ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕರ ಭದ್ರತೆಯಲ್ಲಿ ರಾಜಕೀಯ ಬೇಡ: ಕಾಂಗ್ರೆಸ್‌

ಮನಮೋಹನ್‌, ಸೋನಿಯಾ ಕುಟುಂಬದ ಎಸ್‌ಪಿಜಿ ರಕ್ಷಣೆ ರದ್ದು: ರಾಜ್ಯಸಭೆಯಲ್ಲಿ ಪ್ರತಿಧ್ವನಿ
Last Updated 20 ನವೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆ ವಾಪಸ್ ಪಡೆದ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿರುವ ಕಾಂಗ್ರೆಸ್, ನಾಯಕರ ಭದ್ರತೆ ವಿಚಾರದಲ್ಲಿ ರಾಜಕೀಯ ಬೆರೆಸಬೇಡಿ ಎಂದು ಮನವಿ ಮಾಡಿದೆ.

ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಉಪನಾಯಕ ಆನಂದ್ ಶರ್ಮಾ, ‘ಭದ್ರತೆ ಹಿಂಪಡೆ
ದಿರುವ ಎಲ್ಲರ ಜೀವಕ್ಕೂ ಅಪಾಯವಿದೆ. ಮನಮೋಹನ್ ಸಿಂಗ್ ಅವರು 10 ವರ್ಷ ದೇಶದ ಪ್ರಧಾನಿಯಾಗಿದ್ದರು. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಹತ್ಯೆ ಆಗಿದೆ. ಸೋನಿಯಾ ಗಾಂಧಿ ಕುಟುಂಬಕ್ಕೂ ಬೆದರಿಕೆಯಿದೆ’ ಎಂದು ವಿವರಿಸಿದರು.

‘ವಿಷಯವನ್ನು ರಾಜಕೀಯಗೊಳಿಸಲು ನಾನು ಬಯಸುವುದಿಲ್ಲ. ಯುಪಿಎ ಸರ್ಕಾರ 10 ವರ್ಷ ಅಧಿಕಾರದಲ್ಲಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರ ಭದ್ರತೆ ವಿಷಯದಲ್ಲಿ ಎಂದೂ ಮಧ್ಯಪ್ರವೇಶಿಸಿರಲಿಲ್ಲ. ವೈಯಕ್ತಿಕ ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ಎಂದಿಗೂ ಪಕ್ಷಪಾತ ಸಲ್ಲದು’ ಎಂದು ಆನಂದ್ ಶರ್ಮಾ ಹೇಳಿದರು.

ಬೆದರಿಕೆ ಎಲ್ಲಿದೆ ಎಂದು ಸ್ವಾಮಿ ಪ್ರಶ್ನೆ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮಾತನಾಡಿ, ‘ಸೋನಿಯಾ ಗಾಂಧಿ ಅವರ ಕುಟುಂಬಕ್ಕೆ ಇದ್ದ ಬೆದರಿಕೆಯನ್ನು ಪರಾಮರ್ಶಿಸಿ ಗೃಹಸಚಿವಾಲಯ ನಿರ್ಧಾರ ತೆಗೆದುಕೊಂಡಿದೆ. ಅವರ ಕುಟುಂಬಕ್ಕಿದ್ದ ಬೆದರಿಕೆ ಈಗ ಕಣ್ಮರೆಯಾಗಿದೆ’ ಎಂದು ಅವರು ಹೇಳಿದರು.

ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಪಿಜಿ ಸಿಬ್ಬಂದಿಯೊಂದಿಗೆ ಸೋನಿಯಾ ಕುಟುಂಬದವರು ತಮ್ಮ ಪ್ರವಾಸದ ಕಾರ್ಯಕ್ರಮಗಳನ್ನು ಹಂಚಿಕೊಳ್ಳುತ್ತಿರಲಿಲ್ಲ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿದ್ದವು. ಇದೇ ಅರ್ಥದಲ್ಲಿ ಮಾತನಾಡಿರುವ ಸ್ವಾಮಿ ಅವರು, ಎಸ್‌ಪಿಜಿ ಭದ್ರತೆ ಒದಗಿಸುವ ಸಿಬ್ಬಂದಿಯನ್ನು ಕುಟುಂಬದವರು ನಡೆಸಿಕೊಳ್ಳುವ ರೀತಿ ಸರಿಯಿರಲಿಲ್ಲ ಎಂದು ಟೀಕಿಸಿದರು.

ಯುವ ಕಾಂಗ್ರೆಸ್ ಪ್ರತಿಭಟನೆ

ಸೋನಿಯಾ ಕುಟುಂಬದ ಎಸ್‌ಪಿಜಿ ಭದ್ರತೆ ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹಿಸಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

‍ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ಯತ್ನವನ್ನು ತಡೆದ ಪೊಲೀಸರು, ಶಾಸ್ತ್ರಿ ಭವನ, ಕೃಷಿ ಭವನ ಹಾಗೂ ಕೇಂದ್ರ ಸಚಿವಾಲಯದ ಮೆಟ್ರೊ ನಿಲ್ದಾಣಗಳ ಬಾಗಿಲುಗಳನ್ನು ಮುಚ್ಚಿದರು.

ಅಧಿವೇಶನ ನಡೆಯುತ್ತಿರುವ ಸಂಸತ್ ಭವನದ ಆವರಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಅದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದರು.

ಪೊಲೀಸರ ಎಚ್ಚರಿಕೆಗೆ ಕಿವಿಗೊಡದೆ ಬ್ಯಾರಿಕೇಡ್‌ಗಳ ಮೇಲೆ ಹತ್ತಿ ನುಗ್ಗಿಲು ಯತ್ನಿಸಿದಕಾರ್ಯಕರ್ತರನ್ನು ಬಂಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT