ಗುರುವಾರ , ನವೆಂಬರ್ 21, 2019
27 °C
ಗಡಿ ದಾಟಿ ಬಂದ ಶಸ್ತ್ರಸಜ್ಜಿತ 50 ಉಗ್ರ‍ರ ಪಡೆ?

ಕಾಶ್ಮೀರ: ಮತ್ತೆ ದಾಳಿ ಭೀತಿ, ಹಲವೆಡೆ ಕಟ್ಟೆಚ್ಚರ

Published:
Updated:

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಮತ್ತೆ ಉಗ್ರರ ದಾಳಿಯ ಭೀತಿ ದಟ್ಟವಾಗಿ ಮನೆ ಮಾಡಿದೆ. 

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಭಾರಿ ಶಸ್ತ್ರಾಸ್ತ್ರಗಳೊಂದಿಗೆ 50 ಉಗ್ರರ ತಂಡ ಕಾಶ್ಮೀರದ ಒಳಕ್ಕೆ ನುಸುಳಿದೆ ಎಂಬ ವರದಿಗಳು ಆತಂಕಕ್ಕೆ ಕಾರಣವಾಗಿದ್ದು, ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. 

ವಿವಿಧ ಉಗ್ರಗಾಮಿ ಸಂಘಟನೆಗಳ ಸದಸ್ಯರು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಕಾಶ್ಮೀರ ಪ್ರವೇಶಿಸಿದ್ದಾರೆ. ಕಠಿಣ ತರಬೇತಿ ಪಡೆದಿರುವ, ಆಧುನಿಕ ಶಸ್ತ್ರಾಸ್ತ್ರ ಹೊಂದಿರುವ ಉಗ್ರರನ್ನು ಕಾಶ್ಮೀರದಲ್ಲಿ ಆತ್ಮಾಹುತಿ ದಾಳಿ ಎಸಗಲು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಎಲ್ಒಸಿಯ ವಿವಿಧ ಜಾಗಗಳಲ್ಲಿ ಒಳನುಸುಳುವಿಕೆ ಯತ್ನಗಳು ನಡೆದಿದ್ದವು. ಕೆಲವು ವಾರಗಳಿಂದ ಎರಡೂ ಕಡೆಗಳಿಂದ ಗುಂಡಿನ ಚಕಮಕಿ ಹೆಚ್ಚಳವಾಗಿದೆ. ಗುಂಡಿನ ಚಕಮಕಿಯ ಲಾಭ ಪಡೆದು ಉಗ್ರರು ಗಡಿ ದಾಟಿ ಬರುತ್ತಿದ್ದಾರೆ. ಇಂತಹ ಹಲವು ಯತ್ನಗಳನ್ನು ಸೇನೆ ವಿಫಲಗೊಳಿಸಿದ್ದರೂ, ಕೆಲವರು ಒಳನುಗ್ಗಿದ್ದಾರೆ ಎನ್ನಲಾಗಿದೆ. 

ಕಾಶ್ಮೀರದ ಸ್ಥಳೀಯ ಯುವಕರು ಉಗ್ರಗಾಮಿ ಸಂಘಟನೆಗಳಿಗೆ ಸೇರ್ಪಡೆಯಾಗಿರುವ ಬಗ್ಗೆ ಖಚಿತ ಮಾಹಿತಿಯಿಲ್ಲ. ಜಮ್ಮು–ಕಾಶ್ಮೀರದ ವಿಶೇಷಾಧಿಕಾರವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ವಿಚಾರವನ್ನೇ ಇಟ್ಟುಕೊಂಡು ಯುವಕ
ರನ್ನು ಸೆಳೆಯಲು ಸಂಘಟನೆಗಳು ಯತ್ನಿಸುತ್ತಿವೆ. ಕೆಲವು ಯುವಕರು ತಮ್ಮ ಮನೆಗಳಿಂದ ನಾಪತ್ತೆಯಾಗಿದ್ದು, ಅವರು ಸಂಘಟನೆಗಳನ್ನು ಸೇರಿಕೊಂಡಿರಬಹುದು ಎಂಬ ಅನುಮಾನ ಇದೆ. 

ಉಗ್ರರ ಒಳನುಸುಳುವಿಕೆ ಯತ್ನಗಳು ನಡೆದಿವೆ ಎಂಬುದನ್ನು ರಾಜ್ಯದ ಪೊಲೀಸ್ ಮುಖ್ಯಸ್ಥ ದಿಲ್‌ಬಾಗ್‌ ಖಚಿತ ಪಡಿಸಿದ್ದಾರೆ. ಆದರೆ, ಉಗ್ರ ಸಂಘಟನೆಗಳಿಗೆ ಸ್ಥಳೀಯರ ನೇಮಕಾತಿ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ. ‘ಈ ಹಿಂದೆ ಯುವಕರನ್ನು ತಪ್ಪುದಾರಿಗೆಳೆಯಲಾಗಿತ್ತು. ಈ ಪೈಕಿ ಕೆಲವರನ್ನು ನಾವು ಕರೆತಂದಿದ್ದೇವೆ’ ಎಂದಿದ್ದಾರೆ. 

ಕಣಿವೆಯಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಯಲ್ಲಿ ಆಗಿರುವ ವ್ಯತ್ಯಯ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಲು ಅಡ್ಡಿಯಾಗಿದೆ ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ. 

‘ದೂರವಾಣಿಗಳು ಕೆಲಸ ಮಾಡುತ್ತಿಲ್ಲ. ಬಹುತೇಕ ಸಂಪರ್ಕ ಮಾಧ್ಯಮಗಳು ಸ್ಥಗಿತಗೊಂಡಿವೆ. ಕಳೆದ ಐದು ವಾರಗಳಲ್ಲಿ ಯಾವುದೇ ಎನ್‌ಕೌಂಟರ್ ನಡೆದಿಲ್ಲ ಎಂಬುದಕ್ಕೆ ಇದೂ ಒಂದು ಕಾರಣ’ ಎಂದಿದ್ದಾರೆ.

ಜೈಷ್‌ ಉಗ್ರ ಸಂಘಟನೆ ಹಾಗೂ ಪಾಕಿಸ್ತಾನ ಸೇನೆ ಜಂಟಿಯಾಗಿ ಯೋಜಿಸಿದ್ದ ವಿಧ್ವಂಸಕ ಕೃತ್ಯವನ್ನು ಸೇನೆ ಇತ್ತೀಚೆಗೆ ವಿಫಲಗೊಳಿಸಿತ್ತು. ಕುಪ್ವಾರ ಜಿಲ್ಲೆಯ ಕೆರನ್ ವಲಯದಲ್ಲಿ ಐವರನ್ನು ಹೊಡೆದುರುಳಿಸಲಾಗಿತ್ತು.  

ಭಾರತೀಯ ಸೇನೆಯ ಗಡಿಠಾಣೆಗಳಲ್ಲಿ ವಿಧ್ವಂಸಕ ಕೃತ್ಯ ಎಸಗುವುದು ಉಗ್ರರ ಉದ್ದೇಶವಾಗಿತ್ತು. ಹತ್ಯೆಯಾದ ಉಗ್ರರ ಬಳಿ ಭಾರಿ ಶಸ್ತ್ರಾಸ್ತ್ರ ಸಿಕ್ಕಿದ್ದವು.

ಜೈಷ್ ಉಗ್ರರ ಬಂಧನ ಶಸ್ತ್ರಾಸ್ತ್ರ, ಮದ್ದುಗುಂಡು ಜಪ್ತಿ
ಜಮ್ಮು (ಪಿಟಿಐ): ಜಮ್ಮು–ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಜೈಷ್–ಎ–ಮೊಹಮ್ಮದ್ ಸಂಘಟನೆಯ ಮೂವರು ಉಗ್ರರನ್ನು ಪೊಲೀಸರು ಗುರುವಾರ ಬೆಳಿಗ್ಗೆ ಬಂಧಿಸಿದ್ದಾರೆ. 

ಜಮ್ಮು–ಪಠಾಣ್‌ಕೋಟ್‌ ಹೆದ್ದಾರಿಯಲ್ಲಿ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಹಲಗೆಗಳನ್ನು ಸಾಗಿಸುತ್ತಿದ್ದ ಟ್ರಕ್‌ ತಪಾಸಣೆ ಮಾಡಿದಾಗ ಅದರಲ್ಲಿ ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರ ಪತ್ತೆಯಾಗಿವೆ ಎಂದು ಜಮ್ಮು ಐಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ. 

ಲಖನ್‌ಪುರದಲ್ಲಿ ದೊರೆತ ಖಚಿತ ಮಾಹಿತಿ ಆಧರಿಸಿ ಜೆಕೆ 13–ಇ2000 ಸಂಖ್ಯೆಯ ಟ್ರಕ್‌ ತಪಾಸಣೆ ಮಾಡಿ, ಮೂವರನ್ನು ಬಂಧಿಸಲಾಯಿತು ಎಂದು ಕಠುವಾ ಹಿರಿಯ ಎಸ್ಪಿ ಶ್ರೀಧರ್ ಪಾಟೀಲ್ ತಿಳಿಸಿದ್ದಾರೆ. ಪುಲ್ವಾಮಾದ ಗುಲ್ಶನಾಬಾದ್‌ನ ಸುಹೇಲ್ ಅಹ್ಮದ್ ಲಾಟೂ ಅವರು ಟ್ರಕ್‌ನ ಮಾಲೀಕ. ಜಾವೇದ್ ಅಹಮದ್ ದಾರ್ ಎಂಬಾತ ಟ್ರಕ್ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಶಸ್ತ್ರಾಸ್ತ್ರ ಮದ್ದುಗುಂಡು: ಬಂಧಿತ ಉಗ್ರರಿಂದ ಎಕೆ–56 ರೈಫಲ್ಸ್, ಎರಡು ಎಕೆ–47 ರೈಫಲ್ಸ್, ಆರು ಸ್ಫೋಟಕಗಳು, 180 ಸುತ್ತು ಗುಂಡುಗಳು, ₹11 ಸಾವಿರ ಜಪ್ತಿ ಮಾಡಲಾಗಿದೆ. 

ಬಂಧಿತರು ಕಾಶ್ಮೀರ ಕಣಿವೆಗೆ ಸೇರಿದವರು. ‘ವಿಧ್ವಂಸಕ ಕೃತ್ಯ ಎಸಗಲು ಜೈಷ್ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ನೀಡುವುದು ಈ ಸಾಗಣೆಯ ಉದ್ದೇಶ ಆಗಿರಬಹುದು’ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ. 

ಉಗ್ರರಿಗೆ ಅಪಾರ ವೆಚ್ಚ: ಪಾಕ್‌ ಸಚಿವ
ಇಸ್ಲಾಮಾಬಾದ್‌: ಜಮಾತ್‌ ಉದ್‌ ದವಾ (ಜೆಯುಡಿ) ಸಂಘಟನೆಯ ಮೇಲೆ ಪಾಕಿಸ್ತಾನವು ನೂರಾರು ಕೋಟಿ ರೂಪಾಯಿ ವ್ಯಯ ಮಾಡಿದೆ ಎಂದು ಅಲ್ಲಿನ ಗೃಹ ಸಚಿವ ಬ್ರಿಗೇಡಿಯರ್‌ ಇಜಾಜ್‌ ಅಹ್ಮದ್‌ ಶಾ ಹೇಳಿದ್ದಾರೆ.

ಉಗ್ರಗಾಮಿ ಸಂಘಟನೆ ಎಂದು ಗುರುತಿಸಿಕೊಂಡಿರುವ ಜೆಯುಡಿ
ಯನ್ನು ಮುಖ್ಯವಾಹಿನಿಗೆ ತರಲು ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರವು ಅಪಾರ ಹಣ ವೆಚ್ಚ ಮಾಡಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಈಗಲೂ 30 ಸಾವಿರದಿಂದ 40 ಸಾವಿರ ಉಗ್ರರು ಇದ್ದಾರೆ ಎಂದು ಇಮ್ರಾನ್‌ ಅವರು ಜುಲೈನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಹೇಳಿದ್ದರು.


ಉಗ್ರರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು–ಪಿಟಿಐ ಚಿತ್ರಗಳು

*
ಉಗ್ರರ ಯತ್ನಗಳನ್ನು ತಡೆದಿದ್ದೇವೆ. ಆದರೂ ಕೆಲವರು ಗಡಿ ದಾಟಿರುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ.
-ದಿಲ್‌ಬಾಗ್‌, ಕಾಶ್ಮೀರದ ಪೊಲೀಸ್ ಮುಖ್ಯಸ್ಥ

**
ನೂರಾರು ಉಗ್ರರನ್ನು ಎಲ್‌ಒಸಿಯಲ್ಲಿ ಪಾಕಿಸ್ತಾನ ನಿಯೋಜಿಸಿದೆ. ದೇಶದೊಳಕ್ಕೆ ನುಸುಳಲು ಅವರು ಹವಣಿಸುತ್ತಿದ್ದಾರೆ. ನಾವು ನಿಗಾ ವಹಿಸಿದ್ದೇವೆ.
-ಸೇನೆಯ ಅಧಿಕಾರಿ

ಪ್ರತಿಕ್ರಿಯಿಸಿ (+)