ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಹರಡುವಿಕೆ ಸ್ವರೂಪ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದ ವಿಜ್ಞಾನಿಗಳು

Last Updated 9 ಜೂನ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಸೋಂಕುರೋಗಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಸೋಂಕು ಹರಡುವುದರ ಬಗ್ಗೆ ಅರಿವು ಇಲ್ಲದಿರುವುದರಿಂದಲೇ ದೆಹಲಿ, ಮುಂಬೈ, ಚೆನ್ನೈನಂತಹ ನಗರಗಳಲ್ಲಿ ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿದ್ದರೂ ಸರ್ಕಾರ ಅದನ್ನು ಘೋಷಿಸುತ್ತಿಲ್ಲ ಎಂದು ಸೋಂಕುರೋಗಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ದೇಶದಲ್ಲಿ ಮಾರ್ಚ್‌ನಿಂದಲೇ ಸೋಂಕು ಸಮುದಾಯಕ್ಕೆ ಹರಡಿದೆ. ಸೋಂಕು ಈಗ ಮೂರನೇ ಹಂತವನ್ನು ತಲುಪಿದೆ’ ಎಂದು ಭಾರತದಲ್ಲಿ ಕೋವಿಡ್ ಹರಡುವಿಕೆಯ ಮೇಲೆ ನಿಗಾ ಇರಿಸಿರುವ ಹಲವು ವಿಜ್ಞಾನಿಗಳು ಹೇಳಿದ್ದಾರೆ.

‘ಸೋಂಕು ಹರಡುವಿಕೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿರುವುದರಿಂದಲೇ, ಸಮುದಾಯಕ್ಕೆ ಸೋಂಕು ಹರಡಿರುವುದರ ಬಗ್ಗೆ ಸರ್ಕಾರ ಮೌನವಾಗಿದೆ’ ಎಂದು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್‌ನ ವೈರಾಣುವಿಜ್ಞಾನ ಪ್ರಾಧ್ಯಾಪಕ ಟಿ.ಜೇಕಬ್ ಜಾನ್ ಹೇಳಿದ್ದಾರೆ.

‘ಅಪರಿಚಿತ ವ್ಯಕ್ತಿ ಸೋಂಕು ಹರಡಿದ್ದಾನೆ ಎಂದು ದಾಖಲಿಸಲಾಗುತ್ತಿದೆ. ಆದರೆ, ಸೋಂಕು ಹರಡಿರುವುದರ ಎಲ್ಲಾ ಮೂಲಗಳನ್ನು ಅರಿತಿದ್ದೇವೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಇದೂ ಸೋಂಕು ಹರಡುವಿಕೆಯ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ ಎಂಬುದನ್ನು ಸೂಚಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಐಸಿಎಂಆರ್ ನಡೆಸಿರುವ ಸಮೀಕ್ಷೆಯ ವರದಿ ಮತ್ತು ದತ್ತಾಂಶಗಳೂ ಇದನ್ನೇ ಸೂಚಿಸುತ್ತವೆ. ಆದರೆ, ಈ ಸಮೀಕ್ಷೆಯ ವರದಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.ದೇಶದ 60 ಜಿಲ್ಲೆಗಳಲ್ಲಿ ಮತ್ತು 10 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು.

ದೆಹಲಿ, ಮುಂಬೈ ಮತ್ತು ಕೋಲ್ಕತ್ತದ ಹಲವು ಪ್ರದೇಶಗಳಲ್ಲಿ ಈಗಾಗಲೇ ವರದಿಯಾಗಿರುವುದಕ್ಕಿಂತ 100–200 ಪಟ್ಟು ಹೆಚ್ಚು ಪ್ರಕರಣಗಳನ್ನು ಈ ಸಮೀಕ್ಷೆ ಗುರುತಿಸಿದೆ. ಕೆಲವು ಪ್ರದೇಶಗಳ ಒಟ್ಟು ಜನಸಂಖ್ಯೆಯಲ್ಲಿ ಶೇ 15–30ರಷ್ಟು ಜನರು ಸೋಂಕಿನ ಸಂಪರ್ಕಕ್ಕೆ ಬಂದಿರುವುದದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಸರ್ಕಾರ ಹೇಳುತ್ತಿರುವುದಕ್ಕಿಂತ ವ್ಯಾಪಕವಾಗಿ ಸೋಂಕು ಹರಡಿದೆ ಮತ್ತು ಅದನ್ನು ತಡೆಯುವ ಎಲ್ಲಾ ಕಾರ್ಯತಂತ್ರಗಳೂ ವಿಫಲವಾಗಿವೆ ಎಂಬುದನ್ನು ಇದು ಸೂಚಿಸುತ್ತದೆ.

‘ಇಂತಹ ಸೋಂಕು ಈ ಸ್ವರೂಪದಲ್ಲಿಯೇ ಹರಡುತ್ತದೆ. ಇದನ್ನು ಸರ್ಕಾರದ ವೈಫಲ್ಯ ಎಂದು ಪರಿಗಣಿಸಲಾಗದು. ಆದರೆ, ಇದು ತನ್ನದೇ ವೈಫಲ್ಯ ಎಂದು ಗುರುತಿಸಬಹುದು ಎಂಬ ಕಾರಣಕ್ಕೆ ಸಮುದಾಯಕ್ಕೆ ಹರಡಿರುವುದನ್ನು ಸರ್ಕಾರ ಘೋಷಿಸದೇ ಇರಬಹುದು’ ಎನ್ನುತ್ತಾರೆ ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯೋಲಜಿಯ ವೈಜ್ಞಾನಿಕ ಸಲಹಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಮುಲಿಯಿಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT