ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಗ ಅಂಕುಶವಿಟ್ಟರೂ ಅಯ್ಯಪ್ಪನೇ ಪ್ರಚಾರದ ಕೇಂದ್ರ

ತಿರುವನಂತಪುರ ಕ್ಷೇತ್ರ: ತರೂರ್‌ಗೆ ಹ್ಯಾಟ್ರಿಕ್‌ ಆಸೆ, ಬಿಜೆಪಿಗೆ ಖಾತೆ ತೆರೆವ ಹಂಬಲ
Last Updated 9 ಮೇ 2019, 17:45 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರದಲ್ಲಿ ಮೈ ಸುಡುವಷ್ಟು ಬಿಸಿಲಿದೆ. ಆದರೆ, ಈ ಲೋಕಸಭಾ ಕ್ಷೇತ್ರದಲ್ಲಿ ಏರುತ್ತಲೇ ಇರುವ ಚುನಾವಣಾ ಕಾವಿನ ಮುಂದೆ ಬಿಸಿಲಿನ ಧಗೆ ಏನೇನೂ ಅಲ್ಲ ಎಂಬಂತಾಗಿದೆ. ತ್ರಿಕೋನ ಸ್ಪರ್ಧೆಯ ಈ ಕ್ಷೇತ್ರದಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರದ್ದೇ ಅಬ್ಬರ.

ಕೇರಳದಲ್ಲಿ ಬಿಜೆಪಿ ಗೆಲ್ಲಬಹುದಾದ ಕ್ಷೇತ್ರ ಎಂಬ ಕಾರಣಕ್ಕೆ ರಾಷ್ಟ್ರ ಮಟ್ಟದಲ್ಲಿ ತಿರುವನಂತಪುರ ಗಮನ ಸೆಳೆದಿದೆ. ಶಬರಿಮಲೆ ವಿವಾದ ಬಿಜೆಪಿಯ ಈ ನಿರೀಕ್ಷೆಗೆ ನೀರೆರೆದು ಪೋಷಿಸಿದೆ. ಮಿಜೋರಾಂ ರಾಜ್ಯಪಾಲರಾಗಿದ್ದ ಕುಮ್ಮನಂ ರಾಜಶೇಖರನ್‌ ಅವರನ್ನು ಇಲ್ಲಿನ ಅಭ್ಯರ್ಥಿಯಾಗಿ ಬಿಜೆಪಿ ಕರೆಸಿಕೊಂಡಿದೆ. ಅವರು ಕೇರಳ ಬಿಜೆಪಿ ಘಟಕದ ಅಧ್ಯಕ್ಷರಾಗಿ ಹಿಂದೆ ಕೆಲಸ ಮಾಡಿದ್ದರು. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಟ್ಟಿಯೂರುಕಾವು ಕ್ಷೇತ್ರದಲ್ಲಿ ರಾಜಶೇಖರನ್‌ ಅವರು ಎರಡನೇ ಸ್ಥಾನಕ್ಕೆ ಬಂದಿದ್ದರು. ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚು ಎಂಬುದೇ ಅವರನ್ನು ಕರೆಸಿಕೊಳ್ಳಲು ಕಾರಣ.

ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ. ಸತತ ಮೂರನೇ ಗೆಲುವಿಗಾಗಿ ಅವರು ಶ್ರಮಿಸುತ್ತಿದ್ದಾರೆ. ಶಾಸಕ ಸಿ. ದಿವಾಕರನ್‌ ಅವರನ್ನು ಎಡರಂಗ ಕಣಕ್ಕಿಳಿಸಿದೆ.

ಶಬರಿಮಲೆ ವಿಚಾರವನ್ನು ಚುನಾವಣೆಯಲ್ಲಿ ಬಳಸಿಕೊಳ್ಳಬಾರದು ಎಂದು ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಹಾಗಿದ್ದರೂ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಈ ವಿಚಾರವನ್ನೇ ಪ್ರಚಾರದ ಕೇಂದ್ರವಾಗಿಸಿವೆ. ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಲು ಕೇರಳದ ಎಡರಂಗ ಸರ್ಕಾರವೇ ಕಾರಣ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಹಿಂದೂ ಮತಗಳ ಕ್ರೋಡೀಕರಣ ಇದರ ಹಿಂದಿನ ಉದ್ದೇಶ. 2011ರ ಜನಗಣತಿ ಪ್ರಕಾರ, ಈ ಕ್ಷೇತ್ರದಲ್ಲಿ ಹಿಂದೂ ಸಮುದಾಯದ ಜನಸಂಖ್ಯೆ ಪ್ರಮಾಣ ಶೇ 66.

ಬಿಜೆಪಿ ಹಿಂದೂ ಮೂಲಭೂತವಾದವನ್ನು ಪ್ರತಿಪಾದಿಸುತ್ತಿದೆ ಎಂಬುದು ಎಡರಂಗದ ಆರೋಪ. ಅಯ್ಯಪ್ಪ ಭಕ್ತರ ನಂಬಿಕೆ ಮತ್ತು ವಿಶ್ವಾಸದ ಜತೆಗೆ ಪ್ರಾಮಾಣಿಕವಾಗಿ ನಿಂತ ಪಕ್ಷ ಕಾಂಗ್ರೆಸ್‌ ಮಾತ್ರ ಎಂದು ತರೂರ್‌ ಹೇಳುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವುದಕ್ಕಾಗಿ ಎಡರಂಗ ಮತ್ತು ಕಾಂಗ್ರೆಸ್‌ ಒಂದಾಗಿವೆ ಎಂದು ರಾಜಶೇಖರನ್‌ ಹೇಳುತ್ತಿದ್ದಾರೆ.

ಹತ್ತು ವರ್ಷ ಸಂಸದರಾಗಿದ್ದ ತರೂರ್‌ ಅವರು ಕ್ಷೇತ್ರಕ್ಕೆ ಏನನ್ನೂ ಮಾಡಿಲ್ಲ ಎಂದು ಬಿಜೆಪಿ ಮತ್ತು ಎಡರಂಗ ಆರೋಪಿಸುತ್ತಿವೆ. ಹೆದ್ದಾರಿ ಮತ್ತು ರೈಲ್ವೆ ಅಭಿವೃದ್ಧಿಯ ಬಹಳ ಕೆಲಸಗಳು ಆಗಿವೆ ಎಂದು ತರೂರ್‌ ಹೇಳಿಕೊಳ್ಳುತ್ತಿದ್ದಾರೆ. ತರೂರ್‌ ತಮ್ಮನ್ನು ‘ಜಾಗತಿಕ ಪ್ರಜೆ’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕಣದಲ್ಲಿರುವವರಲ್ಲಿ ಸ್ಥಳೀಯ ವ್ಯಕ್ತಿ ತಾವು ಮಾತ್ರ ಎಂದು ದಿವಾಕರನ್‌ ಹೇಳುತ್ತಿದ್ದಾರೆ.

ಲೆಕ್ಕಾಚಾರಗಳು

* 2014ರ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಒ. ರಾಜಗೋಪಾಲ್‌ ಅವರು ತರೂರ್‌ ವಿರುದ್ಧ ಕೇವಲ 15 ಸಾವಿರ ಮತಗಳಿಂದ ಸೋತರು. ಹಾಗಾಗಿ ಈ ಬಾರಿ ಇಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಬಿಜೆಪಿ ಭಾವಿಸಿದೆ. ತರೂರ್‌ ಹೆಂಡತಿ ಸುನಂದಾ ಪುಷ್ಕರ್‌ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಕೆಲ ಸಮಯದಲ್ಲೇ ಚುನಾವಣೆ ನಡೆಯಿತು. ಇದು ತರೂರ್‌ ಅವರಿಗೆ ಕಡಿಮೆ ಮತ ಬೀಳಲು ಕಾರಣ. ಜತೆಗೆ ಮೋದಿ ಅಲೆ ಬಲವಾಗಿತ್ತು. ಈ ಬಾರಿ ಈ ಎರಡೂ ಅನುಕೂಲಕರ ಅಂಶ ಬಿಜೆಪಿಗೆ ಇಲ್ಲ ಎಂದು ಕಾಂಗ್ರೆಸ್‌ ಹೇಳುತ್ತಿದೆ

* ಅಷ್ಟೊಂದು ಜನಪ್ರಿಯರಲ್ಲದ ಡಾ. ಬೆನೆಟ್‌ ಅಬ್ರಹಾಂ ಅವರನ್ನು2014ರಲ್ಲಿ ಸಿಪಿಐ ಕಣಕ್ಕಿಳಿಸಿತ್ತು. ಅವರು 2.48 ಲಕ್ಷ ಮತ ಪಡೆದಿದ್ದರು. ಅದು ತರೂರ್‌ ಅವರು ಪಡೆದ ಮತಗಳಿಗಿಂತ 50 ಸಾವಿರ ಕಡಿಮೆ. ಆದರೆ, ಈ ಬಾರಿ ಅನುಭವಿ ರಾಜಕಾರಣಿ ದಿವಾಕರನ್‌ ಅವರನ್ನು ಕಣಕ್ಕೆ ಇಳಿಸಲಾಗಿದೆ. ಅದಲ್ಲದೆ, ಎಡರಂಗವು ಸಾಧ್ಯವಾದಷ್ಟು ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ

* ಕೇರಳದ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳಬೇಕು ಎಂಬುದು ಎಡರಂಗದ ಗುರಿ. ಹಾಗಾಗಿ, ಸಿಪಿಐ ಅಭ್ಯರ್ಥಿಯು ಗೆಲ್ಲುವ ಸಾಧ್ಯತೆ ಕಡಿಮೆ ಇದ್ದರೆ, ಕೊನೆ ಕ್ಷಣದಲ್ಲಿ ಎಡರಂಗವು ಕಾಂಗ್ರೆಸ್‌ ಪರವಾಗಿ ನಿಲ್ಲಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT