ಔರಂಗಾಬಾದ್ ದುರಂತಕ್ಕೆ ಸರ್ಕಾರವೇ ಹೊಣೆ: ಶಿವಸೇನಾ

ಮುಂಬೈ: ಔರಂಗಾಬಾದ್ ಜಿಲ್ಲೆಯಲ್ಲಿ ರೈಲು ಹರಿದು 16 ಕಾರ್ಮಿಕರು ಮೃತಪಟ್ಟ ದುರಂತಕ್ಕೆ ಸರ್ಕಾರವೇ ಹೊಣೆ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಅಥವಾ ಶಿವಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.
‘ಕಾರ್ಮಿಕರು ಅವರ ಊರುಗಳಿಗೆ ತೆರಳಲು ಅನುಮತಿ ನೀಡುವ ಕುರಿತು ಅಥವಾ ಅವರಿಗೆ ಆಹಾರದ ವ್ಯವಸ್ಥೆ ಮಾಡುವ ಬಗ್ಗೆ ಸರ್ಕಾರ ಯೋಚಿಸಲಿಲ್ಲ. ಕೊರೊನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಲಾಕ್‌ಡೌನ್ ಘೋಷಿಸುವ ಮುನ್ನ ಬಡವರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು’ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಹಳಿಯಲ್ಲಿ ಮಲಗಿದ್ದವರ ಮೇಲೆ ಹರಿದ ಗೂಡ್ಸ್ ರೈಲು: 16 ಕಾರ್ಮಿಕರು ಬಲಿ
‘ಘಟನಾ ಸ್ಥಳದ ದೃಶ್ಯಗಳು ಹೃದಯ ವಿದ್ರಾವಕವಾಗಿರುವುದಲ್ಲದೆ ಕಟು ವಾಸ್ತವವನ್ನು ತೆರೆದಿಟ್ಟಿವೆ. ಕಾರ್ಮಿಕರು ಆರೋಗ್ಯವಂತರಾಗಿದ್ದು, ಕೊರೊನಾದ ಯಾವುದೇ ಲಕ್ಷಣಗಳೂ ಅವರಲ್ಲಿರಲಿಲ್ಲ. ಅವರ ಸಾವಿಗೆ ಸರ್ಕಾರವೇ ಹೊಣೆ. ಜನರಿಗೆ ಕೊರೊನಾ ವೈರಸ್ ಬರದಿರಲಿ ಎಂಬ ಉದ್ದೇಶದಿಂದ ಲಾಕ್‌ಡೌನ್ ಜಾರಿ ಮಾಡಲಾಯಿತು. ಆದರೆ, ಬಡ ಕಾರ್ಮಿಕರು ಲಾಕ್‌ಡೌನ್ ವೇಳೆ ಹಸಿವಿನಿಂದ ಸಾಯುವಂತಾಗಿದೆ’ ಎಂದು ಸೇನಾ ಹೇಳಿದೆ.
ರೈಲು ದುರಂತದಲ್ಲಿ ಕಾರ್ಮಿಕರ ಸಾವಿಗೂ ಕೊರೊನಾ ಸಾಂಕ್ರಾಮಿಕವೇ ಕಾರಣ ಹೊರತು ಅದು ಅಪಘಾತವಲ್ಲ ಎಂದು ಸೇನಾ ಪ್ರತಿಪಾದಿಸಿದೆ. ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ವಲಸೆ ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದೂ ಹೇಳಿದೆ.
ಇದನ್ನೂ ಓದಿ: ದುರ್ಘಟನೆ ತಡೆಗೆ ಹೆಚ್ಚಿನ ಎಚ್ಚರಿಕೆ ವಹಿಸಿ: ರೈಲ್ವೆ ಸುರಕ್ಷತಾ ಆಯುಕ್ತರ ಸೂಚನೆ
‘ಲಾಕ್‌ಡೌನ್‌ನಿಂದಾಗಿ ಉದ್ಯಮ, ಕೈಗಾರಿಕೆಗಳು ಮುಚ್ಚಿವೆ. ಕಾರ್ಮಿಕರು ಅವರ ಊರುಗಳಿಗೆ ತೆರಳುತ್ತಿದ್ದಾರೆ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅವರು ಪುಟ್ಟ ಮಕ್ಕಳೊಂದಿಗೆ ನಡೆದುಕೊಂಡೇ ಊರುಗಳಿಗೆ ತೆರಳುತ್ತಿದ್ದಾರೆ. ಸರ್ಕಾರ ಇದನ್ನು ನೋಡಿಕೊಂಡು ಕುಳಿತಿದೆ’ ಎಂದು ಸೇನಾ ದೂರಿದೆ.
ಎಲ್ಲಿ ಇದ್ದೀರೋ ಅಲ್ಲೇ ಇರಿ ಎಂದು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಜನರಲ್ಲಿ ಮನವಿ ಮಾಡಿದ್ದರೂ ವಲಸೆ ಕಾರ್ಮಿಕರು ಊರುಗಳಿಗೆ ತೆರಳುತ್ತಲೇ ಇದ್ದಾರೆ ಎಂದೂ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಔರಂಗಾಬಾದ್ ರೈಲು ದುರಂತದ ಸಂತ್ರಸ್ತರು ಪಾಸ್ಗಾಗಿ ಮನವಿ ಮಾಡಿದ್ದರು: ಕಾಂಗ್ರೆಸ್
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.