ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಎಡಪಕ್ಷಗಳ ಮತಬುಟ್ಟಿಗೆ ಕೈಹಾಕಿದ ಬಿಜೆಪಿ

Last Updated 25 ಮೇ 2019, 19:45 IST
ಅಕ್ಷರ ಗಾತ್ರ

ಕೋಲ್ಕತ್ತ:ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಯಶಸ್ಸು ಅನೇಕರಿಗೆ ಆಶ್ಚರ್ಯ ಮೂಡಿಸಿದೆ. ಈ ಸಾಧನೆಗೆ ಕಾರಣಗಳು ಅನೇಕ. ರಾಜ್ಯದಲ್ಲಿ ಬಿಜೆಪಿ ಬಲ 2 ರಿಂದ 18 ಸ್ಥಾನಕ್ಕೆ ಏರಿದ್ದರೆ, ತೃಣಮೂಲ ಕಾಂಗ್ರೆಸ್‌ನ ಬಲ 34ರಿಂದ 22ಕ್ಕೆ ಕುಸಿದಿದೆ.

ರಾಜ್ಯದಲ್ಲಿ 34 ವರ್ಷ ಆಡಳಿತ ನಡೆಸಿದ್ದ ಸಿಪಿಎಂ ನೇತೃತ್ವದ ಎಡಪಕ್ಷಗಳ ಮತಗಳಿಗೆ ಬಿಜೆಪಿ ಈ ಚುನಾವಣೆಯಲ್ಲಿ ಲಗ್ಗೆ ಹಾಕಿರುವುದು ಸ್ಪಷ್ಟವಾಗಿದೆ.

2014ರ ಚುನಾವಣೆಯಲ್ಲಿ ಎಡರಂಗದ ಮತಗಳಿಕೆ ಪ್ರಮಾಣ ಶೇ 29.93ರಷ್ಟಿದ್ದರೆ, ಬಿಜೆಪಿಯ ಮತಗಳಿಕೆ ಪ್ರಮಾಣ ಶೇ 17.02 ಆಗಿತ್ತು. ಈ ಚುನಾವಣೆಯಲ್ಲಿ ಇದು ಕ್ರಮವಾಗಿ ಶೇ 7.46 ಮತ್ತು ಶೇ 40.25 ಆಗಿದೆ.

ಇದೇ ಸಂದರ್ಭದಲ್ಲಿ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್‌ ತನ್ನ ಮತಗಳಿಕೆ ಪ್ರಮಾಣವನ್ನು ಶೇ 39.77ರಿಂದ, ಈಗ ಶೇ 43.28ಕ್ಕೆ ಹೆಚ್ಚಿಸಿಕೊಂಡಿದೆ. ಹಾಗಾಗಿ ಎಡಪಕ್ಷಗಳ ಹೆಚ್ಚಿನ ಮತಗಳು ಬಿಜೆಪಿಗೆ ಹೋಗಿರುವುದು ಸ್ಪಷ್ಟವಾಗಲಿದೆ.

ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇತ್ತು. ಇದು ಬಿಜೆಪಿ ಯಶಸ್ಸಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಕಳೆದ ಚುನಾವಣೆವರೆಗೆ ಎಡರಂಗ, ಕಾಂಗ್ರೆಸ್‌, ಬಿಜೆಪಿ, ಟಿಎಂಸಿ ನಡುವೆ ಚತುಷ್ಕೋನ ಸ್ಪರ್ಧೆ ಇದ್ದು ಮತ ವಿಭಜನೆಯ ಲಾಭವನ್ನು ಟಿಎಂಸಿ ಪಡೆಯುತ್ತಿತ್ತು. ಈ ಬಾರಿ ಟಿಎಂಸಿ ವಿರೋಧಿ ಮತಗಳು ಬಿಜೆಪಿಗೆ ಹೋಗಿವೆ.

ಅಲ್ಲದೆ, ಕಳೆದ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯು ಬಂಕುರಾ, ಪುರುಲಿಯಾ, ಜಾರ್‌ಗ್ರಾಮ್‌ನಲ್ಲಿ ಗಣನೀಯ ಸಾಧನೆ ಮಾಡಿದ್ದು, ಅದು ಕೂಡಾ ಈ ಬಾರಿ ಪಕ್ಷದ ನೆರವಿಗೆ ಬಂದಿದೆ. ಈ ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯದ ಜನರೇ ಹೆಚ್ಚಿದ್ದಾರೆ.

ಅಲ್ಲದೆ, ರಾಮನವಮಿ ರ‍್ಯಾಲಿಗಳ ಆಯೋಜನೆ ಹಾಗೂ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಟಿಎಂಸಿ ಅಡ್ಡಿ ಮಾಡುತ್ತಿದೆ ಎಂಬ ಪುನರಾವರ್ತಿತ ಆರೋಪಗಳ ಮೂಲಕ ಹಿಂದೂಗಳ ಮತ ಕ್ರೋಡೀಕರಣ ಯತ್ನವೂ ಬಿಜೆಪಿ ಬಲವರ್ಧನೆಗೆ ನೆರವಾಗಿದೆ.

ರಾಜೀನಾಮೆ ಕೊಡಲು ಬಯಸಿದ್ದೆ

‘ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದೆ. ಪಕ್ಷದ ಮುಖಂಡರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ತೀವ್ರ ಹಿನ್ನಡೆ ಅನುಭವಿಸಿದ ಕಾರಣ ಶನಿವಾರ ಪಕ್ಷದ ಶಾಸಕಾಂಗ ಪಕ್ಷದ ಸಭೆ ಕರೆದಿದ್ದ ಅವರು ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ಮಾಹಿತಿ ನೀಡಿದರು.

‘ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಇಚ್ಛಿಸುವುದಿಲ್ಲ. ಬದಲಿಗೆ ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡಲು ಇಚ್ಛಿಸುತ್ತೇನೆ ಎಂದು ನಾನು ಸಭೆಯ ಆರಂಭದಲ್ಲೇ ತಿಳಿಸಿದೆ. ಈ ವಿಚಾರವಾಗಿ ಪಕ್ಷದ ನಾಯಕರಿಗೆ ನನ್ನ ಅಭಿಪ್ರಾಯವನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದೆ. ಆದರೆ ಅವರು ನನ್ನ ಪ್ರಸ್ತಾವವನ್ನು ಒಪ್ಪಲಿಲ್ಲ. ಪಕ್ಷದ ಬಹುಮತದ ತೀರ್ಮಾನವನ್ನು ಒಪ್ಪಿಕೊಂಡು, ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲು ನಾನು ಒಪ್ಪಿಕೊಂಡಿದ್ದೇನೆ’ ಎಂದು ಮಮತಾ ತಿಳಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಹೊಸ ದಾಖಲೆ ಸೃಷ್ಟಿಸಿದೆ.

‘ರಾಜ್ಯದಲ್ಲಿ ತುರ್ತುಪರಿಸ್ಥಿತಿಯಂಥ ಸನ್ನಿವೇಶ ಸೃಷ್ಟಿಸಿ ಲೋಕಸಭಾ ಚುನಾವಣೆಗಳನ್ನು ನಡೆಸಲಾಗಿದೆ. ಇಂಥ ಅವಮಾನಕಾರಿ ಸ್ಥಿತಿಯಲ್ಲಿ ನಾನು ಸರ್ಕಾರವನ್ನು ಮುನ್ನಡೆಸಬೇಕಾಗಿತ್ತು. ಚುನಾವಣಾ ಆಯೋಗದ ‘ಕೃಪೆ’ಯಿಂದಾಗಿ ನಾನು ಅಧಿಕಾರ ರಹಿತ ಮುಖ್ಯಮಂತ್ರಿಯಾಗಿದ್ದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT