುನಾವಣಾ ಬಾಂಡ್‌ಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣಾ ಬಾಂಡ್ ಯೋಜನೆ ಸಂಬಂಧ ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸಲಹೆ ಕೇಳಿತ್ತು. ಈ ಸಂಬಂಧ ಆರ್‌ಬಿಐ ಕಾಯ್ದೆಯ 31ನೇ ಸೆಕ್ಷನ್‌ಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಪ್ರತಿಕ್ರಿಯೆಯನ್ನೂ ಕೇಳಲಾಗಿತ್ತು. ಸಚಿವಾಲಯದ ಪತ್ರ ಬಂದ ಎರಡೇ ದಿನದಲ್ಲಿ ಆರ್‌ಬಿಐ ತನ್ನ ಪ್ರತಿಕ್ರಿಯೆಯನ್ನು ನೀಡಿತ್ತು. ಈ ಯೋಜನೆ ಮತ್ತು ಕಾಯ್ದೆಯ ತಿದ್ದುಪಡಿಗೆ ಆರ್‌ಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ, ಆರ್‌ಬಿಐನ ಆಕ್ಷೇಪಗಳನ್ನು ಬದಿಗೊತ್ತಿ ಯೋಜನೆಯನ್ನು ಜಾರಿ ಮಾಡಬಹುದು ಎಂದು ಅಂದಿನ (2017ರ ಜನವರಿ 30) ರೆವೆನ್ಯೂ ಕಾರ್ಯದರ್ಶಿ ಹಸಮುಖ್ ಆಧಿಯಾ ಹಣಕಾಸು ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಬಾಂಡ್‌ನಿಂದ ಅಕ್ರಮ ಹಣ ವರ್ಗಾವಣೆ: ರಿಸರ್ವ್‌ ಬ್ಯಾಂಕ್ ಕಳವಳ

* ಈ ಕ್ರಮವು, ಪ್ರಾಮಿಸರಿ ನೋಟ್‌ಗಳನ್ನು ವಿತರಿಸುವ ಅಧಿಕಾರವನ್ನು ಉತ್ತರದಾಯಿಯಲ್ಲದ ಸಂಸ್ಥೆಗಳಿಗೆ ನೀಡುತ್ತದೆ. ಭಾರಿ ಮೊತ್ತದ ಬಾಂಡ್‌ಗಳನ್ನು ವಿತರಿಸಲು ಅವಕಾಶವಿರುವ ಕಾರಣ, ಇದು ಪರ್ಯಾಯ ಕರೆನ್ಸಿ ಆಗಿ ಮಾರ್ಪಾಡಾಗುವ ಅಪಾಯವಿದೆ. ಆರ್‌ಬಿಐ ವಿತರಿಸಿದ ಪ್ರಾಮಿಸರಿ ನೋಟ್‌ಗಳ ಮೌಲ್ಯಕ್ಕೆ ಧಕ್ಕೆಯಾಗುವ ಅಪಾಯವಿದೆ. ಆರ್‌ಬಿಐ ಕಾಯ್ದೆಯ 31ನೇ ಸೆಕ್ಷನ್ ತಿದ್ದುಪಡಿ ಮಾಡುವುದು ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಆಗಲಿದೆ.

* ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್‌ ವ್ಯವಸ್ಥೆ ಅಸ್ತಿತ್ವಕ್ಕೆ ಬರಲಿದೆ ಎನ್ನಲಾಗಿದೆ. ಆದರೆ, ಯಾರು ಈ ಬಾಂಡ್ ಖರೀದಿಸುತ್ತಾರೆ ಮತ್ತು ಯಾರು ಇದನ್ನು ರಾಜಕೀಯ ಪಕ್ಷಗಳಿಗೆ ನೀಡುತ್ತಾರೆ ಎಂಬುದರ ದಾಖಲೆ ಇರುವುದಿಲ್ಲ. ಈ ದಾಖಲೆ ಇಲ್ಲದಿರುವ ಕಾರಣ, ಈ ಯೋಜನೆಯ ಮೂಲ ಉದ್ದೇಶವನ್ನು ಸಾಧಿಸಲು ಸಾಧ್ಯವೇ ಇಲ್ಲ

* ಬಾಂಡ್‌ ಖರೀದಿಸುವವರು ‘ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ)’ ದಾಖಲೆಗಳನ್ನು ಸಲ್ಲಿಸಬೇಕು. ಅವರ ಗುರುತು ಇರುತ್ತದೆ. ಆದರೆ, ಬಾಂಡ್‌ ಅನ್ನು ಪಡೆಯುವವರ ಗುರುತು ಇರುವುದಿಲ್ಲ. ಇದು ಅಕ್ರಮ ಹಣ ವರ್ಗಾವಣೆಗೆ ದಾರಿ ಮಾಡಿಕೊಡುತ್ತದೆ

* ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ದೇಶದಿಂದ ಮಾತ್ರ ಈ ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗುತ್ತದೆ. ಈಗ ಚಾಲ್ತಿಯಲ್ಲಿರುವ ಚೆಕ್‌, ಡಿಮ್ಯಾಂಡ್‌ ಡ್ರಾಫ್ಟ್‌–ಡಿ.ಡಿ, ಆನ್‌ಲೈನ್‌ ಬ್ಯಾಂಕಿಂಗ್‌, ಮೊಬೈಲ್ ಬ್ಯಾಂಕಿಂಗ್ ಮತ್ತು ಇತರ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕವೇ ದೇಣಿಗೆ ನೀಡಲು ಅವಕಾಶವಿದೆ. ಇಂತಹ ವ್ಯವಸ್ಥೆಗಳು ಇರುವಾಗಲೇ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ದೇಶದಿಂದ ವಿಶೇಷ ಮತ್ತು ಪ್ರತ್ಯೇಕ ವ್ಯವಸ್ಥೆಯನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲ

* ಪ್ರಾಮಿಸರಿ ನೋಟ್‌ ಆಗಿರುವ ಚುನಾವಣಾ ಬಾಂಡ್‌ ಅನ್ನು ವಿತರಿಸಲು ಎಸ್‌ಬಿಐಗೆ ಅಧಿಕಾರ ನೀಡುವ ಏಕೈಕ ಉದ್ದೇಶದಿಂದ ಆರ್‌ಬಿಐ ಕಾಯ್ದೆಯ 31ನೇ ಸೆಕ್ಷನ್‌ಗೆ ತಿದ್ದುಪಡಿ ತರುವುದು ತರವಲ್ಲ. ಇದು ಕಾರ್ಯಸಾಧುವಲ್ಲ ಎಂಬುದು ನಮ್ಮ ಅಭಿಪ್ರಾಯ

 –ಭಾರತೀಯ ರಿಸರ್ವ್ ಬ್ಯಾಂಕ್‌, 30.01.2017

 

ರೆವೆನ್ಯೂ ಕಾರ್ಯದರ್ಶಿ ಅಂಕಿತ

ರೆವೆನ್ಯೂ ಕಾರ್ಯದರ್ಶಿ ಹಸಮುಖ್ ಆಧಿಯಾ ಅವರು ಹಣಕಾಸು ಸಚಿವಾಲಯದ ಕಾರ್ಯದರ್ಶಿಗೆ ಬರೆದ ಪತ್ರದ ಒಕ್ಕಣೆ

‘ದೇಣಿಗೆ ನೀಡುವವರ ವಿವರವನ್ನು ಗೋಪ್ಯವಾಗಿ ಇಡುವುದರ ಹಿಂದಿನ ಉದ್ದೇಶವನ್ನು ಆರ್‌ಬಿಐ ಅರ್ಥಮಾಡಿಕೊಂಡಿಲ್ಲ. ಬಾಂಡ್‌ನ ಖರೀದಿ, ಅವನ್ನು ದೇಣಿಗೆ ನೀಡಲು, ಅವನ್ನು ಬ್ಯಾಂಕ್‌ ಸಲ್ಲಿಸಲು ಲಭ್ಯವಿರುವ ಅವಧಿ ಸೀಮಿತವಾದುದು. ಪಕ್ಷಗಳ ನಿಗದಿತ ಚಾಲ್ತಿ ಖಾತೆಗೆ ಮಾತ್ರ ಹಣ ಜಮೆಯಾಗುತ್ತದೆ. ಹೀಗಾಗಿ, ಬಾಂಡ್‌ಗಳನ್ನು ಪರ್ಯಾಯ ಕರೆನ್ಸಿಯಾಗಿ ಬಳಸುವ ಸಾಧ್ಯತೆ ಇಲ್ಲ. ಅಲ್ಲದೆ, ಆರ್‌ಬಿಐ ತಡವಾಗಿ ಸಲಹೆ ನೀಡಿದೆ. ಈಗಾಗಲೇ ಹಣಕಾಸು ಮಸೂದೆಯ ಮುದ್ರಣ ಮುಗಿದಿದೆ. ಹೀಗಾಗಿ, ನಮ್ಮ ಪ್ರಸ್ತಾವದಂತೆ ನಾವು ಮುಂದುವರಿಯೋಣ’ ಎಂದು ಆಧಿಯಾ ಬರೆದಿದ್ದಾರೆ.

30.01.2017

ಸಚಿವಾಲಯ ಪತ್ರ

‘ಪ್ರಾಮಿಸರಿ ನೋಟ್‌’ ಆಗಿರುವ ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ವಿತರಿಸಲು ‘1934ರ ಆರ್‌ಬಿಐ ಕಾಯ್ದೆ’ಯ ಸೆಕ್ಷನ್‌ 31ಕ್ಕೆ ತಿದ್ದುಪಡಿ ತರಬೇಕಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಹಣಕಾಸು ಸಚಿವಾಲಯವು ಆರ್‌ಬಿಐಗೆ ಇ–ಮೇಲ್ ಮಾಡಿತ್ತು.

28.01.2017

ಆರ್‌ಬಿಐ ಕಾಯ್ದೆ

‘ಭಾರತದಲ್ಲಿ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಾತ್ರ ‘ಪ್ರಾಮಿಸರಿ ನೋಟ್‌’ಗಳನ್ನು ವಿತರಿಸಬಹುದು. ಇತರ ಬ್ಯಾಂಕ್‌ಗಳು ಚೆಕ್‌ಗಳನ್ನು ವಿತರಿಸಲು ಅವಕಾಶವಿದೆ ಎಂದು ಆರ್‌ಬಿಐ ಕಾಯ್ದೆಯ 31ನೇ ಸೆಕ್ಷನ್ ಹೇಳುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು