ಮಂಗಳವಾರ, ನವೆಂಬರ್ 19, 2019
28 °C
ಪರಿಹಾರ ಕಂಡು ಹಿಡಿಯುವಂತೆ ಮುಖ್ಯಮಂತ್ರಿ ಕೇಜ್ರಿವಾಲ್ ರಿಂದ ಕೇಂದ್ರಕ್ಕೆ ಮೊರೆ

ದೆಹಲಿಯಲ್ಲಿ ದಟ್ಟ ಹೊಗೆ: ವಿಮಾನ ಸಂಚಾರಕ್ಕೆ ಅಡ್ಡಿ, 32 ವಿಮಾನಗಳ ಮಾರ್ಗ ಬದಲಾವಣೆ

Published:
Updated:

ನವದೆಹಲಿ: ವಿಪರೀತ ವಾಯುಮಾಲಿನ್ಯದಿಂದ ನರಳುತ್ತಿರುವ ರಾಜಧಾನಿ ದೆಹಲಿಯಲ್ಲಿ ಭಾನುವಾರ ಬೆಳಿಗ್ಗೆ ದಟ್ಟವಾದ ಹೊಗೆ ಕಾಣಿಸಿಕೊಂಡು ಕತ್ತಲು ಆವರಿಸಿಕೊಂಡ ಪರಿಣಾಮ ದೆಹಲಿ ವಿಮಾನ ನಿಲ್ದಾಣಕ್ಕೆ ಬರಬೇಕಾಗಿದ್ದ 32 ವಿಮಾನಗಳ ಮಾರ್ಗ ಬದಲಿಸಲಾಗಿದೆ.

ದೆಹಲಿಯಲ್ಲಿ ಉಸಿರಾಡುವ ಗಾಳಿ ಅಗತ್ಯ ಇರುವ ಗುಣಮಟ್ಟಕ್ಕಿಂದ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಬೆಳಿಗ್ಗೆ ಮಳೆಯಾಗಿದ್ದು, 9ರ ಸಮಯದಲ್ಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತು. ಇದರಿಂದಾಗಿ ವಿಮಾನ ನಿಲ್ದಾಣಗಳು ಇಳಿಯಲು ತೀರಾ ಸಮಸ್ಯೆಯಾಗುತ್ತಿತ್ತು ಎನ್ನಲಾಗಿದೆ.

ಈ ಸಂಬಂಧ ದೆಹಲಿ ವಿಮಾನನಿಲ್ದಾಣ ಪ್ರಾಧಿಕಾರ ಟ್ವೀಟ್ ಮಾಡಿದ್ದು, ದಟ್ಟ ಹೊಗೆಯಿಂದ ವಿಮಾನಗಳ ಕಾರ್ಯಾಚರಣೆ ತಡವಾಗುತ್ತಿದ್ದು, ಪ್ರಯಾಣಿಕರು ಹೆಚ್ಚಿನ ವಿವರಗಳಿಗಾಗಿ ಸಂಬಂಧ ಪಟ್ಟ ವಿಮಾನ ಸಂಸ್ಥೆಗಳಿಗೆ ದೂರವಾಣಿ ಕರೆ ಮಾಡಿ ಮುಂದಿನ ಬದಲಾವಣೆಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದೆ.

ಹವಾಮಾನ ವೈಪರೀತ್ಯದಿಂದಾಗಿ ಬೆಳಿಗ್ಗೆ 9ಗಂಟೆಯಿಂದ  12 ವಿಮಾನಗಳ ಮಾರ್ಗ ಬದಲಾಯಿಸಲಾಗಿದ್ದು, ಲಕ್ನೋ, ಜೈಪುರ, ಅಮೃತಸರ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

 ಕೇಂದ್ರಕ್ಕೆ ಕೇಜ್ರಿವಾಲ್ ಮೊರೆ

ದೆಹಲಿಯಲ್ಲಿ ಕಲುಷಿತ ಗಾಳಿ ತುಂಬಿಕೊಂಡಿದೆ. ಆಮ್ಲಜನಕ ಉಸಿರಾಡಲು ಯೋಗ್ಯವಲ್ಲದ ಮಟ್ಟಕ್ಕೆ ತಲುಪಿದೆ. ದೆಹಲಿ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಪರಿಹಾರೋಪಾಯಗಳನ್ನು ಕಂಡು ಹಿಡಿಯಬೇಕೆಂದು ಟ್ವೀಟ್ ಮಾಡಿದ್ದಾರೆ.

 

ದೆಹಲಿಯಲ್ಲಿ ಈಗಾಗಲೇ ಉಸಿರಾಡುವ ಗಾಳಿ ಕೆಟ್ಟಿದ್ದು, ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಈ ಮಧ್ಯೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶುಕ್ರವಾರದಿಂದ ದೆಹಲಿಯಲ್ಲಿ 'ಹೆಲ್ತ್ ಎಮರ್ಜೆನ್ಸಿ' ಘೋಷಿಸಲಾಗಿದೆ. ಅಲ್ಲದೆ, ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಅಲ್ಲದೆ, ದೆಹಲಿ ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳನ್ನೂ ನವೆಂಬರ್ 5ರವರೆಗೂ ಸ್ಥಗಿತಗೊಳಿಸಲಾಗಿದೆ. ಆದರೂ ವಾಯುಮಾಲಿನ್ಯ ದಿನೇ ದಿನೇ ಹೆಚ್ಚುತ್ತಲಿದೆ.

ಇದನ್ನೂ ಓದಿ: ಬಿಗಡಾಯಿಸಿತು ವಾಯುಮಾಲಿನ್ಯ: ದೆಹಲಿಯಲ್ಲಿ ತುರ್ತುಸ್ಥಿತಿ, ಆವರಿಸಿದೆ ಹೊಗೆಯ ಮೋಡ

ಪ್ರತಿಕ್ರಿಯಿಸಿ (+)