ಸ್ವಿಸ್‌ ಖಾತೆಯಲ್ಲಿ ಕಪ್ಪುಹಣ ಸೆಪ್ಟೆಂಬರ್‌ನಿಂದ ವಿವರ ಲಭ್ಯ

ಭಾನುವಾರ, ಜೂಲೈ 21, 2019
27 °C

ಸ್ವಿಸ್‌ ಖಾತೆಯಲ್ಲಿ ಕಪ್ಪುಹಣ ಸೆಪ್ಟೆಂಬರ್‌ನಿಂದ ವಿವರ ಲಭ್ಯ

Published:
Updated:

ನವದೆಹಲಿ/ಬರ್ನ್‌: ಸ್ವಿಟ್ಜರ್‌ಲೆಂಡ್‌ನ (ಸ್ವಿಸ್‌) ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ ಕಪ್ಪುಹಣದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಈ ಸೆಪ್ಟೆಂಬರ್‌ನಲ್ಲಿ ಭಾರಿ ಮುನ್ನಡೆ ದೊರೆಯಲಿದೆ. ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಎಲ್ಲ ಖಾತೆಗಳ ಹಣಕಾಸಿನ ಮಾಹಿತಿ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಸಿಗಲಿದೆ. ಕಳೆದ ವರ್ಷದಿಂದ ಮುಚ್ಚಲಾದ ಖಾತೆಗಳ ಮಾಹಿತಿಯೂ ದೊರೆಯಲಿದೆ. 

ಭಾರತ ಮತ್ತು ಸ್ವಿಟ್ಜರ್‌ಲೆಂಡ್‌ ನಡುವೆ ‘ಸ್ವಯಂ ಮಾಹಿತಿ ವಿನಿಮಯ’ ಚೌಕಟ್ಟು ರೂಪಿಸಲಾಗಿದೆ. ಇದರ ಪ್ರಕಾರ, ಸ್ವಿಟ್ಜರ್‌ಲೆಂಡ್‌ ಸರ್ಕಾರವು ಖಾತೆಗಳ ಮಾಹಿತಿಯನ್ನು ಭಾರತದ ತೆರಿಗೆ ಪ್ರಾಧಿಕಾರಕ್ಕೆ ಸಲ್ಲಿಸಲಿದೆ. ಬ್ಯಾಂಕ್‌ ಖಾತೆ ಸಂಖ್ಯೆ, ಇರುವ ಠೇವಣಿ, ಖಾತೆದಾರರು ಪಡೆಯುತ್ತಿರುವ ಆದಾಯ ಮುಂತಾದ ಮಾಹಿತಿ ಇದರಲ್ಲಿ ಸೇರಿರಲಿದೆ. 

ನೂರು ಖಾತೆಗಳ ಬಗೆಗಿನ ಮಾಹಿತಿಯನ್ನು ಸ್ವಿಟ್ಜರ್‌ಲೆಂಡ್‌ ಸರ್ಕಾರವು ಈಗಾಗಲೇ ನೀಡಿದೆ. ಅದರಲ್ಲಿ ಖಾತೆ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮಾಹಿತಿ ಸೇರಿತ್ತು. ತೆರಿಗೆ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದ ಇದೆ. ಹಣಕಾಸು ವಂಚನೆ ನಡೆಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂಬ ಪುರಾವೆಗಳನ್ನು ಭಾರತ ಸಲ್ಲಿಸಿದ ಪ್ರಕರಣಗಳ ಮಾಹಿತಿಯನ್ನು ಸ್ವಿಸ್‌ ಸರ್ಕಾರ ಕೊಟ್ಟಿದೆ. 

ಸೆಪ್ಟೆಂಬರ್‌ನಿಂದ ‘ಸ್ವಯಂ ಮಾಹಿತಿ ವಿನಿಮಯ’ ಚೌಕಟ್ಟಿನ ಅಡಿಯಲ್ಲಿ ಖಾತೆಗಳ ಮಾಹಿತಿ ದೊರೆಯಲಿದೆ ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್‌ ಅವರು ಲೋಕಸಭೆಗೆ ಮಾಹಿತಿ ಕೊಟ್ಟಿದ್ದಾರೆ. ತನಿಖೆ ನಡೆಯುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಅಲ್ಲಿನ ಸರ್ಕಾರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. 

ಸ್ವಿಸ್‌ ಬ್ಯಾಂಕ್‌ ನೀಡಿದ ಮಾಹಿತಿಯನ್ನು ಬಹಿರಂಗಪಡಿಸಲಾಗುವುದೇ ಎಂಬ ಪ್ರಶ್ನೆಗೆ, ಅದಕ್ಕೆ ಗೋಪ್ಯ ಕಾಯುವ ನಿಯಮಗಳು ಅನ್ವಯ ಆಗುತ್ತವೆ ಎಂದಿದ್ದಾರೆ. 

ಸ್ವಯಂ ಮಾಹಿತಿ ವಿನಿಮಯ ಚೌಕಟ್ಟಿಗೆ 2018ರ ಜನವರಿಯಲ್ಲಿ ಸಹಿ ಹಾಕಲಾಗಿದೆ. ಹಾಗಾಗಿ, ಅದರ ಬಳಿಕ ಭಾರತದ
ಹಲವರು ತಮ್ಮ ಖಾತೆಗಳನ್ನು ಮುಚ್ಚಿರಬಹುದು ಎನ್ನಲಾಗಿತ್ತು. ಇದಕ್ಕೆ ಪರಿಹಾರವಾಗಿ, 2018ರಲ್ಲಿ ಮುಚ್ಚಲಾದ ಖಾತೆಗಳ ಮಾಹಿತಿಯನ್ನೂ ಸ್ವಿಸ್‌ ಬ್ಯಾಂಕುಗಳು ನೀಡಲಿವೆ. 

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !