ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಾರ್ ಎಚ್ಚರದಿಂದ ಇದ್ದಾರೆ, ಕೇಂದ್ರ ಸರ್ಕಾರ ಎಚ್ಚರವಾಗಿದೆಯೇ: ಶಿವಸೇನಾ

Last Updated 11 ಜೂನ್ 2020, 7:45 IST
ಅಕ್ಷರ ಗಾತ್ರ

ಮುಂಬೈ: ನಿಸರ್ಗ ಚಂಡಮಾರುತದಿಂದ ಹಾನಿಗೀಡಾದ ಮಹಾರಾಷ್ಟ್ರದ ಕೊಂಕಣ ಪ್ರದೇಶಕ್ಕೆ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರ ಭೇಟಿಯನ್ನು ಶಿವಸೇನಾ ಸಮರ್ಥಿಸಿಕೊಂಡಿದೆ.

ಪವಾರ್ ಪ್ರವಾಸ ಪ್ರಶ್ನಿಸಿದ್ದ ಬಿಜೆಪಿಗೆ ಸೇನಾ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿತಿರುಗೇಟು ನೀಡಲಾಗಿದೆ. ‘ಪವಾರ್ ಅವರು ಎಂದಿಗೂ ಎಚ್ಚರದಿಂದ ಇರುತ್ತಾರೆ. ಅವರು ರಾಜಕೀಯವಾಗಿ ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ’ ಎಂದು ಉಲ್ಲೇಖಿಸಿದೆ.

‘ಮಹಾರಾಷ್ಟ್ರವು ಕೋವಿಡ್‌ ಹಾಗೂ ನಿಸರ್ಗ ಚಂಡಮಾರುತದ ವಿರುದ್ಧ ಹೋರಾಡುತ್ತಿರುವಾಗ ಬಿಜೆಪಿ ರಾಜಕೀಯ ಮಾಡುತ್ತಿರುವುದು ಶೋಚನೀಯ. ಚಂಡಮಾರುತದಿಂದ ರಾಜ್ಯಕ್ಕೆ ಹಾನಿಯಾಗಿದ್ದು, ಕೇಂದ್ರ ಸರ್ಕಾರ ಏಕೆ ನೆರವು ನೀಡಲಿಲ್ಲ’ ಎಂದು ಸೇನಾ ಖಾರವಾಗಿ ಪ್ರಶ್ನಿಸಿದೆ.

ಪವಾರ್ ಭೇಟಿಯನ್ನು ಲೇವಡಿ ಮಾಡಿದ್ದ ಬಿಜೆಪಿಯ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಚಂದ್ರಕಾಂತ ಪಾಟೀಲ್, ‘ಪವಾರ್ ಅವರು ಈಗ ಎಚ್ಚರಗೊಂಡಿದ್ದಾರೆ’ ಎಂದಿದ್ದರು. ಇದಕ್ಕೆ ಸೇನಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ‘ಪವಾರ್ ಅವರು ಯಾವಾಗಲೂ ಎಚ್ಚರದಿಂದ ಇರುತ್ತಾರೆ. ಆರು ತಿಂಗಳ ಹಿಂದೆ ಬಿಜೆಪಿಯವರು ಮಧ್ಯರಾತ್ರಿ ಎದ್ದು ಕುಳಿತು ಬೆಳಿಗ್ಗೆ ಹೊತ್ತಿಗೆ ಸರ್ಕಾರ ರಚಿಸಿದ್ದರು. ಆದರೆ ಎರಡೇ ದಿನದಲ್ಲಿ ಪವಾರ್ ಅವರನ್ನು ಕಟ್ಟಿಹಾಕಿದರು’ ಎಂದು ಸೇನಾ ಹೇಳಿದೆ.

ಬಿಜೆಪಿಯ ದೇವೇಂದ್ರ ಫಡಣವೀಸ್ ಅವರು ರಾಜಭವನದಲ್ಲಿ ಮುಂಜಾನೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದನ್ನು ಸೇನಾ ನೆನಪಿಸಿದೆ.

ಕೋವಿಡ್ ಹಾಗೂ ನಿಸರ್ಗ ಬಾಧಿಸುತ್ತಿರುವ ಈ ಸಮಯದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಸದಾ ಎಚ್ಚರದಿಂದಿದೆ ಎಂದು ಸೇನಾ ಸ್ಪಷ್ಟಪಡಿಸಿದೆ. ರಾಜ್ಯ ಎದುರಿಸುತ್ತಿರುವ ಈ ಸಂಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರವಿದೆಯೇ ಎಂದೂ ಪ್ರಶ್ನಿಸಿದೆ.

‘ಪಶ್ಚಿಮ ಬಂಗಾಳದ ಚಂಡಮಾರುತಪೀಡಿತ ಪ್ರದೇಶಕ್ಕೆ ಮೋದಿ ಭೇಟಿ ನೀಡಿದರು. ಆದರೆ ಕೊಂಕಣ ಕರಾವಳಿಗೆ ಏಕೆ ಭೇಟಿ ನೀಡಲಿಲ್ಲ. ಚಂದ್ರಕಾಂತ ಪಾಟೀಲ್ ಅವರು ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿದ್ದಾರೆಯೇ‘ ಎಂದು ಪತ್ರಿಕೆ ತೀಕ್ಷ್ಣವಾಗಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT