ಭಾನುವಾರ, ಜೂನ್ 26, 2022
28 °C
ರಫೇಲ್‌: ನ್ಯಾಯಾಲಯದ ಅಭಿಪ್ರಾಯವನ್ನು ತಪ್ಪಾಗಿ ಉದ್ಧರಿಸಿದ ಆರೋಪ

ಸ್ಪಷ್ಟನೆ: ರಾಹುಲ್‌ಗೆ ‘ಸುಪ್ರೀಂ’ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಫೇಲ್‌ ತೀರ್ಪು ಮರು ಪರಿಶೀಲನೆ ಕುರಿತು ತಾನು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ‘ತಪ್ಪಾಗಿ’ ಉಲ್ಲೇಖ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

ರಾಹುಲ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿ ಬಿಜೆಪಿಯ ಸಂಸದೆ ಮೀನಾಕ್ಷಿ ಲೇಕಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ಪೀಠವು ರಾಹುಲ್‌ಗೆ ಈ ಸೂಚನೆ ನೀಡಿದೆ.

ನ್ಯಾಯಾಂಗ ನಿಂದನೆ ಆರೋಪದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಒಪ್ಪಿದ ಪೀಠವು, ‘ರಾಹುಲ್‌ ಗಾಂಧಿ ಅವರು ಸಾರ್ವಜನಿಕವಾಗಿ ಹೇಳಿದ್ದಾರೆ ಎನ್ನಲಾದ ಅಭಿಪ್ರಾಯವನ್ನು ಈ ನ್ಯಾಯಾಲಯವು ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ಕೆಲವು ದಾಖಲೆಗಳನ್ನು ಪರಿಶೀಲಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತ್ತೇ ವಿನಾ ಬೇರೆ ಅಭಿಪ್ರಾಯವನ್ನು ವಕ್ತಪಡಿಸಿರಲಿಲ್ಲ ಎಂಬುದನ್ನೂ ಸ್ಪಷ್ಟಪಡಿಸುತ್ತೇವೆ. ನಮ್ಮ ಅಭಿಪ್ರಾಯವನ್ನು ಅವರು ‘ತಪ್ಪಾಗಿ’ ಉಲ್ಲೇಖ ಮಾಡಿದ್ದಾರೆ’ ಎಂದು ಕೋರ್ಟ್‌ ಹೇಳಿದೆ. ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಹಾಗೂ ಸಂಜೀವ್‌ ಖನ್ನಾ ಅವರು ಪೀಠದ ಇತರ ಇಬ್ಬರು ಸದಸ್ಯರಾಗಿದ್ದಾರೆ.

ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ಮುಂದಿನ ಸೋಮವಾರದೊಳಗೆ ಸ್ಪಷ್ಟನೆ ನೀಡಬೇಕು ಎಂದು ರಾಹುಲ್‌ ಅವರಿಗೆ ಸೂಚನೆ ನೀಡಿರುವ ನ್ಯಾಯಾಲಯ, ಏಪ್ರಿಲ್‌ 23ರಂದು ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.

ರಫೇಲ್‌ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಅಧಿಕೃತ ದಾಖಲೆಯಾಗಿ ಮಾಧ್ಯಮಗಳಿಗೆ ಸೋರಿಕೆಯಾಗಿರುವ ದಾಖಲೆಗಳನ್ನು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಇದಾದ ಬಳಿಕ, ಏ.10ರಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಕೋರ್ಟ್‌ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಬಳಸಿಕೊಂಡ ರಾಹುಲ್‌, ‘ರಫೇಲ್‌ ಒಪ್ಪಂದದಲ್ಲಿ ಮೋದಿ ಅವರು ಕಳ್ಳತನ ಮಾಡಿದ್ದಾರೆ ಎಂಬುದನ್ನು ನ್ಯಾಯಾಲಯವೇ ಒಪ್ಪಿದೆ’ ಎಂದಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದೆಹಲಿಯ ಬಿಜೆಪಿ ಸಂಸದೆ ಮೀನಾಕ್ಷಿ ಲೇಕಿ, ‘ರಾಜಕೀಯ ಉದ್ದೇಶಕ್ಕಾಗಿ ರಾಹುಲ್‌ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಕೋರ್ಟ್‌ನ ಬಾಯಿಗೆ ತುರುಕುವ ಮೂಲಕ ನ್ಯಾಯಾಂಗಕ್ಕೆ ಅವಮಾನ ಮಾಡಿದ್ದಾರೆ. ಅವರ ವಿರುದ್ದ ನ್ಯಾಯಾಂಗ ನಿಂದನೆಯ ವಿಚಾರಣೆ ನಡೆಸಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಈ ಅರ್ಜಿಯನ್ನು ಕೋರ್ಟ್‌ ವಿಚಾರಣೆಗೆ ಎತ್ತಿಕೊಂಡಿತ್ತು.

ಕೋರ್ಟ್‌ನ ಸೂಚನೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌, ‘ಕೋರ್ಟ್‌ಗೆ ಶೀಘ್ರದಲ್ಲೇ ಸ್ಪಷ್ಟನೆಯನ್ನು ನೀಡಲಾಗುವುದು’ ಎಂದಿದೆ.

ಸರಣಿ ಟ್ವೀಟ್‌: ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ಈ ನಿರ್ದೇಶನ ನೀಡಿರುವ ಬೆನ್ನಲ್ಲೇ ಕೇಂದ್ರದ ಸಚಿವ ಅರುಣ್‌ ಜೇಟ್ಲಿ ಅವರು ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ವಿರುದ್ಧ ಸರಣಿ ಟ್ವೀಟ್‌ ಮೂಲಕ ಟೀಕಾ ಪ್ರಹಾರ ಮಾಡಿದ್ದಾರೆ.

‘ರಾಹುಲ್‌ ಅವರ ಪ್ರಕಾರ ಮುಕ್ತ ವಾಕ್‌ ಸ್ವಾತಂತ್ರ್ಯದಲ್ಲಿ ಸುಳ್ಳು ಹೇಳುವ ಸ್ವಾತಂತ್ರ್ಯವೂ ಒಳಗೊಳ್ಳುತ್ತದೆ. ಆದರೆ ಭಾರತದ ಪ್ರಜಾಪ್ರಭುತ್ವವು ಅವರಿಗೆ (ಕುಟುಂಬ ರಾಜಕಾರಣದವರಿಗೆ) ಕೋರ್ಟ್‌ ತೀರ್ಪನ್ನು ಬರೆಯುವ ಸ್ವಾತಂತ್ರ್ಯವನ್ನು ಕೊಡುವುದಿಲ್ಲ. ರಾಹುಲ್‌ ಅವರು ಎಷ್ಟು ಆಳಕ್ಕೆ ಬೀಳುತ್ತಾರೋ ಅದರ ದುಪ್ಪಟ್ಟು ಎತ್ತರಕ್ಕೆ ನಾವು ಏರುತ್ತೇವೆ’ ಎಂದು ಜೇಟ್ಲಿ ಟ್ವೀಟ್‌ ಮಾಡಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಪ್ರಕಾಶ್‌ ಜಾವಡೇಕರ್‌, ‘ರಾಹುಲ್‌ ಗಾಂಧಿಯ ಸುಳ್ಳನ್ನು ಸುಪ್ರೀಂ ಕೋರ್ಟ್‌ ಬಯಲುಗೊಳಿಸಿದೆ. ಅವರು ಕ್ಷಮೆ ಯಾಚಿಸಬೇಕು ಎಂದು ದೇಶದ ಜನರು ನಿರೀಕ್ಷಿಸುತ್ತಾರೆ’ ಎಂದಿದ್ದಾರೆ.

ಮೋದಿ ಹೇಳಿಕೆ ಮೂಲಕ ಪ್ರತ್ಯುತ್ತರ?

‘ರಫೇಲ್‌ ಖರೀದಿ ವಿಚಾರದಲ್ಲಿ ನನಗೆ ನ್ಯಾಯಾಲಯ ನನ್ನನ್ನು ಆರೋಪಮುಕ್ತ ಮಾಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ನೀಡಿದ್ದ ಹೇಳಿಕೆಯನ್ನು ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ನೀಡಿರುವ ನೋಟಿಸ್‌ಗೆ ಪ್ರತ್ಯಸ್ತ್ರವಾಗಿ ಕಾಂಗ್ರೆಸ್‌ ಬಳಸುವ ಸಾಧ್ಯತೆ ಇದೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌, ‘ಸ್ಪಷ್ಟನೆ ನೀಡುವಂತೆ ಅವರು ಸೂಚಿಸಿದ್ದಾರೆ. ನಾವು ಸ್ಪಷ್ಟನೆ ಕೊಡುತ್ತೇವೆ. ಆದರೆ ‘ನನ್ನನ್ನು ಸುಪ್ರೀಂ ಕೋರ್ಟ್‌ ಆರೋಪಮುಕ್ತ ಮಾಡಿದೆ’ ಎಂಬ ಹೇಳಿಕೆಯನ್ನು ಮೋದಿ ಕೊಟ್ಟಿದ್ದರು ಎಂಬುದನ್ನೂ ನೆನಪಿಸಿಕೊಳ್ಳಿ’ ಎಂದಿದ್ದಾರೆ.

‘ರಾಹುಲ್‌ ಅವರ ಹೇಳಿಕೆಯನ್ನು ಬಿಜೆಪಿಯವರು ತಿರುಚಿದ್ದಾರೆ. ನ್ಯಾಯಾಲಯಕ್ಕೆ ಕಾಂಗ್ರೆಸ್‌ ಸಮಗ್ರ ಮತ್ತು ಪರಿಣಾಮಕಾರಿ ಸ್ಪಷ್ಟನೆಯನ್ನು ನೀಡಲಿದೆ’ ಎಂದು ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ.

***

ರಾಹುಲ್‌ ರಾಜಕೀಯ ಪ್ರಚಾರ ಉದ್ದೇಶಕ್ಕಾಗಿ ನ್ಯಾಯಾಲಯದ ತೀರ್ಪನ್ನು ‘ಸೃಷ್ಟಿಸಿದ್ದಾರೆ’. ವಾಕ್‌ ಸ್ವಾತಂತ್ರ್ಯ ಎಂದರೆ ಸುಳ್ಳು ಹೇಳಲು ಸ್ವಾತಂತ್ರ್ಯ ಎಂದು ಅರ್ಥವಲ್ಲ

–ಅರುಣ್‌ ಜೇಟ್ಲಿ, ಕೇಂದ್ರದ ಹಣಕಾಸು ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು