ಬಾಯಾರಿದ ಚೆನ್ನೈಗೆ ಕಾವೇರಿ ನೀರು | 25 ಸಾವಿರ ಲೀ. ನೀರು ಹೊತ್ತ ರೈಲು ನಗರಕ್ಕೆ

ಮಂಗಳವಾರ, ಜೂಲೈ 23, 2019
24 °C

ಬಾಯಾರಿದ ಚೆನ್ನೈಗೆ ಕಾವೇರಿ ನೀರು | 25 ಸಾವಿರ ಲೀ. ನೀರು ಹೊತ್ತ ರೈಲು ನಗರಕ್ಕೆ

Published:
Updated:
Prajavani

ಚೆನ್ನೈ: ಕುಡಿಯುವ ನೀರಿನ ತೀವ್ರ ಕೊರತೆಯಿಂದ ತತ್ತರಿಸಿದ್ದ ಚೆನ್ನೈಗೆ ರೈಲಿನ ಮೂಲಕ ಜೀವಜಲ ಹರಿಸಲಾಗಿದೆ. ವೆಲ್ಲೂರು ಜಿಲ್ಲೆಯ ಜೋಲಾರ್‌ಪೇಟೆಯಿಂದ, 25 ಲಕ್ಷ ಲೀಟರ್‌ ಕಾವೇರಿ ನೀರು ಹೊತ್ತ ರೈಲು ಶುಕ್ರವಾರ ಚೆನ್ನೈ ನಗರದಲ್ಲಿನ ವಿಲ್ಲಿವಾಕ್ಕಂನ ಕೋಚ್‌ ಫ್ಯಾಕ್ಟರಿ ಆವರಣವನ್ನು ತಲುಪಿತು.

ಮುಂದಿನ ಆರು ತಿಂಗಳು ವಿಶೇಷ ವ್ಯಾಗನ್‌ಗಳನ್ನು ಅಳವಡಿಸಿದ ಇಂಥ ಎರಡು ರೈಲುಗಳು ನಿತ್ಯ ನಾಲ್ಕು ಬಾರಿ ಚೆನ್ನೈಗೆ ಸುಮಾರು 1 ಕೋಟಿ ಲೀಟರ್‌ನಷ್ಟು ನೀರನ್ನು ಸಾಗಣೆ ಮಾಡಲಿವೆ.

ತಲಾ 50,000 ಲೀಟರ್‌ ಸಾಮರ್ಥ್ಯದ, 50 ಟ್ಯಾಂಕ್‌ ವ್ಯಾಗನ್‌ಗಳನ್ನು ಅಳವಡಿಸಲಾಗಿದೆ. ಜೋಲಾರ್‌ಪೇಟೆಯಿಂದ ಬೆಳಿಗ್ಗೆ 7.15 ಗಂಟೆಗೆ ನಿರ್ಗಮಿಸಿದ್ದ ರೈಲು ಚೆನ್ನೈಗೆ ಮಧ್ಯಾಹ್ನ 12 ಗಂಟೆಗೆ ತಲುಪಿತು.

ಬಳಿಕ ನೀರನ್ನು ಕಿಲ್‌ಪೌಕ್‌ ಪಂಪಿಂಗ್‌ ಸ್ಟೇಷನ್‌ಗೆ ಸುಮಾರು 100 ಪೈಪ್‌ಗಳ ಮೂಲಕ ಹರಿಸಿದ್ದು, ಅಲ್ಲಿ ಶುದ್ಧೀಕರಣ ಕಾರ್ಯ ನಡೆಯಲಿದೆ.  ನೀರಿನ ವ್ಯಾಗನ್‌ಗಳನ್ನು ಹೊತ್ತು ರೈಲು ವಿಲ್ಲಿವಾಕ್ಕಂಗೆ ಬಂದಾಗ, ಸಚಿವರಾದ ಎಸ್‌.ಪಿ.ವೇಲುಮಣಿ, ಡಿ. ಜಯಕುಮಾರ್, ಪಿ.ಬೆಂಜಮಿನ್ ಮತ್ತು ಕೆ.ಪಾಂಡ್ಯರಾಜನ್‌ ಉಪಸ್ಥಿತರಿದ್ದರು. 

‘ನಗರದ ನೀರಿನ ಬೇಡಿಕೆ ಈಡೇರಿಸಲು ಕ್ರಮವಹಿಸಲಾಗಿದೆ. ಇಂದು ಜೋಲಾರ್‌ಪೇಟೆಯಿಂದ 25 ಲಕ್ಷ ಲೀಟರ್‌ ನೀರು ತಲುಪಿದೆ. ನಿತ್ಯ ಒಂದು ಕೋಟಿ ಲೀಟರ್‌ ನೀರು ತರಿಸುವುದು ನಮ್ಮ ಗುರಿ. ಇದಕ್ಕಾಗಿ ಜೋಲಾರ್‌ಪೇಟೆಯ ಮೆಟ್ಟು ಸಕ್ರಕುಪ್ಪಂನಿಂದ ರೈಲ್ವೆ ಸ್ಟೇಷನ್‌ವರೆಗೆ ಪ್ರತ್ಯೇಕ ಪೈಪ್‌ಗಳನ್ನು ಅಳವಡಿಸಲಾಗಿದೆ’ ಎಂದು ಪೌರಾಡಳಿತ ಸಚಿವ ವೇಲುಮಣಿ ಹೇಳಿದರು.

ಜೋಲಾರ್‌ಪೇಟೆಯಿಂದ ನೀರು ಸಾಗಣೆಗೆ ಕ್ರಮ ಕುರಿತಂತೆ ಈ ಹಿಂದೆಯೇ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ರೈಲ್ವೆ ಇಲಾಖೆಯ ನೆರವು ಕೋರಿದ್ದರು. ಈ ಉದ್ದೇಶಕ್ಕಾಗಿ ₹ 68 ಕೋಟಿ ಬಿಡುಗಡೆ ಮಾಡಿದ್ದರು.

‘ಚೆನ್ನೈ ನಗರದ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ₹ 233.72 ಕೋಟಿ ಹಂಚಿಕೆ ಮಾಡಿದೆ. ಸರ್ಕಾರ ಸುಮಾರು 800 ವಾಹನಗಳನ್ನು ಬಾಡಿಗೆಗೆ ಪಡೆದಿದ್ದು, ನಿತ್ಯ ನಗರದ ವಿವಿಧೆಡೆ 9000 ಟ್ರಿಪ್‌ಗಳಲ್ಲಿ ನೀರು ಪೂರೈಸಲಾಗುತ್ತಿದೆ. ಇದರಲ್ಲಿ  6,500 ಉಚಿತ ವಿತರಣೆ ಟ್ರಿಪ್‌ಗಳು. ಉಳಿದವು ಫೋನ್‌, ಆನ್‌ಲೈನ್‌ ಮೂಲಕ ಕಾಯ್ದಿರಿಸಿದವರಿಗೆ ವಿತರಣೆ ಆಗುತ್ತಿದೆ’ ಎಂದು ವೇಲುಮಣಿ ವಿವರಿಸಿದರು.

ವೆಲ್ಲೂರು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಕಾವೇರಿ ಮತ್ತು ಇತರ ಮೂಲಗಳಿಂದ ಪಡೆದ ನೀರನ್ನು ನಿರ್ದಿಷ್ಟ ಸ್ಥಳದಲ್ಲಿ ಸಂಗ್ರಹಿಸಲಾಗುತ್ತಿದೆ. ಅಲ್ಲಿಂದ ಜೋಲಾರ್‌ಪೇಟೆ ರೈಲ್ವೆ ನಿಲ್ದಾಣದ ಬಳಿ ಸ್ಥಾಪಿಸಿದ ಪಂಪಿಂಗ್‌ ಸ್ಟೇಷನ್‌ಗೆ ಹರಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !