ಸೋಮವಾರ, ನವೆಂಬರ್ 18, 2019
24 °C
ರಫೇಲ್ ಬರುವ ಕಾಲ ಬಂತು, ಇನ್ನಾದರೂ ವಿಮಾನಗಳ ಪತನ ನಿಲ್ಲಲಿ

ರಫೇಲ್‌ಗೆ ಪೂಜೆ ಮಾಡಿದ್ದು ಸರಿ, ಇನ್ನು ವಿಮಾನ ನಿರ್ವಹಣೆ ಕಡೆಗೂ ಗಮನ ಕೊಡಿ ಸಚಿವರೇ

Published:
Updated:

ವಿಜಯದಶಮಿಯ ಪವಿತ್ರ ದಿನದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೂರದ ಫ್ರಾನ್ಸ್‌ಗೆ ಹಾರಿಹೋಗಿ ರಫೇಲ್‌ ಯುದ್ಧ ವಿಮಾನದ ಮೇಲೆ ಓಂಕಾರ ಬರೆದು, ತೆಂಗಿನಕಾಯಿಟ್ಟು ಪೂಜೆ ಸಲ್ಲಿಸಿ ಬಂದರು. ಒಂದು ವರ್ಷದಲ್ಲಿ 13 ಯುದ್ಧ ವಿಮಾನಗಳು, 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕಳೆದುಕೊಂಡಿರುವ ವಾಯುಪಡೆಯ ಕಾಯಕಲ್ಪಕ್ಕೆ ಇಷ್ಟು ಮಾಡಿದರೆ ಸಾಕೆ?

ರಕ್ಷಣಾ ಸಚಿವರು ಸಂಸತ್‌ ಅಧಿವೇಶನದಲ್ಲಿ ನೀಡಿರುವ ಮಾಹಿತಿಯಂತೆ 2016ರಿಂದೀಚೆಗೆ ವಿವಿಧ ಅಪಘಾತಗಳಲ್ಲಿ ವಾಯುಪಡೆ ಒಟ್ಟು 27 ಯುದ್ದ ವಿಮಾನಗಳನ್ನು ಕಳೆದುಕೊಂಡಿದೆ. ಇದರಲ್ಲಿ ಸುಖೋಯ್-30, ಮಿರಾಜ್ 2000, ಮಿಗ್, ಜಾಗ್ವಾರ್‌ನಂಥ ಮುಂಚೂಣಿ ಯುದ್ಧ ವಿಮಾನಗಳೂ ಸೇರಿರುವುದು ಆತಂಕದ ವಿಚಾರ.

ಇದನ್ನೂ ಓದಿ: ಮೊದಲ ರಫೇಲ್‌ಗೆ ರಾಜನಾಥ್ ಆಯುಧ ಪೂಜೆ

2016-17ರಲ್ಲಿ 6 ಯುದ್ಧವಿಮಾನ, 2 ಹೆಲಿಕಾಪ್ಟರ್, 1 ವಾಯುಪಡೆಗೆ ಸೇರಿದ ಸಾರಿಗೆ ವಿಮಾನ ಹಾಗೂ 1 ತರಬೇತಿ ವಿಮಾನ ಪತನವಾಗಿತ್ತು. 2017-18ರಲ್ಲಿ 2 ಯುದ್ಧ ವಿಮಾನ , 1 ತರಬೇತಿ ವಿಮಾನ. 2018-19ರಲ್ಲಿ 7 ಯುದ್ಧ ವಿಮಾನ, 2 ಹೆಲಿಕಾಪ್ಟರ್, 2 ತರಬೇತಿ ವಿಮಾನಗಳು ಪತನಗೊಂಡಿದ್ದವು. 2019ರಲ್ಲಿ ಈ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ವಿಮಾನಗಳ ನಿರ್ವಹಣೆಯನ್ನು ವಾಯುಪಡೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎನ್ನುವುದು ಈ ಅಂಕಿಅಂಶಗಳು ಒತ್ತಿ ಹೇಳುತ್ತವೆ.

ಕಳೆದ ಜನವರಿಯಿಂದ ಈವರೆಗಿನ ಅಪಘಾತಗಳನ್ನು ಪರಿಶೀಲಿಸಿದಾಗ, ಬಹುತೇಕ ಸಂದರ್ಭಗಳಲ್ಲಿ ತಾಂತ್ರಿಕ ಅಂಶಗಳಿಗಿಂತಲೂ ಪೈಲಟ್‌ಗಳ ಸಮಯಪ್ರಜ್ಞೆಯೇ ಅವರ ಮತ್ತು ಸಾರ್ವಜನಿಕರ ಜೀವ ಉಳಿಸಿರುವುದು ಎದ್ದು ಕಾಣುತ್ತದೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ಹೀಗೆ ಎಜೆಕ್ಟ್ ಆಗುವ ಪೈಲಟ್‌ಗಳು ಮತ್ತೆ ಕರ್ತವ್ಯಕ್ಕೆ ಹಿಂದಿರುಗಲು ಸಾಕಷ್ಟು ಸಮಯ ಬೇಕು. 

ಇದನ್ನೂ ಓದಿ: ರಫೇಲ್‌ ಕಂಡರೆ‌ ಶತ್ರುಗಳು ಬೆಚ್ಚಿ ಬೀಳೋದೇಕೆ‌ ಗೊತ್ತೇ?

2019ರಲ್ಲಿ ಈವರೆಗೆ ಒಟ್ಟು 13 ಯುದ್ಧ ವಿಮಾನಗಳು ಅಪಘಾತಕ್ಕೆ ಒಳಗಾಗಿದ್ದು 20ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಈ ವರ್ಷ ಜನವರಿಯಿಂದ ಅಕ್ಟೋಬರ್ 6ರವರೆಗೆ ದೇಶದ ವಿವಿಧೆಡೆ ಸಂಭವಿಸಿದ ಯುದ್ಧ ವಿಮಾನಗಳ ಅಪಘಾತಗಳು ಮತ್ತು ಜೀವಹಾನಿಯ ವಿವರ ಇಲ್ಲಿದೆ...

ಜನವರಿ 28: ಉತ್ತರ ಪ್ರದೇಶದಲ್ಲಿ ಜಾಗ್ವಾರ್ ಪತನ

ಉತ್ತರ ಪ್ರದೇಶದ ಗೋರಖ್‌ಪುರ ವಾಯುನೆಲೆಯಿಂದ ಹಾರಾಟ ಆರಂಭಿಸಿದ್ದ ಜಾಗ್ವಾರ್ ಯುದ್ಧವಿಮಾನವು ಖುಷಿ ನಗರ ಸಮೀಪ ಪತನವಾಯಿತು. ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆದರು.

ಫೆಬ್ರುವರಿ 1: ಬೆಂಗಳೂರಿನಲ್ಲಿ ಮಿರಾಜ್‍ 2000 ಪತನ, ಹುತಾತ್ಮರಾದ ಇಬ್ಬರು ಪೈಲಟ್‌ಗಳು

ಎಚ್‌ಎಎಲ್‌ ಮೇಲ್ದರ್ಜೆಗೇರಿಸಿದ್ದ ಮಿರಾಜ್ 2000 ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟ ನಡೆಸಬೇಕಿದ್ದ ಇಬ್ಬರು ವಾಯುಪಡೆ ಪೈಲಟ್‌ಗಳು ಫೆ.1ರಂದು ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಹುತಾತ್ಮರಾದರು. ಸ್ವಾರ್ಡನ್ ಲೀಡರ್ ಸಮೀರ್ ಅಬ್ರೊಲ್ ಮತ್ತು ಸಿದ್ಧಾರ್ಥ ನೇಗಿ ಹುತಾತ್ಮರಾದವರು.

ರನ್‌ವೇಯಿಂದ ವಿಮಾನ ಟೇಕಾಫ್‌ ಆಗುವ ಮೊದಲೇ ಬೆಂಕಿ ಹೊತ್ತಿಕೊಂಡಿತ್ತು. ಅದನ್ನು ಗಮನಿಸಿದ ಇಬ್ಬರೂ ಎಜೆಕ್ಟ್‌ ಆದರು ಓರ್ವ ಪೈಲಟ್ ಹೊತ್ತಿ ಉರಿಯುತ್ತಿದ್ದ ಅವಶೇಷಗಳ ಮೇಲೆ ಬಿದ್ದು ತಕ್ಷಣ ಮೃತಪಟ್ಟರೆ ಮತ್ತೋರ್ವರು ಆಸ್ಪತ್ರೆಯಲ್ಲಿ ನಿಧನರಾದರು.

ಇದನ್ನೂ ಓದಿ: ಸಾವಿರ ಜನರ ಪ್ರಾಣ ಉಳಿಸಲು ಇವರಿಬ್ಬರು ಹುತಾತ್ಮರಾದರು


ಬೆಂಗಳೂರಿನಲ್ಲಿ ಜಾಗ್ವಾರ್ ವಿಮಾನ ಅಪಘಾತ ಸಂಭವಿಸಿದ ಸ್ಥಳ

ಫೆಬ್ರವರಿ 12: ಪೋಖ್ರಾನ್ ಬಳಿ ಮಿಗ್ 27 ಅಪಘಾತ

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆ ಪೋಖ್ರಾನ್ ಸಮೀಪದ ಎಟಾ ಗ್ರಾಮದಲ್ಲಿ ವಾಯುಪಡೆಯ ಮಿಗ್ -27 ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ಪೈಲಟ್ ವಿಮಾನದಿಂದ ಸುರಕ್ಷಿತವಾಗಿ ಎಜೆಕ್ಟ್ ಆದರು.

ಫೆಬ್ರವರಿ 19: ಬೆಂಗಳೂರಿನಲ್ಲಿ ಸೂರ್ಯ ಕಿರಣ್ ವಿಮಾನಗಳ ಡಿಕ್ಕಿ

ಬೆಂಗಳೂರಿನ ಯಲಹಂಕಾ ವಾಯುನೆಲೆಯಲ್ಲಿ ನಡೆದ ಪ್ರತಿಷ್ಠಿತ ಏರೊ ಇಂಡಿಯಾ ಏರ್‌ ಷೋ ತಾಲೀಮು ಸಂದರ್ಭ ಎರಡು ಸೂರ್ಯಕಿರಣ್ ಏರೊಬ್ಯಾಟಿಕ್ ವಿಮಾನಗಳು ಡಿಕ್ಕಿಯಾಗಿ ಪತನಗೊಂಡವು. ಘಟನೆಯಲ್ಲಿ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಹುತಾತ್ಮರಾದರೆ, ವಿಂಗ್ ಕಮಾಂಡರ್ ವಿ.ಟಿ.ಶೆಲ್ಕೆ ಮತ್ತು ಸ್ಕ್ವಾರ್ಡನ್ ಲೀಡರ್ ಟಿ.ಜೆ.ಸಿಂಗ್ ಗಾಯಗೊಂಡರು.

ಇದನ್ನೂ ಓದಿ: ತಾಲೀಮು ವೇಳೆ ತಾಗಿದ ರೆಕ್ಕೆಗಳು: ‘ಸೂರ್ಯಕಿರಣ’ ಭಸ್ಮ, ಪೈಲಟ್ ಸಾವು

ಫೆಬ್ರುವರಿ 27: ಅಭಿನಂದನ್ ಇದ್ದ ಮಿಗ್–21 ವಿಮಾನ ಪತನ

ಬಾಲಾಕೋಟ್‌ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ನಂತರ ಭಾರತದ ಸೇನಾ ನೆಲೆಗಳ ಮೇಲೆ ಪಾಕ್ ದಾಳಿ ನಡೆಸಲು ಯತ್ನಿಸಿತು. ಈ ದಾಳಿಯನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿದ್ದ ಭಾರತೀಯ ವಾಯುಪಡೆಯ ಮಿಗ್–21 ಯುದ್ಧವಿಮಾನ ಪಾಕಿಸ್ತಾನದ ಎಫ್–16 ವಿಮಾನವನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಯಿತಾದರೂ ನಂತರ ಪಾಕ್‌ನ ಕ್ಷಿಪಣಿ ದಾಳಿಯಿಂದ ಪತನಗೊಂಡಿತು. ಅದರಲ್ಲಿದ್ದ ಪೈಲಟ್ ಅಭಿನಂದನ್ ವರ್ಧಮಾನ್ ಪಾಕ್ ಸೈನಿಕರಿಗೆ ಸೆರೆ ಸಿಕ್ಕರು. ನಂತರದ ಬೆಳವಣಿಗೆಗಳು ಈಗ ಇತಿಹಾಸ.

ಇದನ್ನೂ ಓದಿ: ವಿಂಗ್ ಕಮಾಂಡರ್ ಅಭಿನಂದನ್‌ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ... 

ಫೆಬ್ರವರಿ 27: ನಮ್ಮದೇ ಹೆಲಿಕಾಪ್ಟರ್, ನಮ್ಮದೇ ಕ್ಷಿಪಣಿ

ಬಾಲಾಕೋಟ್ ಮೇಲೆ ವಾಯುಪಡೆಯ ವಿಮಾನಗಳು ದಾಳಿ ನಡೆಸಿದ ಕೇವಲ ಒಂದು ದಿನದ ನಂತರ ಕಾಶ್ಮೀರದ ಬಡಗಾಮ್‌ ಜಿಲ್ಲೆಯಲ್ಲಿ ವಾಯುಪಡೆಯ ಎಂಐ–17 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಆರು ಸೇನಾ ಸಿಬ್ಬಂದಿ ಮತ್ತು ಓರ್ವ ನಾಗರಿಕರು ಮೃತಪಟ್ಟರು.

ಶತ್ರುರಾಷ್ಟ್ರದ ಹೆಲಿಕಾಪ್ಟರ್‌ ಎಂಬ ತಪ್ಪು ತಿಳಿವಳಿಕೆಯಿಂದ ನಮ್ಮದೇ ವಾಯುಪಡೆಯ ಸಿಬ್ಬಂದಿ ಕ್ಷಿಪಣಿ ದಾಳಿ ನಡೆಸಿ ಹೆಲಿಕಾಪ್ಟರ್‌ ಪತನಕ್ಕೆ ಕಾರಣವಾಗಿದ್ದರು. ನಂತರದ ದಿನಗಳಲ್ಲಿ ವಾಯಪಡೆ ತನ್ನ ತಪ್ಪು ಒಪ್ಪಿಕೊಂಡಿತ್ತು.

ಇದನ್ನೂ ಓದಿ: ಎಂಐ–17 ಹೆಲಿಕಾಪ್ಟರ್ ಹೊಡೆದುರುಳಿಸಿದ್ದು ನಮ್ಮದೇ ಕ್ಷಿಪಣಿ


ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎಂಐ–17 ಹೆಲಿಕಾಪ್ಟರ್‌ ಪತನವಾಗಿದೆ –ಪಿಟಿಐ ಚಿತ್ರ

ಮಾರ್ಚ್ 8: ಬಿಕಾನೆರ್ ಬಳಿ ಮಿಗ್ -21 ಅಪಘಾತ

ರಾಜಸ್ಥಾನದ ಬಿಕಾನೆರ್ ಬಳಿ ಮಿಗ್ -21 ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆದರು. ಬಿಕಾನೆರ್ ಸಮೀಪದ ನಲ್ ವಾಯುನೆಲೆಯಿಂದ ಹಾರಾಟ ಆರಂಭಿಸಿದ್ದ ವಿಮಾನವು ವಾಡಿಕೆಯಂತೆ ಗಸ್ತು ಚಟುವಟಿಕೆ ನಡೆಸುತ್ತಿತ್ತು. ಆದರೆ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಅಪಘಾತಕ್ಕೀಡಾಯಿತು.

ಮಾರ್ಚ್ 27: ಜೋಧ್‌ಪುರ ಬಳಿ ಮಿಗ್‍ 27 (ನವೀಕರಿಸಿದ ವಿಮಾನ) ಪತನ

ಜೋಧ್‌ಪುರದಿಂದ ಹಾರಾಟ ಆರಂಭಿಸಿದ್ದ ಮಿಗ್ 27 ಯುದ್ಧವಿಮಾನವು ಎಂಜಿನ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದಾಗಿ ಜೋಧಪುರಕ್ಕೆ 120 ಕಿ.ಮೀ. ದೂರದಲ್ಲಿ ಪತನಗೊಂಡಿತು. ಪೈಲಟ್‌ ಸುರಕ್ಷಿತವಾಗಿ ಎಜೆಕ್ಟ್ ಆದರು. 

ಜೂನ್‍ 20: ಅರುಣಾಚಲಪ್ರದೇದಲ್ಲಿ ‘ಎಎನ್‍ 32’ ವಿಮಾನ ಪತನ

ಜೂನ್‌ 3ರಂದು ಅಸ್ಸಾಂನ ಜೊರ್ಹಾತ್‌ನಿಂದ ಅರುಣಾಚಲ ಪ್ರದೇಶ–ಚೀನಾ ಗಡಿಯಲ್ಲಿರುವ ಮೆನ್‌ಚುಕಾಗೆ ಪ್ರಯಾಣ ಆರಂಭಿಸಿದ್ದ ವಾಯುಪಡೆಯ ಸಾರಿಗೆ ವಿಮಾನ ‘ಎಎನ್‌–32’ ಟೇಕಾಫ್ ಆದ ಕೆಲವೇ ಗಂಟೆಗಳ ನಂತರ ಪತನಗೊಂಡಿತ್ತು. ವಿಮಾನದ ಅವಶೇಷಗಳನ್ನು ಸೇನಾ ಸಿಬ್ಬಂದಿ ಜೂನ್ 20ರಂದು ಪತ್ತೆ ಹಚ್ಚಿದರು. ಈ ಅಪಘಾತದಲ್ಲಿ ಒಟ್ಟು 13 ಮಂದಿ ಹುತಾತ್ಮರಾಗಿದ್ದರು.

ಇದನ್ನೂ ಓದಿ: ಅರುಣಾಚಲಪ್ರದೇಶದಲ್ಲಿ ಅಪಘಾತಕ್ಕೀಡಾದ ವಾಯುಪಡೆ ಯುದ್ಧವಿಮಾನ ಪತ್ತೆ

ಜೂನ್ 27: ಅಂಬಾಲದಲ್ಲಿ ಜಾಗ್ವಾರ್‌ಗೆ ಡಿಕ್ಕಿ ಹೊಡೆದ ಹಕ್ಕಿ, ತುರ್ತು ಲ್ಯಾಂಡಿಂಗ್

ಯುವ ಪೈಲಟ್ ಒಬ್ಬರ ಸಮಯಪ್ರಜ್ಞೆ ಮತ್ತು ಸಾಹಸಗಾಥೆಗೆ ಇಡೀ ದೇಶ ಸಾಕ್ಷಿಯಾದ ಪ್ರಸಂಗವಿದು. ಜೂನ್‌ 27ರಂದು ಅಂಬಾಲದಿಂದ ಹಾರಾಟ ಆರಂಭಿಸಿದ ಜಾಗ್ವಾರ್ ಯುದ್ಧವಿಮಾನಕ್ಕೆ ಹಕ್ಕಿಯೊಂದು ಅಡ್ಡಬಂತು. ಇದರಿಂದಾಗಿ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿತು. ಅಪಾಯದ ಸೂಚನೆ ಅರಿತ ಪೈಲಟ್, ವಿಮಾನದ ತುರ್ತು ಲ್ಯಾಂಡಿಂಗ್‌ಗೆ ಮೊದಲು ಅದರಲ್ಲಿದ್ದ ಹೆಚ್ಚುವರಿ ಇಂಧನ ಟ್ಯಾಂಕ್ ಮತ್ತು ಶಸ್ತ್ರಗಳನ್ನು (ಕ್ಯಾರಿಯರ್ ಬಾಂಬ್‌ ಸ್ಟೋರ್‌) ವಿಮಾನದಿಂದ ಹೊರಗೆ ಹಾಕಿದರು. ಅವರ ಸಮಯಪ್ರಜ್ಞೆ ಭಾರೀ ಅಪಘಾತ ತಪ್ಪಿಸಿತು ಎಂದು ವಾಯುಪಡೆ ಅವರನ್ನು ಶ್ಲಾಘಿಸಿತ್ತು.

ಜುಲೈ 2: ತಮಿಳುನಾಡಿನಲ್ಲಿ ತೇಜಸ್‌ ವಿಮಾನದಿಂದ ಕೆಳಗೆ ಬಿದ್ದ ಇಂಧನ ಟ್ಯಾಂಕ್

ದೇಶಿ ನಿರ್ಮಿತ ತೇಜಸ್‍ ಯುದ್ಧ ವಿಮಾನ ಚೆನೈನ ತಾಂಬರಮ್‍ ನೆಲೆಯಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಅದರ ಇಂಧನ ಟ್ಯಾಂಕ್‍ ಕೆಳಗೆ ಬಿತ್ತು. ಹೊಲಗಳಲ್ಲಿ ಬೇಸಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ರೈತರನ್ನು ಇದನ್ನು ಕಂಡ ಅಚ್ಚರಿಪಟ್ಟಿದ್ದರು. ವಿಮಾನ ಯಾವುದೇ ತೊಂದರೆಯಿಲ್ಲದೆ ಸುಲುರ್ ವಾಯುನೆಲೆಯಲ್ಲಿ ಲ್ಯಾಂಡಿಂಗ್ ಆಯಿತು.

ಆಗಸ್ಟ್ 8: ಅಸ್ಸಾಂನಲ್ಲಿ ಭತ್ತದ ಗದ್ದೆಗೆ ಉರುಳಿದ ಸುಖೋಯ್‍–30

ಅಸ್ಸಾಂನ ಮಿಲನ್‌ಪುರ ಸಮೀಪ ಸುಖೋಯ್–30 ಯುದ್ಧ ವಿಮಾನ ಪತನಗೊಂಡು ಭತ್ತದ ಗದ್ದೆಗೆ ಉರುಳಿತು. ಇಬ್ಬರು ಪೈಲಟ್‌ಗಳು ವಿಮಾನದಿಂದ ಯಶಸ್ವಿಯಾಗಿ ಎಜೆಕ್ಟ್ ಆದರು. ಸ್ಥಳೀಯರ ಸಮಯಪ್ರಜ್ಞೆ ಅವರ ಜೀವ ಉಳಿಸಿತು. ಘಟನೆಯಲ್ಲಿ ಓರ್ವ ಪೈಲಟ್‌ನ ಕಾಲಿಗೆ ಗಾಯವಾಯಿತು.

ಸೆ.25: ಗ್ವಾಲಿಯರ್‌ನಲ್ಲಿ ಮಿಗ್‍ 21 ಪತನ

ಗ್ವಾಲಿಯರ್ ವಾಯುನೆಲೆಯಿಂದ ಹಾರಾಟ ಆರಂಭಿಸಿದ್ದ ಮಿಗ್ 21 ತರಬೇತಿ ವಿಮಾನ ಪತನಗೊಂಡಿತು. ಅದರಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದರು.

ಅಕ್ಟೋಬರ್ 6: ತೆಲಂಗಾಣದಲ್ಲಿ ತರಬೇತಿ ವಿಮಾನ ಅಪಘಾತ: ಹುತಾತ್ಮರಾದ ಇಬ್ಬರು ಪೈಲಟ್‌ಗಳು

ತೆಲಂಗಾಣದ ವಿಕರಾಬಾದ್ ಜಿಲ್ಲೆ ಸುಲ್ತಾನ್‌ಪುರ ಗ್ರಾಮದ ಸಮೀಪ ಅ.6ರಂದು ಸಂಭವಿಸಿದ ತರಬೇತಿ ವಿಮಾನದ ಅಪಘಾತದಿಂದಾಗಿ ಇಬ್ಬರು ಪೈಲೆಟ್ಗಳು ಹುತಾತ್ಮರಾದರು. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಪ್ರತಿಕ್ರಿಯಿಸಿ (+)