ಸೋಮವಾರ, ಆಗಸ್ಟ್ 26, 2019
20 °C

ನೀರು ಕೇಳಿದ ಆದಿವಾಸಿ ಯುವಕರಿಗೆ ಮೂತ್ರ ಕುಡಿಸಿದ ಆರೋಪ: ನಾಲ್ವರು ಪೊಲೀಸರ ಅಮಾನತು

Published:
Updated:

ಭೋಪಾಲ್: ಆದಿವಾಸಿ ಯುವಕರಿಗೆ ಮೂತ್ರ ಕುಡಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ಆಲಿರಾಜಪುರ ಜಿಲ್ಲೆ ನಾನ್‌ಪುರ್ ಠಾಣೆಯ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ, ಇಲಾಖಾ ವಿಚಾರಣೆಗೆ ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.

‘ಆದಿವಾಸಿ ಯುವಕರನ್ನು ಪೊಲೀಸರು ಮೂರು ದಿನಗಳ ಹಿಂದೆ ವಶಕ್ಕೆ ತೆಗೆದುಕೊಂಡಿದ್ದರು. ಚಿತ್ರಹಿಂಸೆಯಿಂದ ಐವರ ದೇಹದ ಮೇಲೆಯೂ ಗಾಯದ ಗುರುತುಗಳು ಮೂಡಿದ್ದವು. ಪೊಲೀಸರ ತಪ್ಪು ಮೇಲ್ನೋಟಕ್ಕೆ ಸಾಬೀತಾದ ಕಾರಣ ಅವರನ್ನು ಅಮಾನತು ಮಾಡಲಾಯಿತು’ ಎನ್ನುವ ಆಲಿರಾಜ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಪುಲ್ ಶ್ರೀವಾಸ್ತವ ಅವರ ಹೇಳಿಕೆಯನ್ನು ‘ಇಂಡಿಯನ್ ಎಕ್ಸ್‌ಪ್ರೆಸ್‌’ ಮಂಗಳವಾರ ವರದಿ ಮಾಡಿದೆ. 

ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಈ ಯುವಕರನ್ನು ಪೊಲೀಸರು ವಿಚಾರಣೆಗೆಂದು ವಶಕ್ಕೆ ತೆಗೆದುಕೊಂಡಿದ್ದರು. ಐಪಿಸಿ 353ರ ಅನ್ವಯ (ಸರ್ಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸುವುದು) ಪ್ರಕರಣ ದಾಖಲಿಸಲಾಗಿತ್ತು. ಸ್ಥಳೀಯ ನ್ಯಾಯಾಲಯವು ನೀಡಿದ ಜಾಮೀನಿನ ಮೇಲೆ ಹೊರ ಬಂದ ಆದಿವಾಸಿಗಳು ಪೊಲೀಸರು ನಮಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದರು.

ಆದಿವಾಸಿ ಯುವಕರ ಪೈಕಿ ಓರ್ವನ ಸೋದರಿಯನ್ನು ಮತ್ತೊಬ್ಬ ಯುವಕ ಚುಡಾಯಿಸಿದ್ದ. ಈ ಗಲಾಟೆ ವಿಕೋಪಕ್ಕೆ ಹೋಗಿತ್ತು. ಚುಡಾಯಿಸಿದ ಯುವಕನನ್ನು ಆದಿವಾಸಿಗಳು ಬೆನ್ನಟ್ಟಿದಾಗ ಆ ಯುವಕ ಪೊಲೀಸ್ ವಾಹನವೊಂದರ ಬಳಿ ಹೋಗಿ ರಕ್ಷಣೆ ಬೇಡಿದ. ಪೊಲೀಸರು ಮಧ್ಯಪ್ರವೇಶಿಸಿದಾಗ ಆದಿವಾಸಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನುವುದು ಪೊಲೀಸರು ನೀಡುವ ವಿವರ.

‘ಈವರೆಗೆ ಆ ಯುವಕ ಆದಿವಾಸಿಗಳ ಮೇಲೆ ದೂರು ನೀಡಿಲ್ಲ. ಆದರೆ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾನೆ’ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಹೇಳಿದೆ.

Post Comments (+)