ಪುರೋಹಿತ್‌ಗೆ ಚಿತ್ರಹಿಂಸೆ: ಎಸ್‌ಐಟಿ ತನಿಖೆಗೆ ‘ಸುಪ್ರೀಂ’ ನಕಾರ

7

ಪುರೋಹಿತ್‌ಗೆ ಚಿತ್ರಹಿಂಸೆ: ಎಸ್‌ಐಟಿ ತನಿಖೆಗೆ ‘ಸುಪ್ರೀಂ’ ನಕಾರ

Published:
Updated:

ನವದೆಹಲಿ: ಮಾಲೆಗಾಂವ್‌ ಸ್ಫೋಟ ಪ್ರಕರಣದ ಆರೋಪಿ ಲೆ. ಕ. ಪ್ರಸಾದ್‌ ಶ್ರೀಕಾಂತ್‌ ಪುರೋಹಿತ್‌ ಅವರನ್ನು ಅಪಹರಿಸಿ ಅಕ್ರಮ ಬಂಧನದಲ್ಲಿ ಇರಿಸಿ ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕು ಎಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿದೆ.

ಈಗ ಈ ಅರ್ಜಿಗೆ ಮನ್ನಣೆ ನೀಡಿದರೆ ಅದು ಈಗಾಗಲೇ ನಡೆಯುತ್ತಿರುವ ವಿಚಾರಣೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಪ್ರಕರಣದ ತನಿಖೆ ನಡೆಸಬೇಕು ಎಂದು ಪುರೋಹಿತ್‌ ಅರ್ಜಿ ಸಲ್ಲಿಸಿದ್ದರು. 

ಈ ಅರ್ಜಿಯ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತ‍ಪಡಿಸುವುದಿಲ್ಲ ಎಂದು ಪೀಠ ಹೇಳಿದೆ. ಆದರೆ, ಪುರೋಹಿತ್‌ ಅವರು ತಮ್ಮ ಆಕ್ಷೇಪವನ್ನು ವಿಚಾರಣಾ ನ್ಯಾಯಾಲಯದ ಮುಂದೆ ಇರಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದೂ ತಿಳಿಸಿದೆ. 

ಪುರೋಹಿತ್‌ ಅವರು ಆಗಸ್ಟ್‌ 27ರಂದು ಅರ್ಜಿ ಸಲ್ಲಿಸಿದ್ದರು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಅಧಿಕಾರಿಗಳು ತಮ್ಮನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತಮಗೆ ಪರಿಹಾರ ನೀಡಬೇಕು ಎಂದು ಅವರು ಕೇಳಿದ್ದಾರೆ. 

ಗೃಹ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ಆರ್‌.ವಿ.ಎಸ್‌. ಮಣಿ ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನ ಮತ್ತು 2006–2010ರ ಅವಧಿಯಲ್ಲಿ ಹಿಂದೂ ಭಯೋತ್ಪಾದನೆಗೆ ಸಂಬಂಧಿಸಿದ ಪುಸ್ತಕವೊಂದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ರಾಜಕೀಯ ಕಾರಣಗಳಿಗಾಗಿ ಮತ್ತು ಹಿಂದೂ ಭಯೋತ್ಪಾದನೆಯ ಪರಿಕಲ್ಪನೆಯನ್ನು ಸಾಬೀತು ಮಾಡುವುದಕ್ಕಾಗಿ ಹಿಂದಿನ ಸರ್ಕಾರವು ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಿದೆ ಎಂದು ಪುರೋಹಿತ್‌ ವಾದಿಸಿದ್ದಾರೆ.  

2008ರ ಸೆ. 29ರಂದು ಮಾಲೆಗಾಂವ್‌ನಲ್ಲಿ ನಡೆದ ಸ್ಫೋಟದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಪುರೋಹಿತ್‌ ಅವರನ್ನು ಬಂಧಿಸಲಾಗಿತ್ತು. ಅವರು ಒಂಬತ್ತು ವರ್ಷ ಸೆರೆಮನೆಯಲ್ಲಿದ್ದರು. ಸುಪ್ರೀಂ ಕೋರ್ಟ್‌ ಕಳೆದ ವರ್ಷ ಅವರಿಗೆ ಜಾಮೀನು ನೀಡಿತ್ತು. 

ಆರೋಪನಿಗದಿಗೆ ತಡೆ ಇಲ್ಲ

ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ, ಪುರೋಹಿತ್‌ ವಿರುದ್ಧ ವಿಚಾರಣಾ ನ್ಯಾಯಾಲಯವು ಆರೋಪನಿಗದಿ ಮಾಡುವುದಕ್ಕೆ ತಡೆ ನೀಡಬೇಕು ಎಂಬ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿದೆ. 

ಆದರೆ, ಈ ಹಿಂದೆ ಸುಪ್ರೀಂ ಕೋರ್ಟ್‌ ನೀಡಿದ ಆದೇಶ ಮತ್ತು ಪುರೋಹಿತ್‌ ವಿಚಾರಣೆಗೆ ಅನುಮತಿ ನೀಡಿಕೆ ಕಾನೂನುಬದ್ಧವೇ ಎಂಬ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ. ವಿಚಾರಣಾ ನ್ಯಾಯಾಲಯವು ಬುಧವಾರ ಆರೋಪ ನಿಗದಿ ಮಾಡುವ ನಿರೀಕ್ಷೆ ಇದೆ. 

ತಮ್ಮ ವಿರುದ್ಧ ತನಿಖೆಗೆ ಸರ್ಕಾರ ನೀಡಿದ ಅನುಮತಿಯು ಕಾನೂನುಬದ್ಧವಲ್ಲ. ಈ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಹಾಗಾಗಿ ಆರೋಪ ನಿಗದಿಗೆ ಅವಕಾಶ ಕೊಡಬಾರದು ಎಂದು ಪುರೋಹಿತ್‌ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. ಪುರೋಹಿತ್‌ ಅವರ ವಿರುದ್ಧ ತನಿಖೆ ಆರಂಭವಾದಾಗ ಅವರು ಸೇನೆಯ ಅಧಿಕಾರಿಯಾಗಿದ್ದರು. ಹಾಗಾಗಿ ಅವರ ವಿರುದ್ಧದ ತನಿಖೆಗೆ ಸರ್ಕಾರದ ಅನುಮತಿ ಅಗತ್ಯವಾಗಿತ್ತು. 

 

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !