ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ನೀಡಬೇಕೇ ಎಂದು ಕೇಳಿದ್ದ ಮನ್‌ಮೋಹನ್‌ ಸಿಂಗ್‌ ‌

Last Updated 16 ಫೆಬ್ರುವರಿ 2020, 15:01 IST
ಅಕ್ಷರ ಗಾತ್ರ

ನವದೆಹಲಿ: ಯುಪಿಎ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹರಿದು ಹಾಕಿದ ನಂತರ ಮನಮೋಹನ್‌ ಸಿಂಗ್‌ ಅವರು ತಾನು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೇ ಎಂದು ಆಗಿನ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ ಅವರನ್ನು ಕೇಳಿದ್ದರಂತೆ. ‌

ಅಹ್ಲುವಾಲಿಯಾ ಅವರು ಬರೆದಿರುವ ‘ಬ್ಯಾಕ್‌ಸ್ಟೇಜ್‌:ದಿ ಸ್ಟೋರಿ ಬಿಹೈಂಡ್‌ ಇಂಡಿಯಾಸ್‌ ಹೈಗ್ರೋತ್‌ ಇಯರ್ಸ್‌’ ಪುಸ್ತಕದಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ. ಅಪರಾಧಿಗಳು ಎಂದು ಸಾಬೀತಾದ ಜನಪ್ರತಿನಿಧಿಗಳ ವಿಚಾರಕ್ಕೆ ಸಂಬಂಧಿಸಿದಂತೆ 2013ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಅಸಿಂಧುಗೊಳಿಸಲು ಯುಪಿಎ ಸರ್ಕಾರ ಸುಗ್ರೀವಾಜ್ಞೆ ತಂದಿತ್ತು. ಇದನ್ನು ‘ಅಸಂಬದ್ಧ’ ಎಂದು ಬಹಿರಂಗವಾಗಿ ಟೀಕಿಸಿದ್ದ ರಾಹುಲ್‌ ಗಾಂಧಿ ಅದರ ಪ್ರತಿಯನ್ನು ಹರಿದು ಹಾಕಿದ್ದರು. ಇದು ಸರ್ಕಾರಕ್ಕೆ ಭಾರಿ ಮುಜುಗರ ತಂದಿತ್ತು.

‘ನಾವು ಪ್ರಧಾನಿ ಜೊತೆಗಿನ ನಿಯೋಗದಲ್ಲಿ ಅಮೆರಿಕಕ್ಕೆ ತೆರಳಿದ್ದೆವು. ಐಎಎಸ್‌ನಿಂದ ನಿವೃತ್ತಿ ಹೊಂದಿದ ನನ್ನ ಸಹೋದರ, ಪ್ರಧಾನಿ ಕುರಿತು ವಿಮರ್ಶಾತ್ಮಕ ಲೇಖನವೊಂದನ್ನು ಬರೆದಿರುವುದಾಗಿ ತಿಳಿಸಿದ. ಅದನ್ನು ಇ–ಮೇಲ್‌ ಮಾಡಿದ್ದ. ಇದು ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರವೂ ಆಯಿತು. ಲೇಖನವನ್ನು ಮನ್‌ಮೋಹನ್‌ ಸಿಂಗ್‌ ಅವರಿಗೆ ತೋರಿಸಿದ್ದೆ. ಅದನ್ನು ಅವರು ಓದಿ,ಮೊದಲಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಏಕಾಏಕಿ ನಾನು ರಾಜೀನಾಮೆ ನೀಡಬೇಕು ಎಂದು ನಿನಗನಿಸುತ್ತಿದೆಯೇ ಎಂದು ಪ್ರಶ್ನಿಸಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯವನ್ನು ನಾನು ವ್ಯಕ್ತಪಡಿಸಿದ್ದೆ’ ಎಂದು ಅಹ್ಲುವಾಲಿಯಾ ಬರೆದಿದ್ದಾರೆ.

‘ರಾಹುಲ್‌ಗಾಂಧಿ ಪಕ್ಷದಲ್ಲಿ ಮಹತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎನ್ನುವ ಬಯಕೆ ಕಾಂಗ್ರೆಸ್ಸಿಗರಲ್ಲಿ ಇತ್ತು. ಇಂಥ ಸಂದರ್ಭದಲ್ಲಿ ಸುಗ್ರೀವಾಜ್ಞೆಯನ್ನು ಸಚಿವ ಸಂಪುಟದಲ್ಲಿ ಹಾಗೂ ಬಹಿರಂಗವಾಗಿ ಬೆಂಬಲಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರು, ರಾಹುಲ್‌ ಹೇಳಿಕೆಯ ಬಳಿಕ ಸುಗ್ರೀವಾಜ್ಞೆಯನ್ನು ವಿರೋಧಿಸಲು ಆರಂಭಿಸಿದರು’ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT