ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್ 'ಮಹಾ' ಸರ್ಕಾರ;ಪೂರ್ಣಾವಧಿ ಆಡಳಿತ ಖಚಿತವೆಂದ ಪವಾರ್

ಶನಿವಾರ ರಾಜ್ಯಪಾಲರ ಭೇಟಿ
Last Updated 15 ನವೆಂಬರ್ 2019, 10:49 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗೂಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಿದ್ದು, ಪೂರ್ಣಾವಧಿ ಪೂರೈಸಲಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಶುಕ್ರವಾರ ಹೇಳಿದ್ದಾರೆ.

ಯಾವುದೇ ಪಕ್ಷವು ಬಹುಮತ ಪಡೆಯದೆ ಸರ್ಕಾರ ರಚನೆ ಸಾಧ್ಯವಾಗಿಲ್ಲ ಹಾಗೂ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ಕೆಲವು ತಿಂಗಳಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬುದನ್ನು ತಳ್ಳಿ ಹಾಕಿರುವ ಶರದ್‌ ಪವಾರ್‌, ಮೂರೂ ಪಕ್ಷಗಳು ಒಮ್ಮತದಿಂದ ಸರ್ಕಾರ ರಚನೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಮೂರೂ ಪಕ್ಷಗಳ ಮುಖಂಡರು ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಲಿದ್ದೇವೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ.

'ಮೈತ್ರಿ ಸರ್ಕಾರ ರಚನೆಯಾಗಲಿದೆ ಹಾಗೂ ಈ ಸರ್ಕಾರ ಪೂರ್ಣ 5 ವರ್ಷ ಆಡಳಿತ ನಡೆಸಲಿದೆ ಎಂದು ನಾವು ಭರವಸೆ ನೀಡುತ್ತೇವೆ' ಎಂದು ಶರದ್‌ ಪವಾರ್‌ ಹೇಳಿದ್ದಾರೆ.

ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಸರ್ಕಾರವು ಆರು ತಿಂಗಳೂ ಸಹ ಉಳಿಯುವುದಿಲ್ಲ ಎಂದು ಊಹಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿಯ ದೇವೇಂದ್ರ ಫಡಣವಿಸ್‌ ಅವರನ್ನು ಅಣಕಿಸಿದ ಪವಾರ್‌, 'ದೇವೇಂದ್ರ ಅವರನ್ನು ಕೆಲವು ವರ್ಷಗಳಿಂದ ಬಲ್ಲೆ. ಆದರೆ, ಅವರು ಜ್ಯೋತಿಶಾಸ್ತ್ರದ ವಿದ್ಯಾರ್ಥಿಯೂ ಎಂಬುದು ತಿಳಿದಿರಲಿಲ್ಲ' ಎಂದಿದ್ದಾರೆ.

ಅವಧಿವಾರುಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಪ್ರಸ್ತಾಪವನ್ನು ಶಿವಸೇನಾದ ಮುಂದೆ ಮಾಜಿ ಮುಖ್ಯಮಂತ್ರಿ ಪವಾರ್‌ ಇಟ್ಟಿದ್ದರು ಎನ್ನಲಾಗುತ್ತಿದೆ.

'ಬಿಜೆಪಿಯಿಂದ ಶಿವಸೇನಾ ಬೇರ್ಪಟ್ಟಿದ್ದು, ಅವರ ಘನತೆ ಕಾಪಾಡುವುದು ನಮ್ಮ ಕೆಲಸ. ಮುಖ್ಯಮಂತ್ರಿ ಅವರಿಂದಲೇ ಆಗಲಿದ್ದಾರೆ' ಎಂದು ಎನ್‌ಸಿಪಿ ಮುಖಂಡ ನವಾಬ್‌ ಮಲ್ಲಿಕ್‌ ಪ್ರತಿಕ್ರಿಯಿಸಿದ್ದಾರೆ.

'ರೈತರ ಸಮಸ್ಯೆಗಳು ಹಾಗೂ ಉದ್ಯೋಗದ ಮೇಲೆ ನಾವು ಗಮನ ಹರಿಸಲಿದ್ದೇನೆ. ಆದಷ್ಟು ಬೇಗ ಸರ್ಕಾರ ರಚನೆ ಮಾಡಲಿದ್ದು, ಪಕ್ಷದ ನಾಯಕರಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡು ತಲುಪಿಸಿದ್ದೇವೆ' ಎಂದಿದ್ದಾರೆ.

ಒಂದೇ ಪಕ್ಷದ ಅಭ್ಯರ್ಥಿ ಐದು ವರ್ಷದ ಅವಧಿಗೆ ಮುಖ್ಯಮಂತ್ರಿ ಆಗಿರುವರೇ? ಶಿವಸೇನಾ ಪೂರ್ಣ 5 ವರ್ಷವೂ ಮುಖ್ಯಮಂತ್ರಿ ಸ್ಥಾನವನ್ನು ಹೊಂದಲಿದ್ದು, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಉಪ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಲಿವೆಯೇ? ಎಂಬ ಪ್ರಶ್ನೆಗಳಿಗೂ ಮುಖಂಡರು ಸ್ಪಷ್ಟ ಉತ್ತರ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT