ಮಂಗಳವಾರ, ಆಗಸ್ಟ್ 20, 2019
25 °C

ಉನ್ನಾವ್ ಅತ್ಯಾಚಾರ ಪ್ರಕರಣ: ಹೋರಾಟವೇ ದುಬಾರಿಯಾಯಿತೇ?

Published:
Updated:
Prajavani

ಲಖನೌ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯು ನ್ಯಾಯಕ್ಕಾಗಿ ನಡೆಸಿದ ಹೋರಾಟ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ ಎಂದು ವಿರೋಧ ಪಕ್ಷಗಳ ನಾಯಕರು ಮತ್ತು ಸಾಮಾಜಿಕ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತೆಯು ಅತ್ಯಾಚಾರದ ವಿರುದ್ಧ ಧ್ವನಿ ಎತ್ತಿದ ನಂತರ ತನ್ನ ಕುಟುಂಬದ ನಾಲ್ಕು ಜನರನ್ನು ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಸಂತ್ರಸ್ತೆಯ ತಂದೆಯೂ ಸೇರಿದ್ದಾರೆ. ಈ ನಾಲ್ವರಲ್ಲಿ ಮೂವರು ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿ ದ್ದರು.

ಅತ್ಯಾಚಾರದ ವಿರುದ್ಧ ದೂರು ದಾಖಲಿಸಿದ ಬೆನ್ನಲ್ಲೇ ಸಂತ್ರಸ್ತೆಯ ಒಬ್ಬ ಚಿಕ್ಕಪ್ಪನನ್ನು ಆರೋಪಿ ಕುಲದೀಪ್ ಸೆಂಗರ್‌ನ ಬೆಂಬಲಿಗರು ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿದೆ. ಉನ್ನಾವ್ ಜಿಲ್ಲೆಯ ಮಾಖಿ ಗ್ರಾಮದಲ್ಲಿ ಈ ಕೊಲೆ ನಡೆದಿತ್ತು. ಇದರ ತನಿಖೆ ನಡೆಯುತ್ತಿದೆ.

ಇದಾದ ನಂತರ ಸಂತ್ರಸ್ತೆಯ ತಂದೆಯನ್ನು ಹಳೆಯ ಪ್ರಕರಣವೊಂದರಲ್ಲಿ ಪೊಲೀಸರು ಬಂಧಿಸಿದ್ದರು. ಅದಕ್ಕೂ ಮುನ್ನ ಅವರ ಮೇಲೆ ಹಲ್ಲೆಯಾಗಿತ್ತು. ಇದನ್ನು ಕುಲದೀಪ್ ಸೆಂಗರ್‌ನ ಸೋದರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ವಶದಲ್ಲಿದ್ದಾಗಲೇ ಸಂತ್ರಸ್ತೆಯ ತಂದೆ ಮೃತಪಟ್ಟಿದ್ದರು. ಅವರ ದೇಹದ ಮೇಲೆ ಮತ್ತು ಒಳಗೆ ತೀವ್ರವಾದ ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು.

ಉನ್ನಾವ್ ಅತ್ಯಾಚಾರ ಪ್ರಕರಣ: ಬಿಜೆಪಿಯಿಂದ ಕುಲದೀಪ್ ಸೆಂಗರ್ ಉಚ್ಚಾಟನೆ

ಇದಾದ ನಂತರ ಸಂತ್ರಸ್ತೆಯ ಮತ್ತೊಬ್ಬ ಚಿಕ್ಕಪ್ಪ ಮಹೇಶ್ ಸಿಂಗ್ ಅವರನ್ನು ಪೊಲೀಸರು ಹಳೆಯ ಪ್ರಕರಣವೊಂದರಲ್ಲಿ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ಮಹೇಶ್ ಸಿಂಗ್ ಈಗ ರಾಯಬರೇಲಿ ಕಾರಾಗೃಹದಲ್ಲಿದ್ದಾರೆ.

ಮಹೇಶ್ ಸಿಂಗ್ ಅವರನ್ನು ಭೇಟಿ ಮಾಡಲು ಸಂತ್ರಸ್ತೆ, ಆಕೆಯ ವಕೀಲ, ಮಹೇಶ್ ಸಿಂಗ್ ಅವರ ಪತ್ನಿ (ಸಂತ್ರಸ್ತೆಯ ಚಿಕ್ಕಮ್ಮ) ಮತ್ತು ಸಂತ್ರಸ್ತೆಯ ಮತ್ತೊಬ್ಬ ಚಿಕ್ಕಮ್ಮ ಇದೇ ಭಾನುವಾರ (ಜುಲೈ 28) ರಾಯಬರೇಲಿಗೆ ಕಾರಿನಲ್ಲಿ ತೆರಳುತ್ತಿದ್ದರು. ಆಗ ಎದುರಿನಿಂದ ಬಂದ ಲಾರಿಯೊಂದು ಇವರ ಕಾರಿಗೆ ಅಪ್ಪಳಿಸಿತ್ತು. ಸಂತ್ರಸ್ತೆಯ ಇಬ್ಬರು ಚಿಕ್ಕಮ್ಮಂದಿರೂ ಮೃತಪಟ್ಟರು. ಸಂತ್ರಸ್ತೆ ಮತ್ತು ವಕೀಲ ತೀವ್ರವಾಗಿ ಗಾಯಗೊಂಡು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.

‘ನಮ್ಮ ಕುಟುಂಬದ ಎಲ್ಲರನ್ನೂ ಮುಗಿಸುತ್ತೇನೆ ಎಂದು ಕುಲದೀಪ್ ಸೆಂಗರ್ ಬೆದರಿಕೆ ಹಾಕಿದ್ದ. ಅದೇ ರೀತಿ ಎಲ್ಲರನ್ನೂ ಕೊಲ್ಲುತ್ತಾ ಬಂದಿದ್ದಾನೆ. ಈ ಜೈಲಿನಲ್ಲಿ ಇದ್ದರೆ, ನನ್ನನ್ನೂ ಕೊಲ್ಲಿಸುತ್ತಾನೆ. ಹೀಗಾಗಿ ನನ್ನನ್ನು ದೆಹಲಿಯ ಜೈಲಿಗೆ ವರ್ಗಾಯಿಸಿ’ ಎಂದು ಮಹೇಶ್ ಸಿಂಗ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ, ನಮಗೂ ಅದೇ ಗತಿಯೇ: ವಿದ್ಯಾರ್ಥಿನಿ ಪ್ರಶ್ನೆ

ಸಂತ್ರಸ್ತೆಯ ಪರಿಚಿತ ಯೂನಸ್ ಖಾನ್ ಸಹ ತಮ್ಮ ಗ್ರಾಮದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಅವರು ಅತ್ಯಾಚಾರ ಪ್ರಕರಣದ ಸಾಕ್ಷಿಯಾಗಿದ್ದರು. ಆದರೆ ಯೂನಸ್ ಅವರ ಸಾವನ್ನು ಅವರ ಕುಟುಂಬದವರು ಸಿಬಿಐನ ಗಮನಕ್ಕೆ ತಂದಿರಲಿಲ್ಲ. ಈಗ ಸಿಬಿಐ ಈ ಸಾವಿನ ಬಗೆಗೂ ತನಿಖೆ ಆರಂಭಿಸಿದೆ. ಸಂತ್ರಸ್ತೆ ಮತ್ತು ಆರೋಪಿ ಕುಲದೀಪ್ ಸೆಂಗರ್‌ನ ಕುಟುಂಬಗಳ ಮಧ್ಯೆ ಈ ಹಿಂದೆ ಉತ್ತಮ ಸಂಬಂಧವಿತ್ತು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕುಲದೀಪ್ ಸೆಂಗರ್‌ನ ತಾಯಿಯ ವಿರುದ್ಧ ಸಂತ್ರಸ್ತೆಯ ಚಿಕ್ಕಪ್ಪ ಸ್ಪರ್ಧೆಗೆ ಇಳಿದಿದ್ದರು. ಆನಂತರ ಎರಡೂ ಕುಟುಂಬಗಳ ಮಧ್ಯೆ ಸಂಬಂಧ ಬಿಗಡಾಯಿಸಿತ್ತು.

Post Comments (+)