ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಡಾಯಿಸಿತು ವಾಯುಮಾಲಿನ್ಯ: ದೆಹಲಿಯಲ್ಲಿ ತುರ್ತುಸ್ಥಿತಿ, ಆವರಿಸಿದೆ ಹೊಗೆಯ ಮೋಡ

Last Updated 1 ನವೆಂಬರ್ 2019, 10:11 IST
ಅಕ್ಷರ ಗಾತ್ರ

ನವದೆಹಲಿ: ದೀಪಾವಳಿ ನಂತರ ಮಾಲಿನ್ಯದ ಮಟ್ಟ ವಿಪರೀತ ಎನ್ನುವಷ್ಟು ಹೆಚ್ಚಾದ ಹಿನ್ನೆಲೆಯಲ್ಲಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಪ್ರಾಧಿಕಾರವು ತುರ್ತುಸ್ಥಿತಿ ಘೋಷಿಸಿದೆ.

ನವೆಂಬರ್ 5ರವರೆಗೆ ದೆಹಲಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿಷೇಧ ಹೇರಲಾಗಿದೆ. ಗುರುವಾರ ರಾತ್ರಿಯ ನಂತರ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ‘ಸಿವಿಯರ್ ಪ್ಲಸ್‌’ ಅಥವಾ ‘ಎಮರ್ಜೆನ್ಸಿ’ (ಗಂಭೀರ) ಮಟ್ಟಕ್ಕೆ ತಲುಪಿತು. ಜನವರಿ ನಂತರ ಈ ಮಟ್ಟದ ಮಾಲಿನ್ಯ ಕಂಡುಬಂದಿದ್ದು ಇದೇ ಮೊದಲು.

ಚಳಿಗಾಲ ಮುಗಿಯುವವರೆಗೂ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪಟಾಕಿ ಸುಡುವಂತಿಲ್ಲ ಎಂದು ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಹೇಳಿದೆ.

ಶಾಲಾ ಮಕ್ಕಳಿಗೆ ಮುಖಗವಸು ವಿತರಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು ನಗರದ ಪರಿಸ್ಥಿತಿಯನ್ನು ‘ಗ್ಯಾಸ್‌ ಛೇಂಬರ್’ಗೆ ಹೋಲಿಸಿದ್ದರು. ಅಕ್ಕಪಕ್ಕದ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣಗಳಲ್ಲಿ ರೈತರು ವ್ಯಾಪಕವಾಗಿ ಗೋಧಿ ಹುಲ್ಲು ಸುಡುವುದರಿಂದಲೇ ದೆಹಲಿಯಲ್ಲಿ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆಎಂದು ದೂರಿದ್ದರು.

48 ಗಂಟೆಗಳಿಗೂ ಹೆಚ್ಚು ಕಾಲ ಗಾಳಿಯ ಗುಣಮಟ್ಟ ‘ಸಿವಿಯರ್ ಪ್ಲಸ್’ ಮಟ್ಟದಲ್ಲಿಯೇ ಇದ್ದರೆ ಪ್ರಾಧಿಕಾರ ತುರ್ತುಕ್ರಮಗಳನ್ನು ಘೋಷಿಸುತ್ತದೆ. ಟ್ರಕ್‌ಗಳಿಗೆ ನಗರ ಪ್ರವೇಶ ನಿಷೇಧ, ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ನಿರ್ಬಂಧ, ಶಾಲೆಗಳಿಗೆ ರಜೆ ಘೋಷಿಸುವುದು ಮತ್ತು ಸರಿ–ಬೆಸ ಸಂಖ್ಯೆಯ ಕಾರುಗಳ ಸಂಚಾರ ನಿಯಮ ಜಾರಿಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂಜಾನೆಯ ವಾಕಿಂಗ್‌ ಮತ್ತು ಕೆಲಸಕ್ಕೆ ಹೋಗಲು ಬಹುತೇಕ ಸಾರ್ವಜನಿಕರು ಇಂದು ಮುಖಗವಸು ಬಳಸಿದರು.

ದೆಹಲಿ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ‘ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು ಕೇವಲ ಪಂಜಾಬ್–ಹರಿಯಾಣಗಳನ್ನು ದೂಷಿಸುತ್ತಿದ್ದರೆ ಪ್ರಯೋಜವಿಲ್ಲ. ಮಾಲಿನ್ಯಕಾರಕಗಳನ್ನು ಹೊರಸೂಸುವ ಕಾರ್ಖಾನೆಗಳಿಗೆ ನಿರ್ಬಂಧ ವಿಧಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾಪದ ಬಗ್ಗೆಯೂ ಗಮನ ಹರಿಸಬೇಕು’ ಎಂದು ಕಟಕಿಯಾಡಿದ್ದಾರೆ.

ಟ್ರೆಂಡ್ ಆಯ್ತು #DelhiAirQuality

ಸಾಮಾಜಿಕ ಮಾಧ್ಯಮಗಳಲ್ಲಿ #DelhiAirQuality ಹ್ಯಾಷ್‌ಟ್ಯಾಗ್‌ ಬಳಸಿ ಸಾಕಷ್ಟು ಜನರು ದೆಹಲಿಯ ಸ್ಥಿತಿಗೆ ಕನ್ನಡಿ ಹಿಡಿದಿದ್ದಾರೆ. ಗಮನ ಸೆಳೆದ ಪೋಸ್ಟ್‌ಗಳು ಇಲ್ಲಿವೆ.

ಬೆಂಗಳೂರಿನಲ್ಲಿಈ ವರ್ಷ ಕಡಿಮೆ

ಕಳೆದ ವರ್ಷದ ದೀಪಾವಳಿ ಸಂದರ್ಭಕ್ಕೆ ಹೋಲಿಸಿದರೆ, ಈ ಬಾರಿ ದೀಪಾವಳಿ ವೇಳೆ ನಗರದಲ್ಲಿನ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ.ಈ ಕುರಿತು ಬುಧವಾರ ದತ್ತಾಂಶ ಬಿಡುಗಡೆ ಮಾಡಿದ್ದರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಕಳೆದ ವರ್ಷಕ್ಕೆ ಹೋಲಿಸಿದರೆ, ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಶೇ 26.7ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ.

‘ಹಬ್ಬದ ಸಂದರ್ಭದಲ್ಲಿಯೇ ಮಳೆ ಬಂದಿದ್ದರಿಂದ ಹೆಚ್ಚು ಜನರಿಗೆ ಪಟಾಕಿ ಹೊಡೆಯಲು ಸಾಧ್ಯವಾಗಿಲ್ಲ. ಮಾಲಿನ್ಯ ಪ್ರಮಾಣ ಕಡಿಮೆಯಾಗಲು ಇದೇ ಪ್ರಮುಖ ಕಾರಣ’ ಎಂದು ಮಂಡಳಿಯ ಕಾರ್ಯದರ್ಶಿ ಬಸವರಾಜ ಪಾಟೀಲ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT