ಆಡಳಿತ ವಿರೋಧಿ ಅಲೆ ತಡೆಗೆ ತೆಲಂಗಾಣ ಸ್ವಾಭಿಮಾನವೇ ರಕ್ಷೆ

7

ಆಡಳಿತ ವಿರೋಧಿ ಅಲೆ ತಡೆಗೆ ತೆಲಂಗಾಣ ಸ್ವಾಭಿಮಾನವೇ ರಕ್ಷೆ

Published:
Updated:
Deccan Herald

ವರಂಗಲ್‌: ಪ್ರತ್ಯೇಕ ತೆಲಂಗಾಣ ರಾಜ್ಯದ ಹೋರಾಟ ತೀವ್ರತೆ ಪಡೆದುಕೊಂಡಾಗಲೆಲ್ಲ ಅದರ ಪರವಾಗಿ ಕೆಚ್ಚೆದೆಯಿಂದ ಸಿಡಿದು ನಿಂತಿರುವ ಪ್ರದೇಶ ಕಾಕತೀಯರ ರಾಜಧಾನಿಯಾಗಿದ್ದ ವರಂಗಲ್‌.

ಭಾರತದ ಅತ್ಯಂತ ಕಿರಿಯ ರಾಜ್ಯ ತೆಲಂಗಾಣದಲ್ಲಿ 2014ರಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಟಿಆರ್‌ಎಸ್‌ಗೆ ಅತಿ ಹೆಚ್ಚು ಸ್ಥಾನಗಳನ್ನು ವರಂಗಲ್‌ ಮತ್ತು ಸಮೀಪದ ನಿಜಾಮಾಬಾದ್‌ ಹಾಗೂ ಅದಿಲಾಬಾದ್‌ ಕೊಟ್ಟಿದ್ದವು.

ಪ್ರತ್ಯೇಕ ತೆಲಂಗಾಣ ಚಳವಳಿಯ ಕೊನೆಯ ಹಂತ 2009ರಲ್ಲಿ ಆರಂಭವಾಗಿ 2014ರಲ್ಲಿ ಕೊನೆಗೊಂಡಿತು. ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಟಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಜನರ ಕಣ್ಮಣಿಯಾಗಿದ್ದರು. ಈಗ, ಸ್ಥಳೀಯ ಶಾಸಕರು, ಸಂಸದರ ಮೇಲೆ ಜನರಿಗೆ ದೂರುಗಳ ದೊಡ್ಡ ಪಟ್ಟಿಯೇ ಇದೆ. ಹಾಗಿದ್ದರೂ ವರಂಗಲ್‌ ಮತ್ತು ಕರೀಮ್‌ನಗರ ಪ್ರದೇಶಗಳಲ್ಲಿ ಟಿಆರ್‌ಎಸ್‌ ಜನಪ್ರಿಯತೆಗೆ ಕುಂದೇನೂ ಬಂದಿಲ್ಲ.

ಕರೀಮ್‌ನಗರ ಮತ್ತು ವರಂಗಲ್‌ ನಗರಗಳ ಬೀದಿಗಳಲ್ಲಿ ಸಂಚರಿಸಿದರೆ ಕೆಸಿಆರ್‌ ಜನಪ್ರಿಯತೆ ತಿಳಿಯುತ್ತದೆ. ಸ್ವಲ್ಪ ಹಳೆಯ ತಲೆಮಾರಿನವರಿಗೆ ಅವರು ಅಚ್ಚುಮೆಚ್ಚು. ಆದರೆ, ಸಾಕಷ್ಟು ಉದ್ಯೋಗ ಸೃಷ್ಟಿಸಿಲ್ಲ ಎಂಬ ಕಾರಣಕ್ಕೆ ಯುವ ತಲೆಮಾರಿಗೆ ಅವರ ಮೇಲೆ ಅಸಮಾಧಾನ ಇದೆ. ಹಾಗಿದ್ದರೂ ‘ತೆಲಂಗಾಣದ ಭಾವನಾತ್ಮಕತೆ’ಯಿಂದಾಗಿ ಈ ಬಾರಿ ಅವರು ಟಿಆರ್‌ಎಸ್‌ಗೆ ಮತ ಹಾಕುವ ಸಾಧ್ಯತೆಯೇ ಹೆಚ್ಚು.

‘ನಾನು ಟಿಆರ್‌ಎಸ್‌ಗೇ ಮತ ಹಾಕುತ್ತೇನೆ. ಕೆಸಿಆರ್‌ ಏನಾದರೂ ಮಾಡಿದ್ದಾರೆಯೇ ಇಲ್ಲವೇ ಎಂಬುದನ್ನು ನೋಡುವುದಿಲ್ಲ. ಈ ರಾಜ್ಯವನ್ನು (ಅವಿಭಜಿತ ಆಂಧ್ರ ಪ್ರದೇಶ) ಕಾಂಗ್ರೆಸ್‌ ಬಹಳ ಕಾಲ ಆಳಿದೆ. ಎಲ್ಲ ವರ್ಗಗಳನ್ನು ತೃಪ್ತಿಪಡಿಸಲು ಆ ಪಕ್ಷಕ್ಕೆ ಸಾಧ್ಯವಾಗಿದೆಯೇ? ಪ‍್ರತ್ಯೇಕ ರಾಜ್ಯಕ್ಕಾಗಿ ಕೆಸಿಆರ್‌ ಹೋರಾಡಿದ್ದಾರೆ. ಅವರಿಗೆ ಇನ್ನೊಂದು ಅವಕಾಶ ಕೊಡಬೇಕು’ ಎಂಬುದು ಕರೀಮ್‌ನಗರ ಮಾರುಕಟ್ಟೆಯಲ್ಲಿ ಬಟ್ಟೆ ಮಾರುವ ತಿರುಪತಿಯ ಸ್ಪಷ್ಟ ನುಡಿ.

ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗಾಗಿ ಪ್ರತಿ ಋತುವಿನಲ್ಲಿ ರೈತರಿಗೆ ₹4,000 ನೀಡುವ ‘ರೈತುಬಂಧು’, ಹೆಣ್ಣು ಮಕ್ಕಳ ಮದುವೆಗೆ ನೆರವಾಗುವ ‘ಕಲ್ಯಾಣ ಲಕ್ಷ್ಮಿ’ ಮತ್ತು ಗರ್ಭಿಣಿ, ಬಾಣಂತಿಯರಿಗೆ ನೆರವಾಗುವ ‘ಕೆಸಿಆರ್‌ ಕಿಟ್‌’ ಯೋಜನೆಗಳು ಕೆಸಿಆರ್‌ ಜನಪ್ರಿಯತೆ ಈ ಭಾಗದಲ್ಲಿ ಮುಕ್ಕಾಗದಂತೆ ತಡೆದಿವೆ.

ಗ್ರಾಮೀಣ ಪ್ರದೇಶಗಳಲ್ಲಿಯೂ ಕೆಸಿಆರ್‌ಗೆ ಭಾರಿ ಜನಮನ್ನಣೆ ಇದೆ. ಹುಜೂರಾಬಾದ್‌ನಿಂದ 20 ಕಿ.ಮೀ. ದೂರದ ಹಳ್ಳಿಯ ಸಣ್ಣ ರೈತ ರಾಮಯ್ಯ ಅದಕ್ಕೆ ಉದಾಹರಣೆ. ‘ಅವರು ನನಗೆ 20 ಕುರಿ ಕೊಟ್ಟರು. ಈಗ ನನ್ನ ಆದಾಯ ಹೆಚ್ಚಾಗಿದೆ. ಟಿಆರ್‌ಎಸ್ ಸರ್ಕಾರ ಮತ್ತೆ ಬರಬೇಕು’ ಎಂದು ರಾಮಯ್ಯ ಹೇಳುತ್ತಾರೆ.

ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಟಿಆರ್‌ಎಸ್‌ ಮೇಲೆ ಜನರಿಗೆ ಸಿಟ್ಟೂ ಇದೆ. ಅವುಗಳಲ್ಲಿ ಮುಖ್ಯವಾದವು ಮನೆ ಇಲ್ಲದವರಿಗೆ 2 ಕೋಣೆಗಳ ಮನೆ, ಪರಿಶಿಷ್ಟ ಜಾತಿಯವರಿಗೆ ಮೂರು ಎಕರೆ ಜಮೀನು, ಸರ್ಕಾರಿ ವಲಯದಲ್ಲಿ ಒಂದು ಲಕ್ಷ ಉದ್ಯೋಗ. ಈ ಭರವಸೆ ಈಡೇರಿಲ್ಲದಿದ್ದರೂ ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟ ಟಿಆರ್‌ಎಸ್‌ ನೆರವಿಗೆ ಬಂದು ಬಿಡಬಹುದು.

**

ಕೆಸಿಆರ್‌ಗೆ ತವರೂರಲ್ಲೇ ಸವಾಲು ಹೆಚ್ಚು

ಟಿಆರ್‌ಎಸ್‌ ಮುಖ್ಯಸ್ಥ ಚಂದ್ರಶೇಖರ ರಾವ್‌ ಅವರ ತವರು ಜಿಲ್ಲೆ ಮೆದಕ್‌ನಲ್ಲಿ ಈ ಬಾರಿ ಅವರ ಪಕ್ಷಕ್ಕೆ ಗಂಭೀರವಾದ ಸವಾಲೇ ಎದುರಾಗಿದೆ. 2014ರ ಚುನಾವಣೆಯಲ್ಲಿ ಇಲ್ಲಿನ ಹತ್ತು ಕ್ಷೇತ್ರಗಳಲ್ಲಿ ಎಂಟರಲ್ಲಿ ಟಿಆರ್‌ಎಸ್‌ ಜಯಗಳಿಸಿತ್ತು. ಎರಡು ಕಾಂಗ್ರೆಸ್‌ ಪಾಲಾಗಿದ್ದವು.

ಕಾಂಗ್ರೆಸ್‌ ಶಾಸಕ ಪಟೊಲ ಕಿಸ್ತ ರೆಡ್ಡಿ ನಿಧನದಿಂದ ತೆರವಾದ ಕ್ಷೇತ್ರದಲ್ಲಿಯೂ ಟಿಆರ್‌ಎಸ್‌ ಗೆದ್ದು ಜಿಲ್ಲೆಯಲ್ಲಿ ಆ ಪಕ್ಷದ ಸ್ಥಾನಗಳು ಒಂಬತ್ತಕ್ಕೆ ಏರಿದ್ದವು. ಈ ಬಾರಿ ಎಲ್ಲ ಹತ್ತು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಟಿಆರ್‌ಎಸ್‌ಗೆ ಇತ್ತು. ಆದರೆ, ಮಹಾಮೈತ್ರಿಕೂಟದಿಂದಾಗಿ ಸ್ವಲ್ಪ ಅಳುಕು ಈಗ ಟಿಆರ್‌ಎಸ್‌ಗೆ ಇದೆ.

ಕೆಸಿಆರ್‌ ಅವರು ಗಜ್ವೇಲ್‌ನಿಂದ, ಅವರ ಸೋದರಳಿಯ ಹರೀಶ್‌ ರಾವ್‌ ಅವರು ಸಿದ್ದಿಪೇಟ್‌ನಿಂದ, ಕಾಂಗ್ರೆಸ್‌ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ದಾಮೋದರ ರಾಜನರಸಿಂಹ ಅವರು ಅಂಡೋಲ್‌ನಿಂದ, ಮಾಜಿ ಸಚಿವೆ ಸುನೀತಾ ರೆಡ್ಡಿ ಅವರು ನರಸಾಪುರದಿಂದ ವಿಸರ್ಜಿತ ವಿಧಾನಸಭೆಯ ಡೆಪ‍್ಯುಟಿ ಸ್ಪೀಕರ್‌ ಪದ್ಮಾ ದೇವೇಂದರ್‌ ಮೆದಕ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಈ ಎಲ್ಲ ಕ್ಷೇತ್ರಗಳಲ್ಲಿಯೂ ನಿಕಟ ಸ್ಪರ್ಧೆ ಇದೆ.

ಯೋಜನೆಗಳಿಂದಾಗಿ ನಿರ್ವಸಿತರಾದವರೇ ಕೆಸಿಆರ್‌ಗೆ ತೊಡಕಾಗುವ ಸಾಧ್ಯತೆ ಇದೆ. ಮಲ್ಲನಸಾಗರ ಮತ್ತು ಕೊಂಡಪೋಚಮ್ಮ ಜಲಾಶಯಗಳಿಂದಾಗಿ ನಿರಾಶ್ರಿತರಾದ ಐದು ಗ್ರಾಮಗಳ ಜನರು ಟಿಆರ್‌ಎಸ್‌ ವಿರುದ್ಧ ಸೆಟೆದು ನಿಂತಿದ್ದಾರೆ.

ಗಜ್ವೇಲ್‌ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಕಾಂಗ್ರೆಸ್‌ ಅಭ್ಯರ್ಥಿ ವಿ. ಪ್ರತಾಪ ರೆಡ್ಡಿ ಅವರು ಕೆಸಿಆರ್‌ಗೆ ಗಂಭೀರ ಸವಾಲನ್ನೇ ಒಡ್ಡಿದ್ದಾರೆ. ರೆಡ್ಡಿ ಅವರ ಗಜ್ವೇಲ್‌ ಮತ್ತು ಹೈದರಾಬಾದ್‌ ನಿವಾಸಗಳಲ್ಲಿ ನಡೆದ ಪೊಲೀಸ್‌ ಶೋಧ ಕೆಸಿಆರ್‌ ವರ್ಚಸ್ಸಿಗೆ ಸ್ವಲ್ಪಮಟ್ಟಿಗೆ ಕುಂದು ತಂದಿದೆ.

ಕೈಮಗ್ಗದ ಊರು ದುಬ್ಬಕ್‌ನಲ್ಲಿ ಟಿಆರ್‌ಎಸ್‌ನ ರಾಮಲಿಂಗಾರೆಡ್ಡಿ ಕಣದಲ್ಲಿದ್ದಾರೆ. ಈ ಕ್ಷೇತ್ರದ ನಾಲ್ಕು ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಈ ನಿರಾಶ್ರಿತರು ಟಿಆರ್‌ಎಸ್‌ ಪರವಾಗಿ ನಿಲ್ಲುವ ಸಾಧ್ಯತೆ ಕಡಿಮೆ. ಹೈದರಾಬಾದ್‌ಗೆ ಹತ್ತಿರದಲ್ಲಿರುವ ನರಸಾಪುರ ಕ್ಷೇತ್ರದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷೆ ವಿ. ಸುನೀತಾ ಲಕ್ಷ್ಮರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಅವರ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಇದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಹೊರಗಿನಿಂದ ಬಂದು ನೆಲೆಸಿದವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಸಂಗಾರೆಡ್ಡಿ ಕ್ಷೇತ್ರದಲ್ಲಿಯೂ ಟಿಆರ್‌ಎಸ್‌ ಅಭ್ಯರ್ಥಿಗೆ ಗೆಲುವು ಸುಲಭವಲ್ಲ. ಇದು ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರ. ಇಲ್ಲಿನ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕುತ್ತಾ ಬಂದವರು. ಈ ಬಾರಿ, ಎಐಎಂಐಎಂ ಅಭ್ಯರ್ಥಿಗಳು ಇಲ್ಲದಲ್ಲಿ ಟಿಆರ್‌ಎಸ್‌ ಅಭ್ಯರ್ಥಿಗೇ ಮತ ಹಾಕಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಕರೆ ಕೊಟ್ಟಿದ್ದಾರೆ. ಅದು ಯಾವ ರೀತಿ ಕೆಲಸ ಮಾಡಲಿದೆ ಎಂಬುದು ಫಲಿತಾಂಶ ಬಂದಾಗಲಷ್ಟೇ ಗೊತ್ತಾಗಲಿದೆ.

ಟಿಆರ್‌ಎಸ್‌ಗೆ ಕಠಿಣ ಸವಾಲು ಇರುವ ಇನ್ನೊಂದು ಕ್ಷೇತ್ರ ಅಂಡೋಲ್‌. ಇಲ್ಲಿ ಮಾಜಿ ಉಪಮುಖ್ಯಮಂತ್ರಿ ದಾಮೋದರ ರಾಜನರಸಿಂಹ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಪತ್ರಕರ್ತ ಚಂತಿ ಕ್ರಾಂತಿ ಕಿರಣ್‌ ಇಲ್ಲಿ ಟಿಆರ್‌ಎಸ್‌ ಅಭ್ಯರ್ಥಿ. ಮಾಜಿ ಶಾಸಕ ಮತ್ತು ನಟ ಬಾಬುಮೋಹನ್‌ ಬಿಜೆಪಿ ಸೇರಿ ಆ ಪಕ್ಷದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

**

ಮಹಾಮೈತ್ರಿಗೆ ‘ಅವಕಾಶವಾದಿ’ ಹಣೆಪಟ್ಟಿ

ಕಾಂಗ್ರೆಸ್‌–ಟಿಡಿಪಿ ಮತ್ತು ಇತರ ಪಕ್ಷಗಳ ಮಹಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಆಂಧ್ರದ ನಾಯಕರ ಪ್ರಾಬಲ್ಯ ಮುಂದುವರಿಯಲಿದೆ ಎಂದು ಕೆಸಿಆರ್‌ ಹೇಳಿದ್ದು ನಿಧಾನಕ್ಕೆ ಜನರ ಮನಕ್ಕೆ ಇಳಿಯುವಂತೆ ಕಾಣಿಸುತ್ತಿದೆ. ಹಾಗಾಗಿಯೇ ಜನರು ಈ ಮೈತ್ರಿಕೂಟವನ್ನು ‘ಅವಕಾಶವಾದಿ’ ಎಂದು ಪರಿಗಣಿಸುವ ಸಾಧ್ಯತೆ ಹೆಚ್ಚು.

‘ತೆಲಂಗಾಣದಲ್ಲಿ ತೆಲಂಗಾಣದ ಪಕ್ಷ ಅಧಿಕಾರಕ್ಕೆ ಬರಬೇಕು. ಟಿಆರ್‌ಎಸ್‌ ತೆಲಂಗಾಣದ ಪಕ್ಷ. ಸಹಜವಾಗಿಯೇ ಟಿಆರ್‌ಎಸ್‌  ರಾಜ್ಯವನ್ನು ಆಳಬೇಕು. ಆಂಧ್ರದ ಪಕ್ಷವಾದ ಟಿಡಿಪಿಗೆ ಯಾಕೆ ಮತ ಹಾಕಬೇಕು’ ಎಂದು ರಿಕ್ಷಾಚಾಲಕ ರಾಜು ಪ್ರಶ್ನಿಸುತ್ತಾರೆ.

**

ತೆಲಂಗಾಣ ಕಾಂಗ್ರೆಸ್‌ ಕಾರ್ಯಾಧ್ಯಕ್ಷರಾಗಿ ಅಜರ್‌

ವಿಧಾನಸಭೆಗೆ ಮತದಾನ ನಡೆಯಲು ಇನ್ನೇನು ಕೆಲವೇ ದಿನಗಳಿರುವಾಗ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌ ಅವರನ್ನು ತೆಲಂಗಾಣ ಕಾಂಗ್ರೆಸ್‌ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. 

ಮ್ಯಾಚ್‌ ಫಿಕ್ಸಿಂಗ್‌ ಹಗರಣದಲ್ಲಿ ಸಿಲುಕಿದ್ದ ಅಜರುದ್ದೀನ್‌ ಅವರ ಕ್ರಿಕೆಟ್‌ ಜೀವನ 2000ನೇ ಇಸವಿಯಲ್ಲಿ ಕೊನೆಗೊಂಡಿತ್ತು. ಅವರ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. 2012ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್‌ ಈ ಆಜೀವ ನಿಷೇಧ ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು.

2009ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ ಕ್ಷೇತ್ರದಿಂದ ಅಜರುದ್ದೀನ್‌ ಗೆದ್ದಿದ್ದರು. 2014ರ ಚುನಾವಣೆಯಲ್ಲಿ ರಾಜಸ್ಥಾನದ ಟೊಂಕ್‌–ಸವಾಯ್‌ ಮಾಧೋಪುರ ಕ್ಷೇತ್ರದಲ್ಲಿ ಸೋತರು. 2019ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದ ಸಿಕಂದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಬಯಸಿದ್ದಾರೆ. ಈ ನೇಮಕದೊಂದಿಗೆ ಅಜರುದ್ದೀನ್‌ ಅವರು ತಮ್ಮ ತವರು ರಾಜ್ಯ ರಾಜಕಾರಣಕ್ಕೆ ಬಂದಂತಾಗಿದೆ.

**

ವಾಕ್‌ ಚಾತುರ್ಯ...

ಸಾಲ ಕೊಟ್ಟದ್ದು ಕಾಂಗ್ರೆಸ್‌: ಶಾ

ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಮೂಲಕ ಕೊಟ್ಟ ಸಾಲಗಳು ವಸೂಲಾಗದ ಸಾಲಗಳಾಗಿ ಬದಲಾಗಿವೆ. ಇವು ನರೇಂದ್ರ ಮೋದಿ ಸರ್ಕಾರ ಕೊಟ್ಟ ಸಾಲಗಳಲ್ಲ. ಒಂದು ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಕೊಡಲಾಗಿದೆ. ಕೆಲವೇ ತಿಂಗಳಲ್ಲಿ ಅದರ ಕಮಿಷನ್‌ ನೆಹರೂ ಕುಟುಂಬದ ಅಳಿಯನಿಗೆ ಸಿಕ್ಕಿದೆ. ಅದೇ ಹಣ ಬಳಸಿ ಅವರು ಬೀಕಾನೆರ್‌ನಲ್ಲಿ ನಗಣ್ಯ ದರದಲ್ಲಿ 150 ಹೆಕ್ಟೇರ್‌ ಜಮೀನು ಖರೀದಿ ಮಾಡಿದ್ದಾರೆ. ಈ ಪ್ರಶ್ನೆಗೆ ರಾಹುಲ್‌ ಗಾಂಧಿ ಉತ್ತರ ಕೊಡುವುದು ಸಾಧ್ಯವೇ? ಸಾಲ ಪಡೆದು ಕಟ್ಟದವರು ಕಾಂಗ್ರೆಸ್‌ ಸರ್ಕಾರ ಇದ್ದಾಗ ಪಲಾಯನ ಮಾಡಲಿಲ್ಲ. ಯಾಕೆಂದರೆ ಅವರಿಗೆ ಕಾಂಗ್ರೆಸ್‌ ಸರ್ಕಾರದ ಭಯ ಇರಲಿಲ್ಲ. 

(ರಾಜಸ್ಥಾನದ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ)

**

ಜನರು ಮಾಡಿದ ತಪ್ಪೇನು?

ನಿಮಗೆ (ವಸುಂಧರಾ ರಾಜೇ, ರಾಜಸ್ಥಾನ ಮುಖ್ಯಮಂತ್ರಿ) ಜನರು ಭಾರಿ ಬಹುಮತ ಕೊಟ್ಟಿದ್ದರು. ಈಗ, ನಮ್ಮ ತಪ್ಪಾದರೂ ಏನು? ನಮಗೆ ಯಾಕೆ ಅನ್ಯಾಯ ಮಾಡಿದಿರಿ ಎಂದು ಜನರು ಕೇಳುತ್ತಿದ್ದಾರೆ. ಯೋಜನೆಗಳನ್ನು ನೀವು ಸಕಾಲದಲ್ಲಿ ಜಾರಿ ಮಾಡಬೇಕಿತ್ತು.

ನಾನು ಮುಖ್ಯಮಂತ್ರಿಯಾಗಿದ್ದಾಗ ಹಿಂದೆ ಅದೇ ಸ್ಥಾನದಲ್ಲಿದ್ದ ಭೈರೋಸಿಂಗ್ ಶೇಖಾವತ್ ಮತ್ತು ವಸುಂಧರಾ ರಾಜೇ ರೂಪಿಸಿದ್ದ ಯೋಜನೆಗಳನ್ನು ಸ್ಥಗಿತಗೊಳಿಸಲಿಲ್ಲ

–ಅಶೋಕ್‌ ಗೆಹ್ಲೋಟ್‌, ರಾಜಸ್ಥಾನ ಕಾಂಗ್ರೆಸ್‌ ಮುಖಂಡ

**

ರಾಜೇಗೆ ಸೋಲುಣಿಸುವುದು ಸುಲಭವಲ್ಲ

ಹೋರಾಡುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನನ್ನದು ಸ್ಪರ್ಧೆಗಾಗಿ ಸ್ಪರ್ಧೆ ಅಲ್ಲ. ಇದು ಬಹುದೊಡ್ಡ ಸಾಹಸ ಎಂಬುದರಲ್ಲಿ ಅನುಮಾನ ಇಲ್ಲ. ಸವಾಲು ಚಿಕ್ಕದು ಎಂದೂ ನಾನು ಹೇಳುತ್ತಿಲ್ಲ. ಅವರು (ವಸುಂಧರಾ ರಾಜೇ) ಇಲ್ಲಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಈ ಕ್ಷೇತ್ರ ಒಳಗೊಂಡ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದೆಯಾಗಿದ್ದಾರೆ. ಇದನ್ನೊಂದು ಪ್ರತಿಷ್ಠೆಯ ಹೋರಾಟ ಎಂದು ನಾನು ಪರಿಗಣಿಸುವುದಿಲ್ಲ. ಜನರು ಮಾತನಾಡಿಕೊಳ್ಳುವಂತೆ ಇದೊಂದು ಸೇಡು ಕೂಡ ಅಲ್ಲ. ಇದೊಂದು ಚುನಾವಣಾ ಸ್ಪರ್ಧೆ. ಅದು ಹಾಗೆಯೇ ಇರಬೇಕು ಕೂಡ. 

–ಮಾನವೇಂದ್ರ ಸಿಂಗ್‌, ವಸುಂಧರಾ ರಾಜೇ ವಿರುದ್ಧದ ಕಾಂಗ್ರೆಸ್‌ ಅಭ್ಯರ್ಥಿ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !