ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ವರ್ಷ: ಸರ್ಕಾರ–ವಿಪಕ್ಷ ಸಂಘರ್ಷ

ನೋಟು ರದ್ದತಿ: ಸಮರ್ಥಿಸಿಕೊಂಡ ಅರುಣ್‌ ಜೇಟ್ಲಿ, ಗಾಯ ಇನ್ನೂ ಆಳ ಎಂದ ಮನಮೋಹನ್‌ ಸಿಂಗ್‌
Last Updated 8 ನವೆಂಬರ್ 2018, 19:00 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಭಾರಿ ಸಂಚಲನಕ್ಕೆ ಕಾರಣವಾದ ನೋಟು ರದ್ದತಿ ನಡೆದು ಎರಡು ವರ್ಷಗಳಾಗಿವೆ. ಈ ಸಂದರ್ಭದಲ್ಲಿ, ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಕ್ರಮದ ವಿರುದ್ಧ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿವೆ.

ನೋಟು ರದ್ದತಿ ಕ್ರಮವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಈ ಕ್ರಮದಿಂದಾಗಿ ಭಾರತದ ಅರ್ಥ ವ್ಯವಸ್ಥೆ ಕ್ರಮಬದ್ಧಗೊಂಡಿತು ಎಂದು ಕೇಂದ್ರದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ.

ನೋಟು ರದ್ದತಿ ಉಂಟು ಮಾಡಿದ ಗಾಯಗಳು ಸಮಯ ಕಳೆದಂತೆ ಹೆಚ್ಚು ಹೆಚ್ಚು ಢಾಳಾಗಿ ಕಾಣಿಸುತ್ತಿವೆ. ಸರ್ಕಾರದ ಆರ್ಥಿಕ ದುಸ್ಸಾಹಸ ದೇಶವನ್ನು ಹೇಗೆ ಧ್ವಂಸಗೊಳಿಸಿತು ಎಂಬುದನ್ನು ಎರಡನೇ ವರ್ಷದ ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

ಇಂತಹ ಅಸಾಂಪ್ರದಾಯಿಕ ಮತ್ತು ಅಲ್ಪಾವಧಿ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವುದರಿಂದ ಸರ್ಕಾರ ದೂರ ಇರಬೇಕು. ಅರ್ಥ ವ್ಯವಸ್ಥೆಯನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಬಾರದು ಎಂದು ಸಿಂಗ್‌ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನೋಟು ರದ್ದತಿಯು ದುರದೃಷ್ಟಕರ ಮತ್ತು ವಿವೇಕರಹಿತ ಕ್ರಮ ಎಂದು ಸಿಂಗ್‌ ಬಣ್ಣಿಸಿದ್ದಾರೆ. ಅರ್ಥವ್ಯವಸ್ಥೆ ಮತ್ತು ಸಮಾಜದ ಮೇಲೆ ಇದು ಉಂಟು ಮಾಡಿದ ಪರಿಣಾಮ ಈಗ ಎಲ್ಲರ ಕಣ್ಣ ಮುಂದೆಯೇ ಇದೆ ಎಂದಿದ್ದಾರೆ.

‘ಕಾಲ ಬಹುದೊಡ್ಡ ಉಪಶಮನಕಾರಿ ಗುಣ ಹೊಂದಿದೆ ಎಂದು ಹೇಳಲಾಗುತ್ತದೆ. ದುರದೃಷ್ಟವೆಂದರೆ, ನೋಟು ರದ್ದತಿ ವಿಚಾರದಲ್ಲಿ ಕಾಲ ಕಳೆದಂತೆ ಗಾಯಗಳು ಇನ್ನಷ್ಟು ದೊಡ್ಡದಾಗಿ ಕಾಣಿಸಿಕೊಳ್ಳುತ್ತಿವೆ’ ಎಂದು ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ಜಾತಿ, ಧರ್ಮ, ಲಿಂಗ, ವಯಸ್ಸು ಯಾವ ಭೇದವನ್ನೂ ಎಣಿಸದೆ ಪ್ರತಿ ವ್ಯಕ್ತಿಯ ಮೇಲೆಯೂ ಇದು ಪರಿಣಾಮ ಬೀರಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತದ ಅರ್ಥ ವ್ಯವಸ್ಥೆಯ ಆಧಾರ ಸ್ತಂಭಗಳೇ ಆಗಿರುವ ಸಣ್ಣ ಮತ್ತು ಮಧ್ಯಮ ವ್ಯಾಪಾರ ಈಗಲೂ ಚೇತರಿಸಿಕೊಂಡಿಲ್ಲ. ಇದು ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಯುವ ಜನರಿಗೆ ಉದ್ಯೋಗ ಸೃಷ್ಟಿಸಲು ಅರ್ಥ ವ್ಯವಸ್ಥೆಯು ಒದ್ದಾಡುತ್ತಿದೆ.

ರೂಪಾಯಿ ಅಪಮೌಲ್ಯಗೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದೆ. ಹಾಗಾಗಿ ನೋಟು ರದ್ದತಿಯ ಒಟ್ಟು ಪರಿಣಾಮ ಇನ್ನಷ್ಟೇ ಅನುಭವಕ್ಕೆ ಬರಬೇಕಿದೆ ಎಂದು ಅರ್ಥಶಾಸ್ತ್ರಜ್ಞರೂ ಆಗಿರುವ ಸಿಂಗ್ ವಿವರಿಸಿದ್ದಾರೆ.

**

ಭ್ರಷ್ಟಾಚಾರ ನಿಗ್ರಹಕ್ಕೆ ಆಕ್ರೋಶ ಏಕೆ?: ಕಾಂಗ್ರೆಸ್‌ಗೆ ಬಿಜೆಪಿ ಹತ್ತು ಪ್ರಶ್ನೆಗಳು

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಭ್ರಷ್ಟಾಚಾರ ವಿರೋಧಿಯಾದ ಎಲ್ಲ ಕ್ರಮಗಳನ್ನು ಕಾಂಗ್ರೆಸ್‌ ಪಕ್ಷವು ವಿರೋಧಿಸುತ್ತಿರುವುದು ಯಾಕೆ ಎಂದು ಆಡಳಿತಾರೂಢ ಬಿಜೆಪಿ ಪ್ರಶ್ನಿಸಿದೆ. ಜಿಡಿಪಿ (ಒಟ್ಟು ದೇಶೀ ಉತ್ಪನ್ನ) ಏರುತ್ತಲೇ ಇದ್ದರೂ ಅದನ್ನು ಒಪ್ಪಿಕೊಳ್ಳದೆ ಎಲ್ಲವನ್ನೂ ಕಾಂಗ್ರೆಸ್‌ ನಿರಾಕರಿಸುತ್ತಿದೆ ಎಂದು ಆರೋಪಿಸಿದೆ. ಅಷ್ಟೇ ಅಲ್ಲದೆ, ಕಾಂಗ್ರೆಸ್‌ ಪಕ್ಷದ ಮುಂದೆ ಹತ್ತು ಪ್ರಶ್ನೆಗಳನ್ನೂ ಇಟ್ಟಿದೆ.

ನೋಟು ರದ್ದತಿಯನ್ನು ಮನಮೋಹನ್‌ ಸಿಂಗ್‌ ಅವರು ತೀವ್ರವಾಗಿ ಟೀಕಿಸಿದ್ದಕ್ಕೆ ಬಿಜೆಪಿ ಹೀಗೆ ಪ್ರತಿಕ್ರಿಯೆ ನೀಡಿದೆ.

ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸಿದ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಜಮೀನು, ನಗದು ಮತ್ತು ವಿದೇಶಿ ಬ್ಯಾಂಕ್‌ ಖಾತೆಗಳು ಒಳಗೊಂಡ ಭಾರಿ ಭ್ರಷ್ಟಾಚಾರ ಆರೋಪದಲ್ಲಿ ತನಿಖಾ ಸಂಸ್ಥೆಗಳ ನಿಗಾದಲ್ಲಿ ಚಿದಂಬರಂ ಇದ್ದಾರೆ ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್‌ಗೆ ಬಿಜೆಪಿ ಹತ್ತು ಪ್ರಶ್ನೆಗಳು

ತೆರಿಗೆ ನೆಲೆಯನ್ನು ವಿಸ್ತರಿಸಿದ ದಿಟ್ಟ ಕ್ರಮವನ್ನು ವಿರೋಧಿಸುವ ಕಾಂಗ್ರೆಸ್‌ ಯಾವ ರೀತಿಯ ರಾಜಕಾರಣ ಮಾಡುತ್ತಿದೆ ಮತ್ತು ಯಾಕೆ ಅಭಿವೃದ್ಧಿ ವಿರೋಧಿ ಮನಸ್ಥಿತಿ ಹೊಂದಿದೆ?

ಕೇಂದ್ರ ಸರ್ಕಾರದ ಭ್ರಷ್ಟಾಚಾರ ವಿರೋಧಿ ಕ್ರಮಗಳ ವಿರುದ್ಧ ಪ್ರತಿಭಟನೆ ಕಾಂಗ್ರೆಸ್‌ಗೆ ಯಾಕೆ ಇಷ್ಟ?

ಎಲ್ಲೆಲ್ಲಿ ಕಪ್ಪುಹಣ ಇದೆಯೋ ಅಲ್ಲೆಲ್ಲ ಕಾಂಗ್ರೆಸ್‌ ಪಕ್ಷವೂ ಇರುವುದು ಯಾಕೆ?

ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣ ನಿರ್ಮೂಲನೆಗೆ ಕೈಗೊಂಡ ಒಂದಾದರೂ ಕಠಿಣ ಕ್ರಮವನ್ನು ಹೆಸರಿಸಲು ಕಾಂಗ್ರೆಸ್‌ಗೆ ಸಾಧ್ಯವೇ?

ಜಿಡಿಪಿ ಪ್ರಗತಿಯನ್ನು ನೋಡದೆ ಸದಾ ನಿರಾಕರಣೆಯ ಲೋಕದಲ್ಲಿ ಕಾಂಗ್ರೆಸ್ ಇರುವುದು ಯಾಕೆ?

ಸುಲಲಿತ ವ್ಯಾಪಾರ ರ್‍ಯಾಂಕಿಂಗ್‌ ಮತ್ತು ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತದ ಸ್ಥಾನ ಏರಿಕೆಯನ್ನು ಕಾಂಗ್ರೆಸ್‌ ಯಾಕೆ ಗಮನಿಸುತ್ತಿಲ್ಲ?

ಭಾರತದ ಆರ್ಥಿಕ ಸಾಮರ್ಥ್ಯಕ್ಕೆ ಜಾಗತಿಕ ಮಟ್ಟದಲ್ಲಿ ದೊರೆಯುತ್ತಿರುವ ಮನ್ನಣೆಯನ್ನು ಯಾಕೆ ಗುರುತಿಸುತ್ತಿಲ್ಲ?

ತೆರಿಗೆ ಲೆಕ್ಕಪತ್ರ ಸಲ್ಲಿಕೆ ಕಳೆದ ಎರಡು ವರ್ಷಗಳಲ್ಲಿ ಎರಡು ಕೋಟಿಯಷ್ಟು ಏರಿಕೆಯಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ ಪಕ್ಷವು ನೋಟು ರದ್ದತಿಯನ್ನು ವಿರೋಧಿಸುತ್ತಿದೆಯೇ?

ಕಾಂಗ್ರೆಸ್‌ ಪಕ್ಷವು ಈಗ ಸಣ್ಣ ವ್ಯಾಪಾರವನ್ನು ನೆನಪಿಸಿಕೊಳ್ಳುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಒಮ್ಮೆಯಾದರೂ ಈ ಬಗ್ಗೆ ಯೋಚನೆ ಮಾಡಿದ್ದು ಇದೆಯೇ? ತೆರಿಗೆ ಭಯೋತ್ಪಾದನೆ, ದಾಳಿಗಳು ಮತ್ತು ಸ್ವೇಚ್ಛೆಯ ನೀತಿಗಳನ್ನು ಬಿಟ್ಟರೆ ಸಣ್ಣ ವ್ಯಾಪಾರಕ್ಕೆ ಕಾಂಗ್ರೆಸ್‌ ಪಕ್ಷ ಮಾಡಿದ್ದಾದರೂ ಏನು?

ಜಾಗತಿಕವಾಗಿ ಭಾರತದ ಹಿರಿಮೆ ಹೆಚ್ಚಾದಾಗಲೆಲ್ಲ ದೇಶವನ್ನು ಕೀಳಾಗಿ ತೋರಿಸಲು ಮತ್ತು ಜನರನ್ನು ತಪ್ಪು ದಾರಿಗೆಳೆದು ನಿರಾಶಾದಾಯಕ ಪರಿಸ್ಥಿತಿ ಸೃಷ್ಟಿಸಲು ಕಾಂಗ್ರೆಸ್‌ ಪ್ರಯತ್ನಿಸುವುದು ಯಾಕೆ?

**

ನೋಟು ಜಪ್ತಿಯೇ ಗುರಿ ಆಗಿರಲಿಲ್ಲ

ನೋಟು ರದ್ದತಿಯಿಂದಾಗಿ ದೇಶದ ಅರ್ಥವ್ಯವಸ್ಥೆ ಕ್ರಮಬದ್ಧಗೊಂಡಿದೆ, ತೆರಿಗೆ ನೆಲೆ ವಿಸ್ತಾರವಾಗಿದೆ, ಅದರ ಪರಿಣಾಮವಾಗಿ ಬಡತನ ನಿರ್ಮೂಲನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಸಂಪನ್ಮೂಲ ದೊರಕಿದೆ ಎಂದು ಅರುಣ್‌ ಜೇಟ್ಲಿ ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯ ಪ್ರಕಟಿಸಿರುವ ಜೇಟ್ಲಿ ಅವರು ನೋಟು ರದ್ದತಿಯ ಪ್ರಯೋಜನಗಳನ್ನು ವಿವರಿಸಿದ್ದಾರೆ. ಎನ್‌ಡಿಎ ಸರ್ಕಾರದ ನಾಲ್ಕು ವರ್ಷಗಳ ಆಳ್ವಿಕೆಯಲ್ಲಿ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸುವವರ ಸಂಖ್ಯೆ 6.86 ಕೋಟಿಗೆ ಏರಿಕೆಯಾಗಿದೆ. 2014ರ ಮೇಯಲ್ಲಿ ಇದು 3.8 ಕೋಟಿಯಷ್ಟೇ ಇತ್ತು. ಸರ್ಕಾರದ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವ ಹೊತ್ತಿಗೆ ಇದು ಖಂಡಿತವಾಗಿಯೂ ದ್ವಿಗುಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಚಲಾವಣೆಯಲ್ಲಿದ್ದ ಅಷ್ಟೂ ಹಣ ನೋಟು ರದ್ದತಿಯ ಬಳಿಕ ಬ್ಯಾಂಕುಗಳಿಗೆ ಮರಳಿದೆ. ಹಾಗಾಗಿ ಕಪ್ಪುಹಣ ನಿರ್ಮೂಲನೆಗಾಗಿ ಕೈಗೊಂಡ ಕ್ರಮ ದಯನೀಯ ವೈಫಲ್ಯ ಕಂಡಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಜೇಟ್ಲಿ ಅಲ್ಲಗಳೆದಿದ್ದಾರೆ. ಇದೊಂದು ತಪ್ಪು ಗ್ರಹಿಕೆ, ನೋಟುಗಳನ್ನು ಜಪ್ತಿ ಮಾಡುವುದು ನೋಟು ರದ್ದತಿಯ ಉದ್ದೇಶ ಆಗಿರಲೇ ಇಲ್ಲ ಎಂದು ಅವರು ವಾದಿಸಿದ್ದಾರೆ.

‘ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸುವುದು, ಹಣ ಇದ್ದವರು ತೆರಿಗೆ ಪಾವತಿಸುವಂತೆ ಮಾಡುವುದು ನೋಟು ರದ್ದತಿಯ ಉದ್ದೇಶಗಳಾಗಿದ್ದವು. ಭಾರತವು ನಗದು ವ್ಯವಸ್ಥೆಯಿಂದ ಡಿಜಿಟಲ್‌ ವ್ಯವಸ್ಥೆಗೆ ವರ್ಗಾವಣೆಯಾಗಲು ಇಡೀ ವ್ಯವಸ್ಥೆಯನ್ನು ನಡುಗಿಸುವುದು ಅನಿವಾರ್ಯವಾಗಿತ್ತು. ಸಹಜವಾಗಿಯೇ, ಸರ್ಕಾರದ ಆದಾಯ ಮತ್ತು ತೆರಿಗೆ ನೆಲೆ ವಿಸ್ತರಣೆಯಾಗಿದೆ’ ಎಂದು ಅವರು ಹೇಳಿದ್ದಾರೆ.

**

ನಗದಿನಿಂದ ಡಿಜಿಟಲ್‌ ವಹಿವಾಟಿಗೆ ಬದಲಾಗಲು ವ್ಯವಸ್ಥೆಯನ್ನು ನಡುಗಿಸಬೇಕಿತ್ತು. ಪರಿಣಾಮವಾಗಿ ತೆರಿಗೆ ನೆಲೆ ವಿಸ್ತಾರವಾಗಿದೆ ಮತ್ತು ತೆರಿಗೆ ಆದಾಯ ಹೆಚ್ಚಳವಾಗಿದೆ.

–ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

**

ನೋಟು ರದ್ದತಿಯು ಪ್ರಾಮಾಣಿಕ ಉದ್ದೇಶದ, ಕೆಟ್ಟದಾಗಿ ಅನುಷ್ಠಾನ ಮಾಡಿದ ತಪ್ಪು ಆರ್ಥಿಕ ನೀತಿ ಅಲ್ಲ. ಅತ್ಯಂತ ಯೋಜಿತವಾದ ಹಣಕಾಸು ಅಕ್ರಮ. ಸರ್ಕಾರ ಎಷ್ಟೇ ಅಡಗಿಸಿ ಇಟ್ಟರೂ ಇದು ಏನು ಎಂಬುದನ್ನು ಭಾರತವು ಶೋಧಿಸಲಿದೆ.

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

**

ನೋಟು ರದ್ದತಿ ಬಳಿಕ ಒಟ್ಟು ದೇಶೀ ಉತ್ಪನ್ನ ತೀವ್ರವಾಗಿ ಕುಸಿಯಿತು. ಆದರೆ, ಅದರ ಇನ್ನೂ ಗಾಢವಾದ ಪರಿಣಾಮಗಳು ಈಗಲೂ ಅನಾವರಣಗೊಳ್ಳುತ್ತಲೇ ಇವೆ.

–ಮನಮೋಹನ್‌ ಸಿಂಗ್‌, ಮಾಜಿ ಪ್ರಧಾನಿ

**

ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದನೆ ನಿರ್ಮೂಲನೆಯಾಗಲಿದೆ, ಡಿಜಿಟಲ್‌ ವಹಿ ವಾಟು ಮಾತ್ರ ಇರಲಿದೆ ಎಂದಿದ್ದರು ಮೋದಿ. 2 ವರ್ಷ ಬಳಿಕ ಅವರು ಮೌನವಾಗಿದ್ದಾರೆ. ಸತ್ಯ ಏನೆಂದರೆ ಅವರು ಏಕಾಂಗಿಯಾಗಿಯೇ ಅರ್ಥವ್ಯವಸ್ಥೆ, ಜನರ ಜೀವ ಮತ್ತು ಜೀವ ನೋಪಾಯಗಳನ್ನು ನಿರ್ನಾಮ ಮಾಡಿದ್ದಾರೆ.

–ಸೀತಾರಾಮ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

**

ನೋಟು ರದ್ದತಿ ಎಂಬುದು ಅರ್ಥವ್ಯವಸ್ಥೆಯ ಮೇಲೆ ಸ್ವತಃ ಮಾಡಿಕೊಂಡ ಆಳವಾದ ಗಾಯ. ಇಂತಹ ದುರಂತಕ್ಕೆ ದೇಶವನ್ನು ತಳ್ಳಿದ್ದರ ಹಿಂದಿನ ನಿಜವಾದ ಕಾರಣ ಏನು ಎಂಬುದು ಎರಡು ವರ್ಷ ಬಳಿಕವೂ ಗೊತ್ತಾಗಿಲ್ಲ.
–ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

**

ಈ ನಿರ್ಧಾರದಿಂದ ಲಾಭವಾದದ್ದು ಯಾರಿಗೆ? ನಿರ್ಧಾರ ಕೈಗೊಂಡಿದ್ದು ಯಾಕೆ? ಯಾರನ್ನು ತೃಪ್ತಿಪಡಿಸಲು? ಕೆಲವೇ ಜನರ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರುವುದಕ್ಕಾಗಿ ನೋಟು ರದ್ದತಿ ನಿರ್ಧಾರ ಕೈಗೊಳ್ಳ ಲಾಗಿದೆ ಎಂಬ ಅನುಮಾನ ಇದೆ.

–ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT