ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿಜಿ ವಾಪಸ್: ಲೋಕಸಭೆಯಲ್ಲಿ ಗದ್ದಲ

ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡಿದ್ದ ಭದ್ರತೆ ಹಿಂತೆಗೆತಕ್ಕೆ ಆಕ್ರೋಶ; ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆ
Last Updated 19 ನವೆಂಬರ್ 2019, 19:51 IST
ಅಕ್ಷರ ಗಾತ್ರ

ನವದೆಹಲಿ:ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‌ಪಿಜಿ (ವಿಶೇಷ ರಕ್ಷಣಾ ಪಡೆ) ಭದ್ರತೆಯನ್ನು ವಾಪಸ್ ಪಡೆದದ್ದನ್ನು ಖಂಡಿಸಿ ಲೋಕಸಭೆಯಲ್ಲಿಕಾಂಗ್ರೆಸ್ ಸದಸ್ಯರು ಮಂಗಳವಾರತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಈ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ನೀಡಬೇಕು ಎಂದು ಪಟ್ಟು ಹಿಡಿದರು.

ಭದ್ರತೆಯನ್ನು ಹಿಂಪಡೆದ ವಿಷಯವನ್ನು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅವರು ಪ್ರಸ್ತಾಪಿಸಿದರು. ವಿಷಯ ಪ್ರಸ್ತಾಪಿಸಲು ನೋಟಿಸ್ ನೀಡದ ಕಾರಣ ಅವರಿಗೆ ಚರ್ಚೆಗೆ ಅವಕಾಶ ನೀಡಲಿಲ್ಲ.

ಭದ್ರತೆ ಹಿಂತೆಗೆದುಕೊಂಡ ಬಗ್ಗೆ ನಿಲುವಳಿ ಸೂಚನೆ ಮಂಡಿಸುವ ನೋಟಿಸ್ ಅನ್ನು ಕಾಂಗ್ರೆಸ್ ನೀಡಿತ್ತು. ಆದರೆ ಸ್ಪೀಕರ್ ಓಂ ಬಿರ್ಲಾ ಅವರು ಅದನ್ನು ನಿರಾಕರಿಸಿದ್ದರಿಂದ ಚೌಧರಿ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಕಾಂಗ್ರೆಸ್‌ ಬೆಂಬಲಕ್ಕೆ ನಿಂತ ಡಿಎಂಕೆ ಸದಸ್ಯ ಟಿ.ಆರ್. ಬಾಲು ಅವರು, ‘ಭದ್ರತೆ ಹಿಂಪಡೆಯುವುದರಿಂದ ಸೋನಿಯಾ ಅವರ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸಿದಂತಾಗಿದೆ, ಸರ್ಕಾರ ಮತ್ತೆ ಎಸ್‌ಪಿಜಿ ಭದ್ರತೆ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

‘ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರು ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಕೂಡ ಸೋನಿಯಾ ಕುಟುಂಬದ ಭದ್ರತೆಯನ್ನು ವಾಪಸ್ ಪಡೆದಿರಲಿಲ್ಲ’ ಎಂದು ಚೌಧರಿ ತಿಳಿಸಿದರು. ಇದಕ್ಕೆ ಷಡ್ಯಂತ್ರ ರಚಿಸಿದವರು ಯಾರು ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು. ಸರ್ಕಾರದ ನಡೆ ಖಂಡಿಸಿ ಕಾಂಗ್ರೆಸ್ ಹಾಗೂ ಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದರು.

ಸೋನಿಯಾಗೆ 10 ವರ್ಷ ಹಳೆಯ ಕಾರು!

ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದ ಕಾರಣ, ಸೋನಿಯಾ ಗಾಂಧಿ ಅವರಿಗೆ 10 ವರ್ಷ ಹಳೆಯ ಟಾಟಾ ಸಫಾರಿ ಕಾರು ನೀಡಲಾಗಿದೆ. ಅವರ ನಿವಾಸಕ್ಕೆ ವಿಶೇಷ ಭದ್ರತಾ ಪಡೆಯ ಬದಲು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ‘ಎನ್‌ಡಿಟಿವಿ’ ಮಂಗಳವಾರ ವರದಿ ಮಾಡಿದೆ.

ಈವರೆಗೆ ಎಸ್‌ಪಿಜಿ ಭದ್ರತೆಯಲ್ಲಿದ್ದ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಬುಲೆಟ್‌ಪ್ರೂಫ್ ರೇಂಜ್ ರೋವರ್ ವಾಹನಗಳನ್ನು ಬಳಸುತ್ತಿದ್ದರು. ರಾಹುಲ್ ಗಾಂಧಿ ಅವರು ಫಾರ್ಚುನರ್ ಕಾರು ಉಪಯೋಗಿಸುತ್ತಿದ್ದರು.

ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆಯ ಬದಲಾಗಿ ‘ಝಡ್ ಪ್ಲಸ್‘ ಶ್ರೇಣಿಯ ಭದ್ರತೆ ಒದಗಿಸಲಾಗುತ್ತಿದೆ. ಕಠಿಣ ತರಬೇತಿ ಪಡೆದ ವಿಶೇಷ ಕಮಾಂಡೋಗಳ ಬದಲಾಗಿ ಕೇಂದ್ರೀಯ ಮೀಸಲು ಭದ್ರತಾ ಪಡೆ ಸಿಬ್ಬಂದಿ (ಸಿಆರ್‌ಪಿಎಫ್) ಭದ್ರತೆಯ ಹೊಣೆ ಹೊತ್ತಿದ್ದಾರೆ.

ಎಲ್‌ಟಿಟಿಇ ಉಗ್ರರಿಂದ ರಾಜೀವ್ ಗಾಂಧಿ ಅವರ ಹತ್ಯೆಯಾದ ಬಳಿಕ ಅವರ ಕುಟುಂಬಕ್ಕೆ ಅತಿಹೆಚ್ಚಿನ ಭದ್ರತೆ ಒದಗಿಸಲಾಗುತ್ತಿತ್ತು. ಆದರೆ ಭದ್ರತೆ ಬಗ್ಗೆ ಸಮಗ್ರ ಅವಲೋಕನ ನಡೆಸಿದ ಬಳಿಕ ಭದ್ರತೆಯ ಶ್ರೇಣಿಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಭದ್ರತಾ ಶ್ರೇಣಿಯನ್ನೂ ಬದಲಿಸಲಾಗಿದ್ದು, ಅವರಿಗೆ ಎಸ್‌ಪಿಜಿಯ ಶಸ್ತ್ರಸಜ್ಜಿತ ಬಿಎಂಡಬ್ಲ್ಯೂ ಕಾರು ಒದಗಿಸಲಾಗಿದೆ. ಗಾಂಧಿ ಕುಟುಂಬದವರಿಗೂ ಶಸ್ತ್ರಸಜ್ಜಿತ ಕಾರು ನೀಡುವಂತೆ ಎಸ್‌ಪಿಜಿಗೆ ಸಿಆರ್‌ಪಿಎಫ್ ಪತ್ರ ಬರೆದಿದ್ದೂ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

ಸಂಸತ್ತಿನಲ್ಲಿ ಏನೆಲ್ಲಾ ಆಯ್ತು...?

*ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಬೇಕಾದ ರಾಹುಲ್ ಗಾಂಧಿ ಸದನಕ್ಕೆ ಹಾಜರಾಗದ್ದನ್ನು ಗಂಭೀರವಾಗಿ ಪರಿಗಣಿಸಿದ ಸ್ಪೀಕರ್ ಓಂ ಬಿರ್ಲಾ. ರಾಹುಲ್‌ ಹಾಜರಾದರೆ, ಶೂನ್ಯ ವೇಳೆಯಲ್ಲಾದರೂ ಪ್ರಶ್ನೆ ಕೇಳಲು ಅವಕಾಶ ನೀಡಬೇಕೆಂದು ಬಯಸಿದ್ದೆ ಎಂದು ಸ್ಪೀಕರ್ ಹೇಳಿದರು

*ಸಾಮಾಜ ಸುಧಾರಕ ಪೆರಿಯಾರ್ ವಿರುದ್ಧ ಯೋಗ ಗುರು ಬಾಬಾ ರಾಮ್‌ದೇವ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಡಿಎಂಕೆ ಆಕ್ಷೇಪ ವ್ಯಕ್ತಪಡಿಸಿತು

*ದೆಹಲಿಯಲ್ಲಿ ಏರುತ್ತಿರುವ ವಾಯುಮಾಲಿನ್ಯ ತಡೆಗೆ ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತಗೀರ್ ಅವರು ಮುಖಗವಸು ಧರಿಸಿ ಚರ್ಚೆಯಲ್ಲಿ ಪಾಲ್ಗೊಂಡರು

*ಕೇಂದ್ರ ಗೃಹಸಚಿವಾಲಯದ ಒಪ್ಪಿಗೆ ಪಡೆದು ಫೋನ್ ಕದ್ದಾಲಿಗೆ ಮಾಡುವ ಅಧಿಕಾರವನ್ನು ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ), ಗುಪ್ತಚರ ಬ್ಯೂರೊ ಸೇರಿದಂತೆ ಕೇವಲ 10 ಸಂಸ್ಥೆಗಳಿಗೆ ಮಾತ್ರ ನೀಡಲಾಗಿದೆ ಎಂದು ಸರ್ಕಾರ ತಿಳಿಸಿತು

*ಪ್ರತಿಭಟನೆ ನಡೆಸಿದ ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮವನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿದವು

*2014–19ರ ಅವಧಿಯಲ್ಲಿ ನಕ್ಸಲ್ ಹಿಂಸಾಚಾರಕ್ಕೆ ಸಂಬಂಧಿಸದ ಪ್ರಕರಣಗಳ ಪ್ರಮಾಣ ಶೇ 43ರಷ್ಟು ಇಳಿಕೆಯಾಗಿದ್ದು, ಮೂರನೇ ಎರಡರಷ್ಟು ಪ್ರಕರಣಗಳು 10 ಜಿಲ್ಲೆಗಳಲ್ಲಿ ವರದಿಯಾಗಿವೆ ಎಂದು ಸರ್ಕಾರ ತಿಳಿಸಿತು

*ಡ್ರೋನ್‌ ಮೂಲಕ ಎದುರಾಗುವ ಬೆದರಿಕೆಗಳನ್ನು ನಿಭಾಯಿಸುವ ‘ಸುಧಾರಿತ ಕಾರ್ಯಾಚರಣೆ ವಿಧಾನ’ಗಳು (ಎಸ್‌ಒಪಿ) ಹೇಗಿರಬೇಕು ಎಂಬ ಮಾಹಿತಿಯನ್ನು ಭದ್ರತಾ ಪಡೆಗಳಿಗೆ ರವಾನಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

*ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸಿದ ಬಳಿಕ ಪಾಕಿಸ್ತಾನವು 950 ಬಾರಿ ಕದನವಿರಾಮ ಉಲ್ಲಂಘಿಸಿದೆ ಎಂದು ಗೃಹಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಅವರು ಲೋಕಸಭೆಗೆ ಮಾಹಿತಿ ನೀಡಿದರು.

*ಗೃಹಬಂಧನಲ್ಲಿರುವ ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಬಿಡುಗಡೆ ಮಾಡುವಂತೆ ಕೋರಿ ಗೃಹಸಚಿವರಿಗೆ ಪಿಡಿಪಿ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT