ಬುಧವಾರ, ಜನವರಿ 29, 2020
30 °C

ಪ್ರಧಾನಿ ಬಳಿ ಅಧಿಕಾರ ಕೇಂದ್ರೀಕೃತವಾಗಿರುವುದೂ ಆರ್ಥಿಕ ಹಿನ್ನಡೆಗೆ ಕಾರಣ: ಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಪ್ರಧಾನಿ ಕಚೇರಿಯಲ್ಲಿ ಎಲ್ಲ ಅಧಿಕಾರ ಕೇಂದ್ರೀಕೃತವಾಗಿರುವುದೂ ಆರ್ಥಿಕ ಹಿನ್ನಡೆಗೆ ಪ್ರಮುಖ ಕಾರಣ ಎಂದು ಶಿವಸೇನಾ ಹೇಳಿದೆ.

ಆರ್‌ಬಿಐ (ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ) ಗವರ್ನರ್ ಮತ್ತು ಹಣಕಾಸು ಸಚಿವರೂ ತನ್ನ ನಿಯಂತ್ರಣದಲ್ಲಿರಬೇಕು ಎಂದು ಕೇಂದ್ರ ಸರ್ಕಾರ ಬಯಸುತ್ತಿದೆ. ಆರ್ಥಿಕತೆ ಎಂಬುದು ‘ಷೇರು ಮಾರುಕಟ್ಟೆ ಜೂಜು’ ಎಂದು ಪರಿಗಣಿಸುವ ಬಿಜೆಪಿ ನೇತೃತ್ವದ ಸರ್ಕಾರ ಅರ್ಥಶಾಸ್ತ್ರಜ್ಞರ ಸಲಹೆ ಕೇಳುವುದಕ್ಕೂ ಸಿದ್ಧವಿಲ್ಲ ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಟೀಕಿಸಲಾಗಿದೆ.

‘ದೇಶದ ಆರ್ಥಿಕತೆಯು ‘ಬೆಳವಣಿಗೆಯ ಹಿಂಜರಿತ’ದಲ್ಲಿ ಸಿಲುಕಿಕೊಂಡಿದ್ದು, ಗ್ರಾಮೀಣ ಪ್ರದೇಶವು ತೀವ್ರ ಸಂಕಷ್ಟದಲ್ಲಿ ಇದೆ’ ಎಂಬ ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಹೇಳಿಕೆ ಬೆಂಬಲಿಸಿರುವ ಶಿವಸೇನಾ, ದೇಶದ ಈಗಿನ ಆರ್ಥಿಕ ಸ್ಥಿತಿಗೆ ಮಾಜಿ ಪ್ರಧಾನಿಗಳಾದ ಜವಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರನ್ನು ಹೊಣೆ ಮಾಡಲಾಗದು ಎಂದಿದೆ.

‘ಅತಿಯಾದ ಅಧಿಕಾರ ಕೇಂದ್ರೀಕರಣಗೊಂಡಿರುವ ಪ್ರಧಾನಿ ಕಚೇರಿ ಮತ್ತು ಅಧಿಕಾರವೇ ಇಲ್ಲದ ಸಚಿವರು ಅರ್ಥ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ’ ಎಂದು ರಘುರಾಂ ರಾಜನ್‌ ‘ಇಂಡಿಯಾ ಟುಡೆ’ ನಿಯತಕಾಲಿಕದಲ್ಲಿ ಬರೆದ ಲೇಖನದಲ್ಲಿ ವಿಶ್ಲೇಷಿಸಿದ್ದರು.

ಇದನ್ನೂ ಓದಿ: ಪ್ರಗತಿ ಹಿಂಜರಿತದಲ್ಲಿ ಆರ್ಥಿಕತೆ

ಆರ್ಥಿಕ ಹಿನ್ನಡೆಯನ್ನು ಒಪ್ಪಿಕೊಳ್ಳಲು ಸರ್ಕಾರ ತಯಾರಿಲ್ಲ. ಈರುಳ್ಳಿ ಬೆಲೆ ಕೆ.ಜಿ.ಗೆ ₹ 200ಕ್ಕೆ ತಲುಪಿದ್ದಾಗ ‘ಆ ಬಗ್ಗೆ ನನ್ನನ್ನು ಕೇಳಬೇಡಿ. ನಾನು ಈರುಳ್ಳಿ ತಿನ್ನುವುದಿಲ್ಲ’ ಎಂದಿದ್ದಾರೆ ಹಣಕಾಸು ಸಚಿವರು ಎಂದು ಶಿವಸೇನಾ ವ್ಯಂಗ್ಯವಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ಪರಿಸ್ಥಿತಿ ಸುಧಾರಣೆ ಮಾಡಲು ಪ್ರಯತ್ನಿಸುತ್ತಿಲ್ಲ. ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈರುಳ್ಳಿ ಬೆಲೆ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆದರೆ, ಈಗ ಅವರು ಪ್ರಧಾನಿಯಾಗಿದ್ದಾರೆ. ಆರ್ಥಿಕತೆ ಸಂಕಷ್ಟದಲ್ಲಿದೆ ಎಂದು ಸೇನಾ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು