ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಸಂತ್ರಸ್ತೆ ಕಾರಿಗೆ ಲಾರಿ ಡಿಕ್ಕಿ: ಅಪಘಾತವಲ್ಲ, ಕೊಲೆ ಪ್ರಕರಣ ದಾಖಲು

Last Updated 31 ಜುಲೈ 2019, 19:58 IST
ಅಕ್ಷರ ಗಾತ್ರ

ನವದೆಹಲಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಸದಸ್ಯರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ ಕೊಲೆ ಪ್ರಕರಣ ದಾಖಲಿಸಿಕೊಂಡಿದೆ. ಅತ್ಯಾಚಾರ ಆರೋಪಿ ಮತ್ತು ಬಿಜೆಪಿ ಶಾಸಕ ಕುಲದೀಪ್ ಸೆಂಗರ್‌ ಮತ್ತು ಇನ್ನೂ 10 ಜನರನ್ನು ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ.

11 ಆರೋಪಿಗಳಲ್ಲಿ ಬಿಜೆಪಿಯ ಮತ್ತೊಬ ಸ್ಥಳೀಯ ಮತ್ತು ಪ್ರಬಲ ನಾಯಕನ ಹೆಸರೂ ಇದೆ. ಉನ್ನಾವ್ ಬಿಜೆಪಿ ಘಟಕದ ಅಧ್ಯಕ್ಷ ಅರುಣ್ ಸಿಂಗ್ ಅವರನ್ನು ಕೊಲೆ ಪ್ರಕರಣದಲ್ಲಿ ಏಳನೇ ಆರೋಪಿಯನ್ನಾಗಿ ಮಾಡಲಾಗಿದೆ.

ಕೊಲೆ ಪ್ರಕರಣ ದಾಖಲಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಿಬಿಐ ಅಧಿಕಾರಿಗಳು ಅಪಘಾತ ನಡೆದಿದ್ದ ಗುರುಬಕ್ಷ್‌ಗಂಜ್‌ಗೆ ತೆರಳಿ ಮಹಜರು ನಡೆಸಿದ್ದಾರೆ ಮತ್ತು ಮತ್ತಷ್ಟು ವಿವರಗಳನ್ನು ಕಲೆ ಹಾಕಿದ್ದಾರೆ. ಅತ್ಯಾಚಾರ ಸಂತ್ರಸ್ತೆಯ ಚಿಕ್ಕಪ್ಪ ಮಹೇಶ್ ಸಿಂಗ್ ಅವರು ನೀಡಿರುವ ದೂರಿನ ಅನ್ವಯ ಈ ಪ್ರಕರಣ ದಾಖಲಾಗಿದೆ.

2017ರಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿತ್ತು. ಆಗ ಆಕೆ ಇನ್ನೂ ಬಾಲಕಿ. ಆದರೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಸಂತ್ರಸ್ತೆಯ ತಂದೆಯ ಮೇಲೆ ಆರೋಪಿ ಕುಲದೀಪ್ ಸೆಂಗರ್‌ನ ಸೋದರ ಹಲ್ಲೆ ನಡೆಸಿದ್ದ. ಇದನ್ನು ಪ್ರತಿಭಟಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮನೆ ಎದುರು ಸಂತ್ರಸ್ತೆ ಮತ್ತು ಆಕೆಯ ತಾಯಿ ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದರು. ಆನಂತರವೇ ಪ್ರಕರಣ ದಾಖಲಾಗಿತ್ತು.

ಅದರ ಮರುದಿನವೇ ಸಂತ್ರಸ್ತೆಯ ತಂದೆ ಪೊಲೀಸ್ ಬಂಧನದಲ್ಲಿ ಇದ್ದಾಗಲೇ ಮೃತಪಟ್ಟಿದ್ದರು. ನಂತರ ಪ್ರಕರಣ ಹೆಚ್ಚು ಪ್ರಚಲಿತಕ್ಕೆ ಬಂತು. ಒತ್ತಡದ ಕಾರಣ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಕುಲದೀಪ್ ಸೆಂಗರ್‌ನನ್ನು ಈ ಪ್ರಕರಣದಲ್ಲಿ ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಇದಾದ ನಂತರ ಸಂತ್ರಸ್ತೆಯ ಚಿಕ್ಕಪ್ಪ ಮಹೇಶ್ ಸಿಂಗ್ ಅವರನ್ನು ಹಳೆ ಪ್ರಕರಣವೊಂದರಲ್ಲಿ ಜೈಲಿಗೆ ಕಳುಹಿಸಲಾಗಿತ್ತು. ಈಗ ಪೆರೋಲ್ ಮೇಲೆ ಹೊರಬಂದಿರುವ ಮಹೇಶ್ ಸಿಂಗ್ ಈ ದೂರು ನೀಡಿದ್ದಾರೆ.

ಲಾರಿಯ ನಂಬರ್ ಅಳಿಸಲಾಗಿತ್ತು...
ರಾಯ್‌ಬರೇಲಿ ಜೈಲಿನಲ್ಲಿದ್ದ ತಮ್ಮ ಚಿಕ್ಕಪ್ಪ ಮಹೇಶ್ ಸಿಂಗ್ ಅವರನ್ನು ನೋಡಲು ಅತ್ಯಾಚಾರ ಸಂತ್ರಸ್ತೆ ಮತ್ತು ಕುಟುಂಬದವರು ಹೋಗುತ್ತಿದ್ದಾಗ ರಾಯ್‌ಬರೇಲಿಯ ಹೊರವಲಯದಗುರುಬಕ್ಷ್‌ಗಂಜ್‌ ಬಳಿ ಅಪಘಾತ ನಡೆದಿತ್ತು.

ಕಾರಿನಲ್ಲಿ ಸಂತ್ರಸ್ತೆ, ಆಕೆಯ ಇಬ್ಬರು ಚಿಕ್ಕಮ್ಮಂದಿರು ಮತ್ತು ವಕೀಲ ಪ್ರಯಾಣಿಸುತ್ತಿದ್ದರು. ಎರಡು ಪಥಗಳ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ, ಇವರ ಕಾರಿಗೆ ಅಪ್ಪಳಿಸಿತ್ತು. ಕಾರು ಸರಿಯಾದ ಪಥದಲ್ಲೇ ಚಲಿಸುತ್ತಿತ್ತು. ಆದರೆ ಲಾರಿ ಬಲಪಥದಲ್ಲಿ (ಎಡಪಥದಲ್ಲಿ ಚಲಿಸಬೇಕಿತ್ತು) ಬಂದು ಕಾರಿಗೆ ಅಪ್ಪಳಿಸಿದೆ ಎಂದು ಸಿಬಿಐ ಅಧಿಕಾರಿಗಳು ವಿವರಿಸಿದ್ದಾರೆ.

ಅಪಘಾತದಲ್ಲಿ ಸಂತ್ರಸ್ತೆ ಮತ್ತು ವಕೀಲ ತೀವ್ರವಾಗಿ ಗಾಯಗೊಂಡಿದ್ದು, ಈಗಲೂ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಅಪಘಾತದಲ್ಲಿ ಸಂತ್ರಸ್ತೆಯ ಇಬ್ಬರು ಚಿಕ್ಕಮ್ಮಂದಿರೂ ಮೃತಪಟ್ಟಿದ್ದಾರೆ. ಅವರಲ್ಲಿ ಮಹೇಶ್ ಸಿಂಗ್ ಅವರ ಪತ್ನಿಯ ಅಂತ್ಯಕ್ರಿಯೆ ಬುಧವಾರ ನಡೆದಿದೆ.

ಕಾರಿಗೆ ಡಿಕ್ಕಿ ಹೊಡೆದಿರುವ ಲಾರಿಯ ನೋಂದಣಿ ಫಲಕಕ್ಕೆಅಪಘಾತಕ್ಕೂ ಮುನ್ನವೇ ಕಪ್ಪು ಬಣ್ಣ ಬಳಿಯಲಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಲಾರಿಯ ಮಾಲೀಕ, ರಾಜ್ಯ ಸರ್ಕಾರದ ಸಚಿವರೊಬ್ಬರ ಸಂಬಂಧಿ ಎಂದು ಸಿಬಿಐ ಮೂಲಗಳು ಮಾಹಿತಿ ನೀಡಿವೆ.

ಮುಖ್ಯನ್ಯಾಯಮೂರ್ತಿಗೆತಲುಪದ ಪತ್ರ

‘ಅತ್ಯಾಚಾರದ ದೂರನ್ನು ವಾಪಸ್ ಪಡೆಯುವಂತೆ ಕುಲದೀಪ್‌ ಸೆಂಗರ್‌ನ ಸೋದರ ಮತ್ತು ಸಹಚರರು ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಜೀವಕ್ಕೆ ಅಪಾಯವಿದೆ. ಪ್ರಕರಣದ ವಿಚಾರಣೆಯನ್ನು ಬೇರೆ ರಾಜ್ಯದ ನ್ಯಾಯಾಲಯಕ್ಕೆ ವರ್ಗಾಯಿಸಿ’ ಎಂದು ಅತ್ಯಾಚಾರ ಸಂತ್ರಸ್ತೆಯು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಜುಲೈ ಎರಡನೇ ವಾರದಲ್ಲೇ ಪತ್ರ ಬರೆದಿದ್ದಾರೆ.

ಆದರೆ ಮಂಗಳವಾರದವರೆಗೆ ಅದು ಗೊಗೊಯಿ ಅವರನ್ನು ತಲುಪಿರಲಿಲ್ಲ. ಸಂತ್ರಸ್ತೆಯ ಚಿಕ್ಕಪ್ಪಪತ್ರದ ವಿಚಾರವನ್ನು ಬಹಿರಂಗಪಡಿಸಿದಾಗಲಷ್ಟೇ ಅದು ಮುಖ್ಯನ್ಯಾಯಮೂರ್ತಿಯವರ ಗಮನಕ್ಕೆ ಬಂದಿದ್ದು.

‘ಮುಖ್ಯನ್ಯಾಯಮೂರ್ತಿ ಏನನ್ನೂ ಮಾಡದೆ ಕುಳಿತಿದ್ದಾರೆ ಎಂದು ಪತ್ರಿಕೆಗಳು ಬರೆಯುತ್ತಿವೆ’ ಎಂದುಗೊಗೊಯಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ವಿವರಣೆ ನೀಡುವಂತೆ ನ್ಯಾಯಾಲಯದ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT