ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಪಥದತ್ತ ‘ಪೌರತ್ವ’ ಹೋರಾಟ

Last Updated 23 ಡಿಸೆಂಬರ್ 2019, 3:36 IST
ಅಕ್ಷರ ಗಾತ್ರ

ನವದೆಹಲಿ/ಲಖನೌ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಹೋರಾಟವು ಭಾನುವಾರದ ವೇಳೆಗೆ ಶಾಂತಿಯುತ ಪ್ರತಿಭಟನೆಯ ರೂಪ ಪಡೆದಿದೆ. ಇದೇ ವೇಳೆ ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿ ಮತ್ತು ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರಿದಿದೆ. ಉತ್ತರ ಪ್ರದೇಶದ ಹಲವೆಡೆ ಭಾನುವಾರವೂ ಇಂಟರ್‌ನೆಟ್‌ ಅನ್ನು ಸ್ಥಗಿತಗೊಳಿಸಲಾಗಿತ್ತು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಜೈಪುರದಲ್ಲಿ ಮೌನ ಮೆರವಣಿಗೆ ನಡೆಸಿದರು.ಮೂರು ಲಕ್ಷಕ್ಕೂ ಹೆಚ್ಚು ಜನರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್‌ ನಾಯಕರು ಮತ್ತು ಸಾವಿರಾರು ಸಂಖ್ಯೆಯಲ್ಲಿದ್ದ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಎಡಪಕ್ಷಗಳು, ಬಿಎಸ್‌ಪಿ, ಆರ್‌ಜೆಡಿ ಪಕ್ಷಗಳ ಕಾರ್ಯಕರ್ತರೂ ಮೌನ ಮೆರವಣಿಗೆಯಲ್ಲಿ ಭಾಗಿಯಾದರು.35 ಮುಸ್ಲಿಂ ಸಂಘಟನೆಗಳು ಬೇರೆ–ಬೇರೆ ಕಡೆಗಳಿಂದ ಮೆರವಣಿಗೆ ಆರಂಭಿಸಿ, ಕಾಂಗ್ರೆಸ್‌ನ ಮೆರವಣಿಗೆ ಜತೆ ವಿಲೀನವಾದವು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧದ ಬರಹಗಳಿದ್ದ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಲಾಯಿತು. ಆದರೆ, ಒಂದೂ ಘೋಷಣೆ ಕೂಗದೆ ಮೆರವಣಿಗೆಯ ಮೌನವನ್ನು ಕಾಯ್ದುಕೊಳ್ಳಲಾಯಿತು.

ಮೆರವಣಿಗೆಯು ಜೈಪುರದ ಗಾಂಧೀ ವೃತ್ತವನ್ನು ತಲುಪಿದ ನಂತರ ಲಕ್ಷಾಂತರ ಜನರು ‘ನಾವು ಗೆದ್ದೇ ಗೆಲ್ಲುವೆವು...’ ಕ್ರಾಂತಿಗೀತೆಯನ್ನು ಸಾಮೂಹಿಕವಾಗಿ ಹಾಡಿದರು.

ಗುವಾಹಟಿಯಲ್ಲಿ ನಿಲ್ಲದ ಉಪವಾಹ ಸತ್ಯಾಗ್ರಹ:ಗುವಾಹಟಿಯಲ್ಲಿ ಡಿಸೆಂಬರ್ 8ರಿಂದ ನಡೆಯುತ್ತಿರುವ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ಭಾನುವಾರವೂ ಮುಂದುವರಿದಿತ್ತು. ಭಾನುವಾರವೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಒಂದು ದಿನದ ಉಪವಾಸ ಸತ್ಯಾಗ್ರಾಹ ನಡೆಸಿದರು.

ಬಂಧಿತರ ಪರ ಸಾರ್ವಜನಿಕರ ಪ್ರತಿಭಟನೆ:ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಹಲ್ಲೆ ಹಾಗೂ ದರಿಯಾಗಂಜ್‌ ಹಿಂಸಾಚಾರ ಪ್ರಕರಣದಲ್ಲಿ ಪ್ರತಿಭಟನಕಾರರನ್ನು ಬಂಧಿಸಿರುವುದನ್ನು ವಿರೋಧಿಸಿ ಸಾರ್ವಜನಿಕರು ದೆಹಲಿಯ ಹಲವೆಡೆ ಶಾಂತಿಯುತ ಮೆರವಣಿಗೆ ನಡೆಸಿದರು.

ವಿದ್ಯಾರ್ಥಿಗಳು, ಮಕ್ಕಳು, ವೃದ್ಧರು, ದೆಹಲಿ ವೈದ್ಯರ ಸಂಘಟನೆಯ ಸದಸ್ಯರು ಮೆರವಣಿಗೆ ನಡೆಸಿದರು. ಎಲ್ಲರೂ ದೆಹಲಿಯ ‘ಸೆಂಟ್ರಲ್‌ ಪಾರ್ಕ್‌’ನಲ್ಲಿ ಸೇರಿ ಪ್ರತಿಭಟನೆ ನಡೆಸಿದರು.ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿದರು. ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು. ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸುವ ಫಲಕಗಳನ್ನು ಪ್ರದರ್ಶಿಸಿದರು.

ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆ: ತಮಿಳುನಾಡಿನ ಚೆನ್ನೈನಲ್ಲಿ ಭಾನುವಾರ ಭಾರಿ ಪ್ರತಿಭಟನೆ ನಡೆದಿದೆ. ರಾಜ್ಯದ ಹಲವೆಡೆಯೂ ಪ್ರತಿಭಟನೆ ನಡೆದಿವೆ. ಆದರೆ, ಎಲ್ಲಾ ಪ್ರತಿಭಟನೆಗಳು ಶಾಂತಿಯುತವಾಗಿ ನಡೆದಿವೆ.

ಪಶ್ಚಿಮ ಬಂಗಾಳದ ಕೋಲ್ಕತ್ತ, ಉತ್ತರಾಖಂಡದ ಹರಿದ್ವಾರ, ಅಸ್ಸಾಂನ ಸೋನಿತಪುರ, ಮಹಾರಾಷ್ಟ್ರದ ಮುಂಬೈನಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆದಿವೆ.

ಈ ಕಾಯ್ದೆ ತಡೆಗೆ ಎರಡು ಮಾರ್ಗ : ಪ್ರಶಾಂತ್ ಕಿಶೋರ್

ಈ ಕಾಯ್ದೆಯನ್ನು ತಡೆಯಲು 2 ಮಾರ್ಗಗಳಿವೆ. ಎಲ್ಲೆಡೆ ಇವುಗಳ ವಿರುದ್ಧ ದನಿ ಎತ್ತಬೇಕು. ಬಿಜೆಪಿಯೇತರ ಸರ್ಕಾರವಿರುವ 19 ರಾಜ್ಯಗಳು ಇವಕ್ಕೆ ‘ಇಲ್ಲ’ ಎನ್ನಬೇಕು ಎಂದುಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಗಮನ ಬೇರೆಡೆ ಸೆಳೆಯಲು ಈ ತಂತ್ರ: ಅಖಿಲೇಶ್ ಯಾದವ್

ಕುಸಿಯುತ್ತಿರುವ ಆರ್ಥಿಕತೆಯಿಂದ ಗಮನ ಬೇರೆಡೆ ಸೆಳೆಯಲು ಬಿಜೆಪಿ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಇರಲಿ, ‘ವಸುಧೈವ ಕುಟುಂಬಕಂ’ ಎಂಬುದರ ಅರ್ಥವನ್ನು ಪ್ರಧಾನಿ ವಿವರಿಸಲಿ ಎಂದುಎಸ್‌ಪಿ ಮುಖ್ಯಸ್ಥಅಖಿಲೇಶ್ ಯಾದವ್ ಹೇಳಿದ್ದಾರೆ.

ಅನುಕಂಪ ಗಿಟ್ಟಿಸಲು ಚಂದ್ರಶೇಖರ್ ಆಜಾದ್ ತಂತ್ರ

ದೆಹಲಿಯಲ್ಲಿ ಚುನಾವಣೆ ನಡೆಯಬೇಕಿದೆ. ಬಿಎಸ್‌ಪಿಯ ಮತಗಳನ್ನು ಕಸಿಯಲೆಂದೇ ಚಂದ್ರಶೇಖರ್ ಆಜಾದ್ ಪ್ರತಿಭಟನೆ ನಡೆಸಿ, ಅನುಕಂಪ ಗಿಟ್ಟಿಸುತ್ತಿದ್ದಾನೆ ಬಿಎಸ್‌ಪಿ ಮುಖ್ಯಸ್ಥೆಮಾಯಾವತಿ ಹೇಳಿದ್ದಾರೆ.

‘ಏನು ಮಾಡಬಲ್ಲ ನಾಝೀ’

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ದೇಶದಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ಘೋಷಣಾ ಫಲಕಗಳು ರಾರಾಜಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಘೋಷಣೆಗಳಲ್ಲಿ ಕೆಲವು ಇಲ್ಲಿವೆ.

* ‘ಹಿಂದೂ–ಮುಸ್ಲಿಮರು ಆದರೆ ರಾಜಿ, ಏನು ಮಾಡಬಲ್ಲ ನಾಝೀ’

*‘ಮೋದಿಜೀ ನಿಮ್ಮ ಪದವಿ ಪತ್ರ ತೋರಿಸಿ, ನನ್ನ ದಾಖಲೆ ತೋರಿಸುತ್ತೇನೆ’

* ‘ನಮಗೆ ಗುಂಡು ಹೊಡೆಯಬಹುದು. ನಮ್ಮ ಯೋಚನೆಗಳು ಗುಂಡುನಿರೋಧಕ’

* ‘ರಫೇಲ್ ದಾಖಲೆಗಳನ್ನು ಕದ್ದ ಕಳ್ಳನೇ ನನ್ನ ದಾಖಲೆಗಳನ್ನೂ ಕದ್ದಿದ್ದಾನೆ’

* ‘ಇದು ಜಾತ್ಯತೀತ ಭಾರತ. ಒಡೆದು ಆಳುವ ನೀತಿಯನ್ನು ಧಿಕ್ಕರಿಸಿ’

* ‘ನನ್ನ ದಾಖಲೆಗಳನ್ನು ಎಲ್ಲಿಟ್ಟಿರುವೆ ಎಂಬುದನ್ನು ಹೇಳದೆ, ನನ್ನ ಅಪ್ಪ 1987ಕ್ಕೂ ಮುನ್ನವೇ ಸತ್ತಿದ್ದಾನೆ’

*‘ಬೋಲೊ ಪೆನ್ಸಿಲ್‌, ಮೋದಿ ತೇರಿ ಸರ್ಕಾರ್ ಕ್ಯಾನ್ಸಲ್‌’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT