ಬುಧವಾರ, ಜನವರಿ 22, 2020
21 °C

ವಿವೇಕಾನಂದರಿಗೆ ನಮಿಸಿದ ನರೇಂದ್ರ ಮೋದಿ: ‘ಬೇಲೂರು ಮಠ ಭೇಟಿ ತೀರ್ಥಯಾತ್ರೆಗೆ ಸಮ’

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೊಲ್ಕತ್ತಾ: ಸ್ವಾಮಿ ವಿವೇಕಾನಂದರ 157ನೇ ಜನ್ಮದಿನೋತ್ಸವ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೌರಾದಲ್ಲಿ ರಾಮಕೃಷ್ಣ ಮಿಷನ್‌ ಪ್ರಧಾನ ಕಚೇರಿ ಇರುವ ಬೇಲೂರು ಮಠಕ್ಕೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದರ ಚಿತ್ರಪಟಕ್ಕೆ ನಮಿಸಿದರು. ಕೆಲ ಸಮಯ ಕಣ್ಮುಚ್ಚಿ ಧ್ಯಾನ ಮಾಡಿದರು.

‘ಸ್ವಾಮಿ ವಿವೇಕಾನಂದರು ಭಾರತೀಯರ ಹೃದಯ ಮತ್ತು ಮನಸ್ಸಿನಲ್ಲಿ ಜೀವಂತವಿದ್ದಾರೆ. ದೇಶದ ಯುವಜನತೆ ಇಂದಿಗೂ ವಿವೇಕಾನಂದರನ್ನು ಆದರ್ಶ ಎಂದೇ ಭಾವಿಸುತ್ತೆ. ವಿವೇಕಾನಂದರ ಜಯಂತಿ ಮತ್ತು ರಾಷ್ಟ್ರೀಯ ಯುವದಿನವಾದ ಇಂದು ನಾನು ಬೇಲೂರು ಮಠದಲ್ಲಿದ್ದೇನೆ. ವಿವೇಕಾನಂದರು ಧ್ಯಾನ ಮಾಡಿದ್ದ ಕೊಠಡಿ ನೋಡಿ ಧನ್ಯನಾದೆ’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಮಠದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ಹೌರಾದಲ್ಲಿರುವ ಬೇಲೂರು ಮಠಕ್ಕೆ ಭೇಟಿ ನೀಡುವುದು ತೀರ್ಥಯಾತ್ರೆಗೆ ಸಮ. ಸ್ವಾಮಿ ವಿವೇಕಾನಂದರ ಜೀವನ ಮತ್ತು ಆದರ್ಶಗಳು ನನಗೆ ಸದಾ ಮಾರ್ಗದರ್ಶನ ನೀಡುತ್ತವೆ’ ಎಂದು ಹೇಳಿದರು.

ರಾಮಕೃಷ್ಣ ಮಿಷನ್‌ನ ಮುಖ್ಯ ಕಚೇರಿ ಇರುವ ಬೇಲೂರು ಮಠದಲ್ಲಿ ರಾತ್ರಿ ಕಳೆದ ಮೊದಲ ಪ್ರಧಾನಿ ಎಂಬ ಶ್ರೇಯವೂ ಅವರದ್ದಾಯಿತು. ‘ಬೇಲೂರು ಮಠದಲ್ಲಿ ಕಳೆದ ವಿಶಿಷ್ಟ ಗಳಿಗೆಗಳು’ ಎನ್ನುವ ಒಕ್ಕಣೆಯೊಂದಿಗೆ ಸಂತರನ್ನು ಭೇಟಿಯಾದ ಚಿತ್ರಗಳನ್ನೂ ಮೋದಿ ಟ್ವೀಟ್ ಮಾಡಿದ್ದಾರೆ.

 

 

ಯಾರ ಪೌರತ್ವವನ್ನೂ ನಾವು ಕಿತ್ತುಕೊಂಡಿಲ್ಲ: ನರೇಂದ್ರ ಮೋದಿ

‘ಪಾಕಿಸ್ತಾನದಲ್ಲಿ ತೊಂದರೆ ಅನುಭವಿಸಿದವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ್ದೇವೆ. ಯಾರ ಪೌರತ್ವಕ್ಕೂ ಧಕ್ಕೆ ತರುವ ಉದ್ದೇಶ ಕಾಯ್ದೆಗೆ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬೇಲೂರು ಮಠದಲ್ಲಿ (ರಾಮಕೃಷ್ಣ ಮಿಷನ್) ಭಾನುವಾರ ಭಾಷಣ ಮಾಡಿದ ಅವರು, ‘ಪೌರತ್ವ ಕಾಯ್ದೆ ವಿಚಾರದಲ್ಲಿ ಹಲವು ಯುವಜನರನ್ನು ದಾರಿ ತಪ್ಪಿಸಲಾಗಿದೆ. ಸಿಎಎ ಎಂದರೇನು? ಅದನ್ನು ಜಾರಿಗೆ ತರುವ ಅಗತ್ಯ ಏನಿತ್ತು ಎನ್ನುವುದರ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕಾದ್ದು ನಮ್ಮ ಕರ್ತವ್ಯ’ ಎಂದು ಅಭಿಪ್ರಾಯಪಟ್ಟರು.

‘ಯಾರಿಗೋ ಪೌರತ್ವ ನೀಡಬೇಕು ಎಂದು ರಾತ್ರೋರಾತ್ರಿ ಯಾವುದೇ ಕಾನೂನು ಜಾರಿ ಮಾಡಿಲ್ಲ. ಸಿಎಎ ಪೌರತ್ವ ಕೊಡುವ ಕಾಯ್ದೆಯೇ ಹೊರತು, ಪೌರತ್ವ ರದ್ದು ಮಾಡುವ ಕಾಯ್ದೆಯಲ್ಲ. ಪಾಕಿಸ್ತಾನದಿಂದ ನೋವು ಅನುಭವಿಸಿ ಭಾರತಕ್ಕೆ ಬಂದವರನ್ನು ಮತ್ತೆ ಅಲ್ಲಿಗೆ ವಾಪಸ್ ಕಳಿಸಲು ಸಾಧ್ಯವೇ? ಇದು ಒಳ್ಳೇ ಕೆಲಸ ಹೌದೋ ಅಲ್ಲವೋ’ ಎಂದು ಪ್ರಧಾನಿ ಪ್ರಶ್ನಿಸಿದರು.

‘ಭಾರತ ಸರ್ಕಾರ ಪೌರತ್ವ ಕಾಯ್ದೆ ಜಾರಿ ಮಾಡಿದ ಕಾರಣದಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಜಗತ್ತು ಮಾತನಾಡುವಂತಾಯಿತು’ ಎಂದು ನುಡಿದರು. 

ತಮ್ಮ ಭಾಷಣದಲ್ಲಿ ಪ್ರಧಾನಿ ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ದೇಶಗಳ ಹೆಸರು ಪ್ರಸ್ತಾಪಿಸಲಿಲ್ಲ. ದೇಶದಾದ್ಯಂತ ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ಪ್ರತಿಪಕ್ಷಗಳೇ ಕಾರಣ ಎಂದು ಹರಿಹಾಯ್ದರು.

ಇದನ್ನೂ ಓದಿ...

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು