ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಕುರಿತು ಗಡ್ಕರಿ ಜೊತೆ ಚರ್ಚೆ: ‘ಸುಪ್ರೀಂ’

Last Updated 19 ಫೆಬ್ರುವರಿ 2020, 19:38 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಖರೀದಿ ಹಾಗೂ ಚಾರ್ಜಿಂಗ್‌ ಸೌಲಭ್ಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಲು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ನ್ಯಾಯಪೀಠ ಆಶಯ ವ್ಯಕ್ತಪಡಿಸಿದೆ.

ಎಲೆಕ್ಟ್ರಿಕ್ ವಾಹನಗಳ ನೀತಿ ಜಾರಿಮಾಡುವ ನಿರ್ಧಾರ ಪ್ರಶ್ನಿಸಿ ಸಿಪಿಐಎಲ್‌ ಎಂಬ ಸ್ವಯಂಸೇವಾ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸಿಜೆಐ ಬೊಬಡೆ ಈ ಆಶಯ ವ್ಯಕ್ತಪಡಿಸಿದರು. ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ, ಸೂರ್ಯಕಾಂತ ಈ ಪೀಠದಲ್ಲಿದ್ದಾರೆ.

‘ಪ್ರಸ್ತುತ ಬಳಕೆಯಲ್ಲಿರುವ ಇಂಧನದಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಸಮಸ್ಯೆ ರಾಷ್ಟ್ರ ರಾಜಧಾನಿ ಮಾತ್ರವಲ್ಲ ಇಡೀ ದೇಶವನ್ನೇ ಬಾಧಿಸುತ್ತಿದೆ. ಇನ್ನೊಂದೆಡೆ, ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೆ ಪರ್ಯಾಯ ಇಂಧನ ಬಳಸುವ ಬಗ್ಗೆ ಸಚಿವ ಗಡ್ಕರಿ ಮಾತನಾಡುತ್ತಿದ್ದಾರೆ. ಹೀಗಾಗಿ ಅವರೊಂದಿಗೆ ಸಂವಾದ ನಡೆಸಲು ಕೋರ್ಟ್‌ ಉತ್ಸುಕವಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎ.ಎನ್‌.ಎಸ್‌.ನಾಡಕರ್ಣಿ ಅವರಿಗೆ ಈ ಪ್ರಶ್ನೆ ಕೇಳಿದ ಸಿಜೆಐ ಬೊಬಡೆ, ‘ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಕೋರ್ಟ್‌ಗೆ ನೆರವಾಗುವ ದೃಷ್ಟಿಯಿಂದ ಸಚಿವರು ಬರುವರೇ’ ಎಂದರು.

ಈ ಮಾತಿಗೆ ಸಹಮತ ವ್ಯಕ್ತಪಡಿಸದ ನಾಡಕರ್ಣಿ, ‘ರಾಜಕಾರಣಿಗಳು ಕೋರ್ಟ್‌ಗೆ ಹಾಜರಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಒಂದು ವೇಳೆ ಸಚಿವರು ಸುಪ್ರೀಂಕೋರ್ಟ್‌ಗೆ ಹಾಜರಾದರೆ, ಇದೇ ವಿಷಯವನ್ನು ವಿರೋಧ ಪಕ್ಷಗಳು ರಾಜಕೀಯ ಉದ್ದೇಶ
ಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ’ ಎಂದರು.

‘ಅರ್ಜಿದಾರರ ಪರ ವಕೀಲ ಪ್ರಶಾಂತ ಭೂಷಣ್‌ ಸಹ ಒಬ್ಬ ರಾಜಕಾರಣಿ ಎಂಬುದು ಗೊತ್ತು. ಆದರೆ, ಸಚಿವರೊಂದಿಗೆ ಅವರು ವಾಗ್ವಾದ ಮಾಡಲ್ಲ’ ಎಂದು ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT