ಬುಧವಾರ, ಜನವರಿ 27, 2021
23 °C
ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಕೆ: ಕಾಂಗ್ರೆಸ್‌ ಆರೋಪ, ಅನರ್ಹಕ್ಕೆ ಒತ್ತಾಯ

ಬದಲಾಗುತ್ತಲೇ ಸಾಗಿದ ಸ್ಮೃತಿ ಇರಾನಿ ವಿದ್ಯಾರ್ಹತೆ

(ಪಿಟಿಐ) Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಚುನಾವಣಾ ಆಯೋಗಕ್ಕೆ ಪರಸ್ಪರ ತಾಳೆಯಾಗದಂಥ ಪ್ರಮಾಣಪತ್ರಗಳನ್ನು ಅಲ್ಲಿಸಿದ್ದು, ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಸ್ಮೃತಿ ಅವರನ್ನು ಟೀಕಿಸಲು ಹಿಂದೆ ಅವರು ನಟಿಸಿದ್ದ ‘ಕ್ಯೊಂ ಕಿ ಸಾಸ್‌ ಭೀ ಕಭೀ ಬಹು ಥೀ’ ಟಿ.ವಿ. ಧಾರಾವಾಹಿಯ ಹಾಡಿನ ಸಾಲುಗಳನ್ನು ಬಳಸಿಕೊಂಡ ಕಾಂಗ್ರೆಸ್‌ನ ವಕ್ತಾರರಾದ ಪ್ರಿಯಾಂಕಾ ಚತುರ್ವೇದಿ, ಆ ಸಾಲುಗಳನ್ನು ‘ಕ್ವಾಲಿಫಿಕೇಶನ್ ಕೆ ರೂಪ್‌ ಬದಲ್‌ತೇ ಹೈಂ... ಕ್ಯೋಂಕಿ ಮಂತ್ರಿ ಭಿ ಕಭಿ ಗ್ರಾಜುಯೇಟ್‌ ಥೀ’ ಎಂದು ಲೇವಡಿ ಮಾಡಿದರು.

ಅಮೇಠಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಸ್ಮೃತಿ, ಚುನಾವಣಾ ಆಯೋಗಕ್ಕೆ ನೀಡಿರುವ ಪ್ರಮಾಣಪತ್ರದಲ್ಲಿ ತಾವು ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪುರ್ಣಗೊಳಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

‘ಅವರು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ ಎಂದು ನಾವು ಹಿಂದೆಯೇ ಹೇಳಿದ್ದೆವು. ಆಗ ಅದನ್ನು ನಿರಾಕರಿಸಿದ್ದ ಸ್ಮೃತಿ, ಈಗ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ, ತಾವು ಪದವಿ ಶಿಕ್ಷಣಕ್ಕೆ ಹೆಸರು ನೋಂದಾಯಿಸಿದ್ದರೂ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ವಿರೋಧಾಭಾಸದ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಅವರು ಜನರ ಹಾದಿ ತಪ್ಪಿಸಿದ್ದಾರೆ. ಅವರನ್ನು ಸ್ಪರ್ಧೆಗೆ ಅನರ್ಹಗೊಳಿಸಬೇಕು’ ಎಂದು ಪ್ರಿಯಾಂಕಾ ಒತ್ತಾಯಿಸಿದರು.

‘ಸ್ಮೃತಿ ಅವರು ಶಿಕ್ಷಣ ಪೂರ್ಣಗೊಳಿಸದಿರುವುದರ ಬಗ್ಗೆ ನಮಗೆ ಆಕ್ಷೇಪ ಇಲ್ಲ. ಆದರೆ ಅವರು ನ್ಯಾಯಾಲಯವೂ ಸೇರಿದಂತೆ ಎಲ್ಲ ಕಡೆ ಸುಳ್ಳು ಹೇಳುತ್ತಾ ಬಂದಿದ್ದಾರೆ. ವಿರೋಧಾಭಾಸದ ಪ್ರಮಾಣಪತ್ರಗಳನ್ನು ನೀಡಿರುವ ಅವರು ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 125ಎ ಮತ್ತು 33ರ ಪ್ರಕಾರ ಅಪರಾಧಿಯಾಗುತ್ತಾರೆ. ಅವರು ಈಗಿಂದೀಗಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

2004ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಚಾಂದಿನಿಚೌಕ್‌ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದಾಗ ಸ್ಮೃತಿ ಅವರು, 1996ರಲ್ಲಿ ದೆಹಲಿ ವಿ.ವಿ.ಯ ಅಂಚೆತೆರಪಿನ ಶಿಕ್ಷಣದ ಮೂಲಕ ಬಿ.ಎ. ಪದವಿ ಪಡೆದಿದ್ದಾಗಿ ಪ್ರಮಾಣಪತ್ರ ಸಲ್ಲಿಸಿದ್ದರು. 2011ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂದರ್ಭದಲ್ಲಿ ದೆಹಲಿ ವಿ.ವಿ.ಯ ಅಂಚೆ ತೆರಪಿನ ಶಿಕ್ಷಣದ ಮೂಲಕ ಬಿ.ಕಾಂ. ಮೊದಲ ವರ್ಷದ ಶಿಕ್ಷಣ ಪೂರ್ಣಗೊಳಿಸಿದ್ದಾಗಿ ಹೇಳಿದ್ದರು. 2014ರ ಚುನಾವಣೆಯಲ್ಲಿ ಅಮೇಠಿಯಿಂದ ಸ್ಪರ್ಧಿಸಿದಾಗಲೂ ಅದನ್ನೇ ಉಲ್ಲೇಖಿಸಿದ್ದರು. 2014ರ ಆಗಸ್ಟ್‌ ತಿಂಗಳಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ತಾವು ಅಮೆರಿಕದ ಯೇಲ್‌ ವಿಶ್ವವಿದ್ಯಾಲಯದ ಪದವೀಧರೆ ಎಂದು ಹೇಳಿದ್ದೂ ವರದಿಯಾಗಿತ್ತು.

ಗುರುವಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ 1991ರಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು 1993ರಲ್ಲಿ ಸೀನಿಯರ್‌ ಸೆಕೆಂಡರಿ (12ನೇ ತರಗತಿ) ಶಿಕ್ಷಣ ಮುಗಿಸಿರುವುದಾಗಿ ಸ್ಮೃತಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು