ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೊಟ್ಟಿ ಜಾತಿ ಪ್ರಮಾಣಪತ್ರ ಆರೋಪ: ಪರಿಶೀಲನೆಗೆ ‘ಸುಪ್ರೀಂ’ ನಿರ್ದೇಶನ

2013ರಲ್ಲಿ ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆ.ಮಂಜುನಾಥ್‌
Last Updated 8 ಫೆಬ್ರುವರಿ 2020, 13:20 IST
ಅಕ್ಷರ ಗಾತ್ರ

ನವದೆಹಲಿ: ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದ ಹಿಂದಿನ ಶಾಸಕ ಜಿ.ಮಂಜುನಾಥ್‌ ಅವರು ಪರಿಶಿಷ್ಟ ಜಾತಿಗೆ ಸೇರಿದ ಬುಡಗ ಜಂಗಮ ಸಮುದಾಯದವರೇ ಅಥವಾ ಇತರೆ ಹಿಂದುಳಿದ ವರ್ಗಗಳಲ್ಲಿ ಗುರುತಿಸಲ್ಪಟ್ಟಿರುವ ಬೈರಾಗಿ ಜಾತಿಯವರೇ ಎಂದು ಪರಿಶೀಲಿಸುವಂತೆ ಕರ್ನಾಟದ ಜಾತಿ ಪರಿಶೀಲನಾ ಸಮಿತಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರ ಎಸ್‌ಸಿ ಸಮುದಾಯಕ್ಕೆ ಮೀಸಲಾಗಿದ್ದು, 2013ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಜುನಾಥ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ, ಖೊಟ್ಟಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌, 2018ರ ಏಪ್ರಿಲ್‌ 25 ರಂದು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿತ್ತು.

ಇದನ್ನು ಪ್ರಶ್ನಿಸಿ, ಮಂಜುನಾಥ್‌ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ, ಬಿ.ಆರ್‌.ಗವಾಯಿ ಮತ್ತು ಸೂರ್ಯ ಕಾಂತ್‌ ಅವರಿದ್ದ ನ್ಯಾಯಪೀಠವು,‘ಈ ಎರಡೂ ಜಾತಿಗಳ ಉದ್ಯೋಗ, ಆಚರಣೆ, ಪದ್ಧತಿ ಮತ್ತು ದೇವರ ಪೂಜೆಯ ಸಂಗತಿಗಳಿಂದ ಹಾಗೂ ಬುಡಗ ಜಂಗಮ ಜಾತಿಗೆ ಸೇರಿದ ವ್ಯಕ್ತಿಗಳನ್ನು ರಾಜ್ಯ ವಿವಿಧ ಭಾಗಗಳಲ್ಲಿ ಮಾಲಾ ಸನ್ಯಾಸಿ, ಬೈರಾಗಿ ಮುಂತಾದ ಹೆಸರುಗಳಿಂದಲೂ ಕರೆಯಲಾಗುತ್ತದೆ ಎಂದು ಕೋಲಾರದ ಗೆಜೆಟಿಯರ್‌ನಲ್ಲಿ ಹೇಳಲಾಗಿರುವುದರಿಂದ ಸಂಕೀರ್ಣತೆ ಉದ್ಭವಿಸುತ್ತದೆ’ ಎಂದು ಹೇಳಿದೆ.

ಉದ್ಯೋಗ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ವಿವಿಧ ಜಾತಿಗಳ ಹಕ್ಕುಗಳನ್ನು ನಿರ್ಧರಿಸಲು ರಾಜ್ಯವು ವಿಶೇಷ ಸಮಿತಿ ರಚಿಸಿದೆ ಎಂದು ನ್ಯಾಯಪೀಠದ ಗಮನಕ್ಕೆ ತರಲಾಯಿತು.

ಆದ್ದರಿಂದ, ಮಂಜುನಾಥ್‌ ಅವರ ಜಾತಿ ಹಕ್ಕಿಗೆ ಸಂಬಂಧಿಸಿದ ಪ್ರಕರಣದ ಪರಿಶೀಲನೆಗೆ ಈ ಸಮಿತಿಗೆ ಕಳುಹಿಸಲು ನ್ಯಾಯಪೀಠ ನಿರ್ಧರಿಸಿತು. ಕಕ್ಷಿದಾರರನ್ನು ವಿಚಾರಣೆಗೊಳಪಡಿಸಿ, ಸಾಕ್ಷ್ಯಗಳನ್ನು ಹಾಗೂ ದಾಖಲೆಗಳನ್ನು ಸಲ್ಲಿಸಲು ಮೂರು ತಿಂಗಳ ಅವಧಿಯನ್ನು ಈ ಸಮಿತಿಗೆ ನ್ಯಾಯಪೀಠ ನೀಡಿದೆ.

ಕರ್ನಾಟಕ ಎಸ್‌ಸಿ/ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮೀಸಲಾತಿ, ಇತ್ಯಾದಿ) ಕಾಯ್ದೆ–1990ರ ಪ್ರಕಾರ ಸಮಿತಿಯು ವಿಚಾರಣೆ ನಡೆಸಲಿದೆ. ಮೂರುವರೆ ತಿಂಗಳ ನಂತರ ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಪೀಠ ಹೇಳಿದೆ.

ಹಿನ್ನೆಲೆ:ಆ ಚುನಾವಣೆಯಲ್ಲಿ ಸೋತಿದ್ದ ಎನ್‌.ಮುನಿಯಾಂಜನಪ್ಪ ಅವರುಮಂಜುನಾಥ್‌ ಅವರು ಖೊಟ್ಟಿ ಜಾತಿ ಪ್ರಮಾಣಪತ್ರ ಲಗತ್ತಿಸಿದ್ದಾರೆ. ಮಂಜುನಾಥ್ಅ‌ ಅವರು ಬೈರಾಗಿ ಜಾತಿಗೆ ಸೇರಿದವರಾಗಿದ್ವದು, ಅದು ಇತರೆ ಹಿಂದುಳಿದ ವರ್ಗಗಳಲ್ಲಿ ಬರುತ್ತದೆ. ಆದ್ದರಿಂದ ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಇದರ ವಿಚಾರಣೆ ನಡೆಸಿದ ಹೈಕೋರ್ಟ್‌, 2018ರ ಏಪ್ರಿಲ್‌ 25 ರಂದು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿತ್ತು.

ಮಂಜುನಾಥ್‌ ಅವರಿಗೆ ಸಂಬಳ ಹಾಗೂ ಇತರ ಸೌಕರ್ಯಗಳಿಗೆ ವಿತರಿಸಲಾಗಿದ್ದ ₹90 ಲಕ್ಷ ಮರುಪಾವತಿಸುವಂತೆ ವಿಧಾನಸಭೆಯ ಅಧೀನ ಕಾರ್ಯದರ್ಶಿಗಳು 2019ರ ಫೆಬ್ರುವರಿ 13 ರಂದು ನೀಡಿದ್ದ ಆದೇಶವನ್ನು 2019ರ ಏಪ್ರಿಲ್‌ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT