ಶನಿವಾರ, ಜೂಲೈ 4, 2020
27 °C

ಸುಳ್ಳು‌ ಹೇಳಿಕೆ: ವಿಶ್ವಸಂಸ್ಥೆ ಅಧಿಕಾರಿಗೆ ಸುಬ್ರಮಣಿಯನ್ ಸ್ವಾಮಿ ಲೀಗಲ್ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವಸಂಸ್ಥೆಯ ವಿಶೇಷ ಸಲಹೆಗಾರ ಅದಮಾ ಡಿಯೆಂಗ್ ಅವರಿಗೆ ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಕಾನೂನು ನೋಟಿಸ್ ಕಳುಹಿಸಿದ್ದಾರೆ. 

ಮಂಗಳವಾರ ಈ ಮಾಹಿತಿಯನ್ನು ಟ್ವೀಟ್‌ ಮಾಡಿರುವ ಸುಬ್ರಮಣಿಯನ್‌ ಸ್ವಾಮಿ, 'ವಿಶ್ವಸಂಸ್ಥೆಯ ಅಂಡರ್-ಸೆಕ್ರೆಟರಿ ಜನರಲ್ ಡಿಯೆಂಗ್‌ಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ರಮ್ನಿ ತನೇಜಾ, ರೋಕ್ಸಾನ ಸ್ವಾಮಿ ಮತ್ತು ತಮ್ಮ ಇಬ್ಬರು ಹೆಣ್ಣುಮಕ್ಕಳ ಸಹಾಯದೊಂದಿಗೆ ಇಷ್ಕಾರನ್ ಭಂಡಾರಿ ಅವರು ಈ ನೋಟಿಸ್‌ ಅನ್ನು ಸಿದ್ಧಪಡಿಸಿದ್ದಾರೆ' ಎಂದು ಹೇಳಿದ್ದಾರೆ. 

ಮುಂದುವರಿದ ಅವರು, 'ತಾವು ಕಳುಹಿಸಿರುವ ನೋಟಿಸ್‌ಗೆ ಎರಡು ವಾರಗಳಲ್ಲಿ ಡಿಯೆಂಗ್‌ರಿಂದ ಪ್ರತಿಕ್ರಿಯೆ ಬರದಿದ್ದರೆ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು' ಎಂದು ತಿಳಿಸಿದ್ದಾರೆ. 

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಂಗೀಕಾರವಾದಾಗಿನಿಂದ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಹೆಚ್ಚಿದ ದ್ವೇಷದ ಮಾತು ಮತ್ತು ತಾರತಮ್ಯದ ವರದಿಗಳ ಬಗ್ಗೆ ವಿಶ್ವಸಂಸ್ಥೆಯ ಉನ್ನತ ಅಧಿಕಾರಿ ಅದಮಾ ಡಿಯೆಂಗ್ ಈ ಹಿಂದೆ ಪತ್ರಿಕಾ ಪ್ರಕಟಣೆ ನೀಡಿದ್ದರು.
 
ಡಿಸೆಂಬರ್ 2019 ರಲ್ಲಿ ಸುಬ್ರಮಣಿಯನ್‌ ಸ್ವಾಮಿ ಅವರು ಪಾಕಿಸ್ತಾನದ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಭಾರತೀಯ ಸಂವಿಧಾನದಲ್ಲಿ ಮುಸ್ಲಿಮರು ಹಿಂದೂಗಳಿಗೆ ಸಮಾನರಲ್ಲ ಎಂದು ಹೇಳಿಕೆ ನೀಡಿದ್ದಾರೆಂದು ಡಿಯೆಂಗ್‌ ಉಲ್ಲೇಖಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ್ದ ಸುಬ್ರಮಣಿಯನ್‌ ಸ್ವಾಮಿ,' ಇದೊಂದು ಸುಳ್ಳು ಹೇಳಿಕೆಯಾಗಿದೆ. ಆದ್ದರಿಂದ, ನಾನು ಡಿಯೆಂಗ್‌ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ' ಎಂದು ಮೇ 19ರಂದು ಟ್ವೀಟ್‌ ಮಾಡಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು