ಬುಧವಾರ, ನವೆಂಬರ್ 20, 2019
21 °C

ಹುದ್ದೆ ಸಂದರ್ಶನಕ್ಕೆ ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗೀಕರಣ ಸಲ್ಲದು: ಸುಪ್ರೀಂ

Published:
Updated:

ನವದೆಹಲಿ: ಯಾವುದೇ ಹುದ್ದೆಗೆ ಆಯ್ಕೆಯ ಸಂದರ್ಶನದ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳು (ಒಬಿಸಿ) ಎಂದು ವರ್ಗೀಕರಿಸಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಪ್ರತಿ ಅಭ್ಯರ್ಥಿಯೂ ಸಾಮಾನ್ಯ ವರ್ಗಕ್ಕೆ ಸೇರಿದವರು ಎಂದೇ ಪರಿಗಣಿಸಬೇಕು. ನಂತರ, ಕಾನೂನಿನ ಅನ್ವಯವಾಗುವ ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ಮೀಸಲಾತಿ ನೀಡಬೇಕು’ ಎಂದು ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್‌ ಮತ್ತು ಹೇಮಂತ್‌ ಗುಪ್ತಾ ಅವರ ಪೀಠ ಹೇಳಿದೆ.  ಮಂಡಲ್‌ ಪ್ರಕರಣದಲ್ಲಿ ನೀಡಿದ ತೀರ್ಪಿನ ಆಧಾರದಲ್ಲಿ ಈಗ ಈ ಆದೇಶ ನೀಡಲಾಗಿದೆ.

ಮೀಸಲಾತಿಗೆ ಅರ್ಹತೆ ಇರುವ ಅಭ್ಯರ್ಥಿಗೆ ಸಾಮಾನ್ಯ ವರ್ಗದಲ್ಲಿಯೇ ಕೆಲಸ ಸಿಗುವಷ್ಟು ಅಂಕಗಳು ಇದ್ದರೆ ಆ ವರ್ಗದಲ್ಲಿಯೇ ನೌಕರಿ ನೀಡಬೇಕು ಎಂಬ ನಿಲುವನ್ನು ಕೋರ್ಟ್‌ ಹೊಂದಿದೆ ಎಂದು ಪೀಠ ಹೇಳಿದೆ. 

ಸಾಮಾನ್ಯ ವರ್ಗದ ಅಭ್ಯರ್ಥಿಗಿಂತ, ಮೀಸಲಾತಿ ಅರ್ಹತೆ ಇರುವ ಅಭ್ಯರ್ಥಿಗೆ ಹೆಚ್ಚು ಅಂಕ ಇದ್ದರೆ ಅವರನ್ನು ಸಾಮಾನ್ಯ ಅಭ್ಯರ್ಥಿ ಎಂದೇ ಪರಿಗಣಿಸಬೇಕು ಎಂದು ವಿಕಾಸ್‌ ಸಂಖಾಲಾ ಮತ್ತು ವಿಕಾಸ್‌ ಕುಮಾರ್‌ ಅಗರ್‌ವಾಲ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಲಾಗಿದೆ. ವಯೋಮಿತಿ ಸಡಿಲಿಕೆ, ಕಡಿಮೆ ಅರ್ಹತಾ ಅಂಕಗಳು, ಅರ್ಜಿ ಶುಲ್ಕದ ವಿನಾಯಿತಿ ಇತ್ಯಾದಿ ವಿಶೇಷ ವಿನಾಯಿತಿ ಪಡೆದುಕೊಳ್ಳದಿದ್ದರೆ ಮಾತ್ರ ಇದು ಅನ್ವಯ ಎಂದು ಪೀಠವು ಸ್ಪಷ್ಟಪಡಿಸಿದೆ. 

ಹಿಮಾಚಲ ಪ್ರದೇಶ ವಿ.ವಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯನ್ನು ‍ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಆದೇಶ ನೀಡಿದೆ. 

ಪ್ರತಿಕ್ರಿಯಿಸಿ (+)