ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಿ ಎಳೆದಾಡಿದ ಶಾಸಕರು

ಮಹಾರಾಷ್ಟ್ರ ವಿಧಾನಸಭೆ: ಸೇನಾ–ಬಿಜೆಪಿ ಶಾಸಕರ ಘರ್ಷಣೆ
Last Updated 17 ಡಿಸೆಂಬರ್ 2019, 19:34 IST
ಅಕ್ಷರ ಗಾತ್ರ

ನಾಗಪುರ: ರೈತರಿಗೆ ಸಹಾಯಧನ ನೀಡುವ ವಿಚಾರದ ಚರ್ಚೆಯ ವೇಳೆ, ಆಡಳಿತಾರೂಢ ಶಿವಸೇನಾ ಹಾಗೂ ಪ್ರತಿಪಕ್ಷ ಬಿಜೆಪಿಯ ಇಬ್ಬರು ಶಾಸಕರು ಪರಸ್ಪರ ಅಂಗಿಯ ಕಾಲರ್‌ ಹಿಡಿದು ಜಟಾಪಟಿ ನಡೆಸಿದ ಘಟನೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ, ಬಿಜೆಪಿ ಶಾಸಕ ಅಭಿಮನ್ಯು ಪವಾರ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಂದೆ ಬ್ಯಾನರ್ ಪ್ರದರ್ಶಿಸಲು ಮುಂದಾದರು. ಅಕಾಲಿಕ ಮಳೆಯಿಂದ ತೊಂದರೆಗೊಳಗಾಗಿರುವ ರೈತರ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಪರಿಹಾರ ನೀಡುವಂತೆ ಉದ್ಧವ್ ಠಾಕ್ರೆ ಅವರು ಈ ಹಿಂದೆ ಆಗ್ರಹಿಸಿದ್ದ ವರದಿಯು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯಯಲ್ಲಿ ಪ್ರಕಟವಾಗಿತ್ತು. ಆ ವರದಿಯ ಚಿತ್ರವಿದ್ದ ಬ್ಯಾನರ್‌ ಪ್ರದರ್ಶಿಸಲು ಅಭಿಮನ್ಯು ಯತ್ನಿಸಿದರು.

ಮುಖ್ಯಮಂತ್ರಿಯಾಗುವ ಮುನ್ನ ಠಾಕ್ರೆ ಅವರು ಸರ್ಕಾರದ ಮುಂದೆ ಇಟ್ಟಿದ್ದ ಬೇಡಿಕೆಯನ್ನು ಈಗ ಅವರಿಗೆ ನೆನಪಿಸುವುದು ತಮ್ಮ ಉದ್ದೇಶ ಎಂದು ಬಿಜೆಪಿ ಶಾಸಕ ಹೇಳಿದರು.

ಠಾಕ್ರೆ ಅವರ ಅಂದಿನ ಬೇಡಿಕೆಯನ್ನು ಜಾರಿಗೆ ತರುವಂತೆ ಸ್ಪೀಕರ್ ಆಸನದ ಮುಂದೆ ಜಮಾಯಿಸಿದ ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ವೇಳೆ ಸೇನಾ ಶಾಸಕ ಸಂಜಯ್ ಗಾಯಕ್‌ವಾಡ್ ಅವರು ಅಭಿಮನ್ಯು ಅವರಿಂದ ಬ್ಯಾನರ್‌ ಕಿತ್ತುಕೊಳ್ಳಲು ಮುಂದಾದರು. ಇಬ್ಬರೂ ಶಾಸಕರು ಪರಸ್ಪರ ಅಂಗಿ ಹಿಡಿದು ಎಳೆದಾಡಿಕೊಂಡರು.

ತಮ್ಮ ಆಸನಗಳಿಗೆ ಹಿಂದಿರುಗುವಂತೆ ಬಿಜೆಪಿ ಸದಸ್ಯರಿಗೆ ತಿಳಿಸಿದ ಸ್ಪೀಕರ್, ಕಲಾಪ ಮುಂದುವರಿಸಿದರು. ಸೇನಾ ಶಾಸಕರು ಬ್ಯಾನರ್ ಕಿತ್ತುಕೊಳ್ಳುವ ಯತ್ನ ಮುಂದುವರಿಸಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು. ಕಲಾಪವನ್ನು 30 ನಿಮಿಷ ಮುಂದೂಡಿದರು.

ಸದನ ಮತ್ತೆ ಸೇರಿದಾಗಲೂ ಪರಿಸ್ಥಿತಿ ಹಾಗೆಯೇ ಇತ್ತು. ಸ್ಪೀಕರ್ ನಾನಾ ಪಟೋಲೆ ಅವರು ಗದ್ದಲದ ಮಧ್ಯೆಯೇ ಕೆಲವು ಮಸೂದೆಗಳಿಗೆ ಅಂಗೀಕಾರ ಪಡೆದು, ಕಲಾಪವನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT