ಶುಕ್ರವಾರ, ಆಗಸ್ಟ್ 6, 2021
22 °C
ಸಹಜ ಸ್ಥಿತಿಗೆ ಮರಳದ ಜನಜೀವನ...

ದೆಹಲಿ | 20 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣದಲ್ಲಿ ನಿತ್ಯವೂ ಹೆಚ್ಚಳ ಕಂಡುಬರುತ್ತಿದ್ದು, ಮಂಗಳವಾರ ಸೋಂಕುಪೀಡಿತರ ಸಂಖ್ಯೆ 20,000ದ ಗಡಿ ದಾಟಿರುವುದರಿಂದ ಸಾರ್ವಜನಿಕರ ಆತಂಕ ತೀವ್ರಗೊಂಡಿದೆ.

ಅತಿ ಹೆಚ್ಚು ಕೊರೊನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿರುವ ಪಟ್ಟಿಯಲ್ಲಿ ದೆಹಲಿಯು ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳ ನಂತರದ (3ನೇ) ಸ್ಥಾನದಲ್ಲಿದೆ.

ಆರೋಗ್ಯ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ ಮಂಗಳವಾರ ಬೆಳಿಗ್ಗೆವರೆಗೆ ಕೊರೊನಾ ಸೋಂಕು ತಗಲಿರುವವರ ಸಂಖ್ಯೆ 20,834. ಆ ಪೈಕಿ 8,746 ಜನ ಗುಣಮುಖರಾಗಿ ಮನೆಗಳಿಗೆ ತೆರಳಿದ್ದು, 11,565 ಜನ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣ ಕಳೆದುಕೊಂಡವರ ಸಂಖ್ಯೆ 523ಕ್ಕೇರಿದೆ.

ದೆಹಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ್ದರಿಂದ ರಾಷ್ಟ್ರರಾಜಧಾನಿ ವಲಯದಲ್ಲೇ ಇರುವ ಹರಿಯಾಣದ ಗುರುಗ್ರಾಮ ಹಾಗೂ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಸ್ಥಳೀಯ ಆಡಳಿತಗಳು ದೆಹಲಿಗೆ ಸಂಪರ್ಕ ಕಲ್ಪಿಸುವ ತಮ್ಮ ಎಲ್ಲ ಗಡಿಗಳನ್ನು ಬಂದ್‌ ಮಾಡಿ ಆದೇಶ ಹೊರಡಿಸಿವೆ.

ಸಾರ್ವಜನಿಕರ ಅನುಕೂಲಕ್ಕಾಗಿ ಲಾಕ್‌ಡೌನ್‌ನ 5ನೇ ಹಂತದಲ್ಲಿ ನಿಯಮಾವಳಿಗಳಲ್ಲಿ ಸಾಕಷ್ಟು ಸಡಿಲಿಕೆ ಮಾಡಲಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಬಸ್‌, ಟ್ಯಾಕ್ಸಿ, ಆಟೊ ಸಂಚಾರವೂ ಆರಂಭವಾಗಿದೆ. ಸೋಮವಾರದಿಂದಲೇ ಹೇರ್‌ ಕಟಿಂಗ್‌ ಸಲೂನ್‌ಗಳು ಪುನರಾರಂಭವಾಗಿವೆ.

ಮಾರುಕಟ್ಟೆಯಲ್ಲಿನ ಎಲ್ಲ ಅಂಗಡಿ– ಮುಂಗಟ್ಟುಗಳು ಕಾರ್ಯ ನಿರ್ವಹಿಸಲು ಲಾಕ್‌ಡೌನ್‌–4ರ ವೇಳೆ ವಿಧಿಸಲಾಗಿದ್ದ ‘ಸಮ– ಬೆಸ’ ಸಂಖ್ಯೆ ಮಾದರಿಯ ನಿಯಮದಲ್ಲೂ ಸಡಿಲಿಕೆ ತರಲಾಗಿದ್ದು, ಎಲ್ಲ ಅಂಗಡಿಗಳ ಬಾಗಿಲುಗಳೂ ತೆರೆದಾಗಿದೆ. ಆದರೆ, ಬಹುತೇಕ ಕಡೆ ಗ್ರಾಹಕರ ದಂಡು ಕಂಡುಬರುತ್ತಿಲ್ಲ. ಇದೇ 8ರಿಂದ ಧಾರ್ಮಿಕ ಪೂಜಾ ಸ್ಥಳಗಳು, ಬೃಹತ್‌ ವ್ಯಾಪಾರಿ ಮಳಿಗೆಗಳಾದ ಮಾಲ್‌ಗಳೂ ಕಾರ್ಯಾರಂಭ ಮಾಡಲಿವೆ.

ಸಹಜತೆಗೆ ಬಾರದ ಜನಜೀವನ: ಲಾಕ್‌ಡೌನ್‌–1ರ ವೇಳೆ ವಿಧಿಸಲಾಗಿದ್ದ ಅನೇಕ ನಿಯಮಗಳನ್ನು ಸರ್ಕಾರ ಸಡಿಲಿಸಿದ್ದರಿಂದ ನಗರದಾದ್ಯಂತ ಜನರು ಮತ್ತು ವಾಹನಗಳ ಸಂಚಾರ ಎಂದಿನಂತೆಯೇ ಇದೆಯಾದರೂ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿಲ್ಲ.

ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕ ವರ್ಗಕ್ಕೆ ಪೂರ್ಣ ಪ್ರಮಾಣದ ಉದ್ಯೋಗ ದೊರೆಯುತ್ತಿಲ್ಲ. ಮನೆಯಿಂದ ಹೊರ ಬರುವ ದುಡಿಯುವ ವರ್ಗಕ್ಕೆ ನಿರೀಕ್ಷೆಯಂತೆ ಕೂಲಿ ಸಿಗುತ್ತಿಲ್ಲ. ಅಂತೆಯೇ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಉಚಿತ ಆಹಾರ ವಿತರಣೆ ಸೌಲಭ್ಯವನ್ನು ಮುಂದುವರಿಸಿದೆ.

ಏಪ್ರಿಲ್‌ ಮೊದಲ ವಾರ ಆರಂಭವಾದ ಈ ಸೌಲಭ್ಯದಡಿ ಮೊದಮೊದಲು ನಿತ್ಯವೂ 15 ಲಕ್ಷ ಜನರು ಪ್ರಯೋಜನ ಪಡೆದುಕೊಂಡಿದ್ದರು. ಈಗ ಇವರ ಸಂಖ್ಯೆ 6ರಿಂದ 7 ಲಕ್ಷದಷ್ಟಿದೆ ಎಂದು ಆಹಾರ ಪೂರೈಕೆ ಕೇಂದ್ರದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು