ಶುಕ್ರವಾರ, ಫೆಬ್ರವರಿ 21, 2020
24 °C

ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಾಣ: ಪ್ರತಿಭಟನೆಗಿಳಿದಿದ್ದ ಸೋದರಿಯರ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕೋಲ್ಕತ: ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಗ್ರಾಮದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಕುಳಿತಿದ್ದ ಇಬ್ಬರು ಸೋದರಿಯರನ್ನು ಕಟ್ಟಿಹಾಕಿ, ರಸ್ತೆಗೆ ಎಳೆದು ತಂದು ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ದಿನಾಂಜ್‌ಪುರದಲ್ಲಿ ನಡೆದಿದೆ.

ತೃಣಮೂಲ ಕಾಂಗ್ರೆಸ್ ನೇತೃತ್ವದ ಪಂಚಾಯತ್ ನಾಯಕ ಮತ್ತು ಆತನ ಸಹಚರರು ಈ ಕೃತ್ಯವನ್ನು ಎಸಗಿದ್ದಾರೆ. 

ಹಲ್ಲೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಟಿಎಂಸಿಯ ಪಂಚಾಯತ್ ನಾಯಕ ಅಮಲ್ ಸರ್ಕಾರ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಹಲ್ಲೆಗೊಳಗಾದ ಇಬ್ಬರು ಮಹಿಳೆಯರು ಬಿಜೆಪಿ ಕಾರ್ಯಕರ್ತೆಯರಾಗಿದ್ದರು ಎಂದು ಬಿಜೆಪಿ ಹೇಳಿಕೊಂಡಿದೆ.

ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಕುರಿತು ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಗಂಗಾರಾಂಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪುರ್ನೇಂದು ಕುಮಾರ್ ಕುಂದು ಹೇಳಿದ್ದಾರೆ.

ಈ ಕುರಿತು ಸಂತ್ರಸ್ತೆಯಲ್ಲೊಬ್ಬರಾದ 29 ವರ್ಷದ ಸ್ಮೃತಿ ಕನ ದಾಸ್ ದೂರು ದಾಖಲಿಸಿದ್ದಾರೆ. ನಮ್ಮ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಗ್ರಾಮಕ್ಕೆ ರಸ್ತೆ ನಿರ್ಮಿಸಲು ಮುಂದಾಗಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸರ್ಕಾರ್ ಮತ್ತು ಆತನ ನಾಲ್ವರು ಸಹಚರರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದರು. ಬಳಿಕ ಕೆಳಗೆ ಬಿದ್ದ ನನ್ನ ಕಾಲಿಗೆ ಹಗ್ಗವನ್ನು ಕಟ್ಟಿ ಸುಮಾರು 30 ಅಡಿಗಳ ದೂರ ಎಳೆದುಕೊಂಡು ಹೋಗಿ ಚೆನ್ನಾಗಿ ಥಳಿಸಿದರು. ಬಳಿಕ ಬೆದರಿಕೆಯೊಡ್ಡಿದರು ಎಂದು ದೂರಿದ್ದಾರೆ. 

ಸ್ಮೃತಿ ಅವರ ಮೇಲಿನ ಹಲ್ಲೆಯನ್ನು ತಡೆಯಲು ಬಂದ ಸೋದರಿ ಶೋಮಾ ದಾಸ್ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ವೇಳೆ ಚಿನ್ನದ ಸರ ಮತ್ತು ಮೊಬೈಲ್ ಕಸಿದುಕೊಂಡಿದ್ದಾರೆ. ಆಕೆಯ ಕಾಲುಗಳನ್ನು ಕಟ್ಟಿಹಾಕಿ ರಸ್ತೆಗೆ ಎಳೆದು ಬಿಟ್ಟಿದ್ದಾರೆ. ಈ ವೇಳೆ ಚೆನ್ನಾಗಿ ಥಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಘಟನೆಯನ್ನು ಖಂಡಿಸಿರುವ ಬಾಲೂರ್‌ಘಾಟ್‌ನ ಬಿಜೆಪಿ ಸಂಸದ ಸುಕಾಂತ್ ಮಜುಂದಾರ್ ಮಾತನಾಡಿ, ಇದೊಂದು ಅನಾಗರಿಕ ನಡೆಯಾಗಿದೆ. ನಾಗರಿಕ ಸಮಾಜದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತವೆ ಎಂಬುದನ್ನು ಕೂಡ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪಂಚಾಯತ್ ನಾಯಕನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. 

ದಕ್ಷಿಣ ದಿಂಜಾಪುರದ ಟಿಎಂಸಿ ಅಧ್ಯಕ್ಷರಾದ ಅರ್ಪಿತಾ ಘೋಷ್ ಮಾತನಾಡಿ, ಕಾನೂನನ್ನು ಕೈಗೆತ್ತಿಕೊಂಡ ಸರ್ಕಾರ್ ಅವರನ್ನು ತಕ್ಷಣ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಆದರೆ ಯಾರಿಂದರೂ ಅಭಿವೃದ್ಧಿ ಕಾರ್ಯಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು