ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ: ಆರೋಪಿ ಬೆಂಬಲಕ್ಕೆ ನಿಂತ ಪಕ್ಷದ ನಾಯಕರು

ಉನ್ನಾವ್ ಅತ್ಯಾಚಾರ ಪ್ರಕರಣ
Last Updated 3 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಲಖನೌ: ಕಾರಿಗೆ ಲಾರಿ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನ್ಯುಮೋನಿಯಾದಿಂದ ಬಳಲುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಶನಿವಾರ ತಿಳಿಸಿದ್ದಾರೆ.

‘19 ವರ್ಷದ ಸಂತ್ರಸ್ತೆಗೆ ಜೀವರಕ್ಷಕ ಸಾಧನದ (ವೆಂಟಿಲೇಟರ್) ನೆರವು ಮುಂದುವರಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಅವರ ವಕೀಲ ಜೀವರಕ್ಷಕ ಸಾಧನದ ನೆರವಿಲ್ಲದೇ ಸಹಜವಾಗಿ ಉಸಿರಾಡುತ್ತಿದ್ದಾರೆ’ ಎಂದು ಕಿಂಗ್ ಜಾರ್ಜ್‌ ವೈದ್ಯಕೀಯ ವಿಶ್ವವಿದ್ಯಾಲಯದ ಸಂದೀಪ್ ತಿವಾರಿ ಹೇಳಿದ್ದಾರೆ.

ವಿಚಾರಣೆ: ಜೈಲಿನಲ್ಲಿರುವ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಅವರನ್ನು ಸಿಬಿಐ ಅಧಿಕಾರಿಗಳ ತಂಡ ಶನಿವಾರ ವಿಚಾರಣೆಗೆ ಒಳಪಡಿಸಿತು.

ಮರುಸೃಷ್ಟಿ:ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮಕ್ಕೆ ಮುಂದಾಗಿರುವ ಸಿಬಿಐ, ವಿಧಿವಿಜ್ಞಾನ ತಜ್ಞರ ಜತೆ ಘಟನಾ ಸ್ಥಳಕ್ಕೆ ಶುಕ್ರವಾರ ತೆರಳಿ, ಅಪಘಾತ ನಡೆದ ಘಟನೆಯನ್ನು ಮರುಸೃಷ್ಟಿಸಲು ಯತ್ನಿಸಿತು. ಜೈಲಿನಲ್ಲಿ ಕುಲದೀಪ್ ಸೆಂಗರ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ವ್ಯಕ್ತಿಗಳ ವಿವರ ಒದಗಿಸುವಂತೆಯೂ ಕಾರಾಗೃಹ ಅಧಿಕಾರಿಗಳಿಗೆ ಸಿಬಿಐ ಸೂಚನೆ ನೀಡಿದೆ.

ಆಯುಧ ಪರವಾನಗಿ ರದ್ದು: ಅತ್ಯಾಚಾರ ಆರೋಪಿ ಹಾಗೂ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಸೆಂಗರ್ ಅವರ ಆಯುಧ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.

ಇಎಂಐ ಕತೆ ಕಟ್ಟಿದನೇ ಲಾರಿ ಮಾಲೀಕ?
ಡಿಕ್ಕಿ ಪ್ರಕರಣವು ಹೊಸ ತಿರುವು ಪಡೆದಿದೆ. ಲಾರಿಯ ನಂಬರ್ ಪ್ಲೇಟ್‌ ಮರೆಮಾಚಿರುವುದು ಟೋಲ್‌ ಸಂಗ್ರಹ ಕೇಂದ್ರದ ಸಿ.ಸಿ.ಟಿ.ವಿ. ಕ್ಯಾಮರಾದಲ್ಲಿ ದಾಖಲಾಗಿತ್ತು. ಈ ಕುರಿತು ಲಾರಿ ಮಾಲೀಕ ನೀಡಿದ ವಿವರಣೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

‘ಲಾರಿ ಖರೀದಿಗೆ ಮಾಡಿದ್ದ ಸಾಲದ ಇಎಂಐ (ತಿಂಗಳ ಕಂತು) ಬಾಕಿ ಇತ್ತು. ಸಾಲ ನೀಡಿದ ಕಂಪನಿಯು ಲಾರಿಯನ್ನು ಜಪ್ತಿ ಮಾಡುವ ಸಾಧ್ಯತೆ ಇದ್ದುದರಿಂದ, ನಂಬರ್ ಪ್ಲೇಟ್ ಮರೆಮಾಚಿ ಲಾರಿ ಓಡಿಸಲಾಗುತ್ತಿತ್ತು’ ಎಂದು ಮಾಲೀಕ ಹೇಳಿಕೆ ನೀಡಿದ್ದಾನೆ. ಆದರೆ ಲಾರಿ ಕೊಳ್ಳಲು ಸಾಲ ನೀಡಿದ್ದ ಖಾಸಗಿ ಸಂಸ್ಥೆ ಇದನ್ನು ಅಲ್ಲಗಳೆದಿದೆ.

‘ಲಾರಿ ಮಾಲೀಕ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಸಾಲ ಮರುಪಾವತಿಗೆ ಯಾವುದೇ ಒತ್ತಡ ಹೇರಿರಲಿಲ್ಲ’ ಎಂದು ಸಂಸ್ಥೆಯ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.

ಉಚ್ಚಾಟನೆಯಾದರೂ ಕಡಿಮೆಯಾಗದ ಹವಾ
ಬಿಜೆಪಿ ಶಾಸಕ ಸೆಂಗರ್‌ ಅವರನ್ನು ಪಕ್ಷ ಉಚ್ಚಾಟನೆ ಮಾಡಿದ್ದರೂ, ಅವರ ಪ್ರಭಾವವೇನೂ ಕಡಿಮೆಯಾಗಿಲ್ಲ. ಕೆಲವು ಶಾಸಕರು ಹಾಗೂ ಬಿಜೆಪಿ ಮುಖಂಡರು ಅವರ ಬೆಂಬಲಕ್ಕೆ ನಿಂತಿದ್ದಾರೆ.

ಉನ್ನಾವ್‌ನಲ್ಲಿ ಶುಕ್ರವಾರ ನಡೆದ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ಉನ್ನಾವ್ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ, ಪಕ್ಷದ ಮುಖಂಡರು ಹಾಗೂ ಶಾಸಕರು ‘ಸೆಂಗರ್ ನಿರಪರಾಧಿ’ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಸೆಂಗರ್ ಅವರು ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಶಂಸಿಸಿದ್ದಾರೆ.

‘ಗೌರವಾನ್ವಿತ ಸೆಂಗರ್ ಅವರು ಈಗ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅವರು ನಿರಪರಾಧಿಯಾಗಿ ಹೊರಬಂದು ಮತ್ತೆ ಸಕ್ರಿಯವಾಗಲಿದ್ದಾರೆ’ ಎಂದು ಬಿಜೆಪಿ ಶಾಸಕ ಆಶೀಶ್ ಸಿಂಗ್ ಸಮಾರಂಭದಲ್ಲಿ ವಿಶ್ವಾಸ ವ್ಯಕ್ತಪಡಿದರು. ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಬಿಜೆಪಿ ಶಾಸಕ ಬಂಬಾಲಾಲ್‌ ದಿವಾಕರ್, ‘ಸೆಂಗರ್ ಅವರು ಈ ಭಾಗದಲ್ಲಿ ಬಿಜೆಪಿಯ ಪ್ರಬಲ ನಾಯಕ’ ಎಂದು ಪ್ರತಿಪಾದಿಸಿದರು.

ಸಮಾರಂಭದ ಬ್ಯಾನರ್‌ಗಳಲ್ಲಿ ಸೆಂಗರ್ ಅವರ ಭಾವಚಿತ್ರ ರಾರಾಜಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT