ಗುರುವಾರ , ಏಪ್ರಿಲ್ 9, 2020
19 °C

ಸಿಎಎ ಬೆಂಬಲಿಸುತ್ತೇವೆ ಎಂದ ಉದ್ಧವ್‌: ಶಿವಸೇನೆಯ ಮನವೊಲಿಸಲಾಗುವುದು ಎಂದ ಪವಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಜಾರಿ ವಿಚಾರವಾಗಿ ಮಹಾರಾಷ್ಟ್ರದ ಮೈತ್ರಿ ಸರ್ಕಾರದಲ್ಲಿ ಮುನಿಸು ತಲೆದೋರಿದೆ. 

ಸೈದ್ಧಾಂತಿಕ ವ್ಯತ್ಯಾಸಗಳಿರುವ ಪಕ್ಷಗಳು ಸೇರಿ ರಚನೆಯಾಗಿರುವ ಮಹಾರಾಷ್ಟ್ರದ ಮೈತ್ರಿ ಸರ್ಕಾರದಲ್ಲಿ ಸಿಎಎ ಮತ್ತು ಎನ್‌ಆರ್‌ಪಿ ವಿವಾದದ ಪ್ರಮುಖ ವಿಷಯ. ಪರಿಸ್ಥಿತಿ ಹೀಗಿರುವಾಗಲೇ ಸಿಎಎ ಮತ್ತು ಎನ್‌ಪಿಆರ್‌ಅನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಮಂಗಳವಾರ ಬೆಂಬಲಿಸಿದ್ದಾರೆ. ಆದರೆ, ಇದಕ್ಕೆ ಪ್ರಬಲ ವಿರೋಧ ಹೊಂದಿರುವ ಶರದ್‌ ಪವಾರ್‌ ಈ ವಿಚಾರವಾಗಿ ಉದ್ಧವ್‌ ಠಾಕ್ರೆ ಅವರ ಮನವೊಲಿಸುವುದಾಗಿ ತಿಳಿಸಿದ್ದಾರೆ. 

ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡುತ್ತಿದ್ದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು, ‘ಸಿಎಎ ದೇಶಕ್ಕೆ ತೊಂದರೆ ನೀಡುವುದಿಲ್ಲ. ಎನ್‌ಪಿಆರ್‌ ಅನ್ನು ತಡೆಯಲು ಸಾಧ್ಯವಿಲ್ಲ. ಸಿಎಎ–ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ಗಳ ನಡುವೆ ವ್ಯತ್ಯಾಸಗಳಿವೆ. ಅವೆರಡೂ ಬೇರೆ ಬೇರೆ. ಒಂದು ವೇಳೆ ರಾಜ್ಯದಲ್ಲಿ ಸಿಎಎ ಜಾರಿಯಾದರೂ ಯಾರೂ ಆತಂಕ ಪಡೆಬೇಕಾದ ಅಗತ್ಯವಿಲ್ಲ,’ ಎಂದು ಅವರು ಹೇಳಿದರು. 

‘ಸದ್ಯ ಎನ್‌ಆರ್‌ಸಿ ಜಾರಿಯಾಗಿಲ್ಲ. ಅದು ಮಹಾರಾಷ್ಟ್ರದಲ್ಲಿ ಜಾರಿಯಾಗುವುದೂ ಇಲ್ಲ. ಕೇಂದ್ರ ಸರ್ಕಾರವೂ ಈ ವರೆಗೆ ಅದರ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಒಂದು ವೇಳೆ ಅದು ಜಾರಿಯಾದರೆ, ಹಿಂದೂ, ಮುಸ್ಲೀಮರಿಗಿಂತಲೂ ಹೆಚ್ಚಾಗಿ ಬುಡಕಟ್ಟು ಜನರಿಗೆ ತೊಂದರೆ ನೀಡಲಿದೆ,’ ಎಂದು ಉದ್ಧವ್‌ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.  

ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಷನಲಿಸ್ಟ್‌ ಕಾಂಗ್ರೆಸ್‌ನ ವರಿಷ್ಠ ಶರದ್‌ ಪವಾರ್‌, ‘ನಾವು ಈ ವಿಚಾರವಾಗಿ ಉದ್ಧವ್‌ ಠಾಕ್ರೆ ಮತ್ತು ಶಿವಸೇನೆ ಜೊತೆಗೆ ಚರ್ಚೆ ಮಾಡುತ್ತೇವೆ. ಎರಡೂ ಪಕ್ಷಗಳೂ ಒಮ್ಮತಕ್ಕೆ ಬರುತ್ತೇವೆ,’ ಎಂದು ಹೇಳಿದ್ದಾರೆ. 

ಸಿಎಎ ಮತ್ತು ಎನ್‌ಆರ್‌ಸಿಗೆ ಶರದ್‌ ಪವಾರ್‌ ಅವರ ಪಕ್ಷ ಮತ್ತು ಕಾಂಗ್ರೆಸ್‌ ಪ್ರಬಲ ವಿರೋಧ ಹೊಂದಿವೆ. ಹೀಗಾಗಿ ಈ ವಿಚಾರ ಮಹಾರಾಷ್ಟ್ರ ಮೈತ್ರಿ ಸರ್ಕಾರದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು