ಬುಧವಾರ, ಜನವರಿ 22, 2020
28 °C

370ನೇ ವಿದ್ಧಿ ರದ್ದುಪಡಿಸಿದ್ದು ಐತಿಹಾಸಿಕ ಹೆಜ್ಜೆ: ಜನರಲ್‌ ನರವಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯನ್ನು ರದ್ದು ಪಡಿಸಿರುವುದು ‘ಐತಿಹಾಸಿಕ ಹೆಜ್ಜೆ’ ಎಂದು ಬಣ್ಣಿಸಿರುವ ಸೇನೆಯ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರು, ಈ ಕ್ರಮದಿಂದ ನೆರೆ ರಾಷ್ಟ್ರದವರಿಗೆ ಮತ್ತು ಇವರೊಟ್ಟಿಗೆ ಸೇರಿ ಪರೋಕ್ಷ ಯುದ್ಧ ಮಾಡುವವರ ದುಸ್ಸಾಹಸಕ್ಕೆ ಅಡ್ಡಿಪಡಿಸಿದೆ ಎಂದು ಹೇಳಿದ್ದಾರೆ.

ಇಲ್ಲಿನ ಕಾರ್ಯಪ್ಪ ಮೈದಾನದಲ್ಲಿ ಬುಧವಾರ ನಡೆದ 72ನೇ ಸೇನಾ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯನ್ನು ಎಳ್ಳಷ್ಟೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

‘ಭಯೋತ್ಪಾದನೆಯನ್ನು ಉತ್ತೇಜಿಸುವವರು ಮತ್ತು ಉಗ್ರರನ್ನು ಸಮರ್ಥವಾಗಿ ಎದುರಿಸಲು ನಮಲ್ಲಿ ಹಲವು ಆಯ್ಕೆಗಳಿವೆ. ಅವುಗಳನ್ನು ಬಳಸಲು ನಾವು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ’ ಎಂದು ಹೇಳಿರುವ ಅವರು, 370ನೇ ವಿಧಿ ರದ್ದಾದ ನಂತರ ದೇಶವು ಕೆಲವು ಭದ್ರತಾ ಸವಾಲುಗಳನ್ನು ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.

‘ಪರೋಕ್ಷ ಯುದ್ಧ ಮಾತ್ರವಲ್ಲದೇ ಇತರೆ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ಗಡಿ ನಿಯಂತ್ರಣ ರೇಖೆ ಅಥವಾ ಗಡಿ ವಾಸ್ತವ ರೇಖೆಯಲ್ಲಿ ಭದ್ರತಾ ಪಡೆಗಳು ಹೆಚ್ಚು ಸಕ್ರಿಯ ಮತ್ತು ಸನ್ನದ್ಧ ರೀತಿಯಲ್ಲಿವೆ’ ಎಂದು ಹೇಳಿದ ಅವರು, ಉತ್ತರದ ಗಡಿಯಲ್ಲಿ (ಚೀನಾ ಗಡಿ) ಪರಿಸ್ಥಿತಿ ಶಾಂತಿಯುತವಾಗಿದೆ ಎಂದಿದ್ದಾರೆ.

‘ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಇಂದು ನಾವು ನೆನಪಿಸಿಕೊಳ್ಳುತ್ತೇವೆ. ಇದು ಮುಂಬರುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ’ ಎಂದ ನರವಣೆ, ಕಳೆದ ವಾರ ಸಿಯಾಚಿನ್‌ಗೆ ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿದರು. ಕೆಲವು ದಿನಗಳ ಹಿಂದೆ ಹಿಮಕುಸಿತದಲ್ಲಿ ಕೆಲವು ಯೋಧರು ಹುತಾತ್ಮರಾಗಿದ್ದಾರೆ. ಅವರ ತ್ಯಾಗವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಂತರ ನಡೆದ ಸೇನಾ ಮೆರವಣಿಗೆಯಲ್ಲಿ ಧನುಷ್‌ ಮತ್ತು ಕೆ–ವಜ್ರಾ ಗನ್‌ ವ್ಯವಸ್ಥೆಯನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

ಟ್ವೀಟ್‌

‘ಭಾರತೀಯ ಸೇನೆಯು ಭಾರತ ಮಾತೆಯ ಹೆಮ್ಮೆಯ ಪ್ರತೀಕ. ಯೋಧರ ಶೌರ್ಯ, ಧೈರ್ಯಕ್ಕೆ ನಾನು ವಂದಿಸುತ್ತೇನೆ. ಈ ಸಂದರ್ಭದಲ್ಲಿ ಯೋಧರಿಗೆ ಶುಭಾಶಯ ಹೇಳಲು ಸಂತೋಷವೆನಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು