ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಿರ್ಮಿಸಿ, ಗಾಲ್ವಾನ್‌ ನದಿ ನೀರಿನ ಹರಿವಿಗೆ ತಡೆ ಹಾಕಿದ್ದ ಚೀನಾ

ವಾರದ ಹಿಂದಿನಿಂದಲೂ ಯಂತ್ರೋಪಕರಣಗಳಿಂದ ಕೆಲಸ ಮಾಡಿರುವುದು ಉಪಗ್ರಹ ಚಿತ್ರಗಳಿಂದ ಬಹಿರಂಗ
Last Updated 19 ಜೂನ್ 2020, 4:15 IST
ಅಕ್ಷರ ಗಾತ್ರ

ಸಿಂಗಪುರ/ನವದೆಹಲಿ:ಭಾರತ ಮತ್ತು ಚೀನಾ ನಡುವೆ ದಶಕಗಳಲ್ಲೇ ಅತಿದೊಡ್ಡ ಘರ್ಷಣೆ ನಡೆದಿರುವ ನಡುವೆಯೇ ಗಾಲ್ವಾನ್ ಕಣಿವೆಯ ಉಪಗ್ರಹ ಚಿತ್ರಗಳು ಲಭ್ಯವಾಗಿವೆ. ಕಣಿವೆಗೆ ಯಂತ್ರೋಪಕರಣ ಸಾಗಿಸಿರುವ ಚೀನಾ ಹಿಮಾಲಯ ಪರ್ವತಶ್ರೇಣಿಗಳನ್ನು ಕಡಿದಿರುವುದು, ಗಾಲ್ವಾನ್ ನದಿ ಪಾತ್ರದಲ್ಲಿ ವ್ಯತ್ಯಾಸ ಮಾಡಿ ನದಿ ಹರಿವನ್ನು ತಡೆಯಲು ಪ್ರಯತ್ನಿಸಿರುವುದು ಚಿತ್ರಗಳಿಂದ ತಿಳಿದು ಬಂದಿದೆ.

ಘರ್ಷಣೆ ನಡೆಯುವುದಕ್ಕೆ ಒಂದು ವಾರಕ್ಕೆ ಮೊದಲಿನಿಂದಲೂ ಗಾಲ್ವಾನ್ ಕಣಿವೆಯಲ್ಲಿ ಚೀನಾ ಈ ಕಾರ್ಯದಲ್ಲಿ ನಿರತವಾಗಿತ್ತು ಎನ್ನಲಾಗಿದ್ದು, ಈ ಕುರಿತು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

‘ಅರ್ಥ್‌ ಇಮ್ಯಾಜಿನ್ ಕಂಪನಿ ಪ್ಲಾನೆಟ್ ಲ್ಯಾಬ್ಸ್’ ಎಂಬ ಸಂಸ್ಥೆ ಈ ಉಪಗ್ರಹ ಚಿತ್ರಗಳನ್ನು ಸೆರೆಹಿಡಿದಿದೆ. ಚೀನಾ ಸೇನೆ ಭೂಪ್ರದೇಶವನ್ನು ಅಗೆದು, ಕಡಿದು, ರಸ್ತೆ ವಿಸ್ತರಣೆ ಮಾಡಿರುವುದು, ಬುಲ್ಡೋಜಾರ್‌ಗಳ ಮೂಲಕ ಗಾಲ್ವಾನ್‌ ನದಿಗೆ ಅಣೆಕಟ್ಟೆಯಂಥ ರಚನೆ ಮಾಡಿ ನೀರಿನ ಹರಿವನ್ನೂ ನಿಯಂತ್ರಿಸಿರುವುದೂ ಗೊತ್ತಾಗಿದೆ. ಕಣಿವೆಯಲ್ಲಿ ಮತ್ತು ನದಿಪಾತ್ರದಲ್ಲಿ ಚೀನಾ ಯಂತ್ರೋಪಕರಣಗಳು, ವಾಹನಗಳನ್ನು ನಿಯೋಜಿಸಿರುವುದು ಚಿತ್ರದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ.

‘ಈ ಭೂ ದೃಶ್ಯಗಳನ್ನು ಗಮನಿಸಿದರೆ, ಚೀನಾ ಕಣಿವೆಯಲ್ಲಿ ರಸ್ತೆಗಳನ್ನು ನಿರ್ಮಿಸುತ್ತಿರುವುದು ಮತ್ತು ನದಿಗೆ ಅಣೆಕಟ್ಟೆಯಂಥ ಮಾದರಿಯ ರಚನೆಗಳನ್ನು ಮಾಡಿ ನೀರಿನ ಹರಿವನ್ನು ತಡೆದಿರುವು ಗೊತ್ತಾಗುತ್ತಿದೆ’ ಎಂದು ಕ್ಯಾಲಿಫೋರ್ನಿಯಾದ ‘ಮಿಡಲ್‌ಬರಿ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ಪೂರ್ವ ಏಷ್ಯಾ ನಾನ್‌ಪ್ರೊಲಿಫರೇಷನ್ ಕಾರ್ಯಕ್ರಮ‘ದ ನಿರ್ದೇಶಕ ಜೆಫ್ರಿ ಲೂಯಿಸ್ ಹೇಳಿದ್ದಾರೆ.

‘ವಾಸ್ತವ ಗಡಿ ರೇಖೆಯ ಗುಂಟಾ ಎರಡೂ ಕಡೆಗಳಲ್ಲೂ ವಾಹನಗಳ ಜಮಾವಣೆ ಕಾಣಿಸುತ್ತಿವೆ. ಭಾರತದ ಕಡೆಯಲ್ಲಿ 30-40 ವಾಹನಗಳನ್ನು ಗುರುತಿಸಬಹುದು. ಆದರೆ, ಚೀನಾದ ಕಡೆ 100 ಕ್ಕೂ ಹೆಚ್ಚು ವಾಹನಗಳು ಕಾಣಿಸುತ್ತಿವೆ,’ ಎಂದೂ ಅವರು ತಿಳಿಸಿದ್ದಾರೆ.

ಸೋಮವಾರ ಗಾಲ್ವಾನ್‌ ಕಣಿವೆಯಲ್ಲಿ ಎರಡೂ ದೇಶಗಳ ನಡುವೆ ನಡೆದಿದ್ದ ಸಂಘರ್ಷದಲ್ಲಿ ಭಾರತದ ಕರ್ನಲ್‌ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು. ಆದರೆ, ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಜಾಹೋ ಲೀಜನ್‌ ತಿಳಿಸಿದ್ದಾರೆ. ಆದರೆ, ಘಟನೆ ನಡೆಯುವುದಕ್ಕೂ ವಾರಕ್ಕೆ ಮೊದಲಿನಿಂದಲೂ ಕಣಿವೆಯಲ್ಲಿ ಚೀನಾ ಸೇನೆಯ ಚಲನವಲನಗಳು ಉಪಗ್ರಹ ಚಿತ್ರಗಳಲ್ಲಿ ಪತ್ತೆಯಾಗಿದೆ.

ಲಡಾಕ್‌ನ ಗಾಲ್ವಾನ್‌ ಕಣಿವೆಯಲ್ಲಿ ಮೇ ಆರಂಭದಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಹೊಡೆದಾಟ ಸಂಭವಿಸಿತ್ತು. ಅಂದಿನಿಂದ ಇಂದಿನ ವರೆಗೆ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿದೆ. ಚೀನಾದ ಸೇನೆಯು ತನ್ನ ಭೂಪ್ರದೇಶ ಪ್ರವೇಶಿಸಿ, ತಾತ್ಕಾಲಿಕ ಸೇನಾ ನೆಲೆಗಳನ್ನು ಸ್ಥಾಪಿಸಿದೆ ಎಂದು ಭಾರತ ಆರೋಪಿಸುತ್ತಲೇ ಇದೆ. ಈ ಮಧ್ಯೆ ಸೋಮವಾರ ಘರ್ಷಣೆಯು ವಿಕೋಪಕ್ಕೆ ಹೋಗಿದ್ದು, ಭಾರತದ ಸೈನಿಕರು ಹತರಾಗಿದ್ದಾರೆ. 1967ರ ನಂತರ ಇದು ಭೀಕರ ಕಾಳಗ ಎನಿಸಿಕೊಂಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT