ಭಾನುವಾರ, ಏಪ್ರಿಲ್ 5, 2020
19 °C

ಅಮೆರಿಕ ಎಂದೆಂದಿಗೂ ಭಾರತದ ವಿಶ್ವಾಸಿ ಸ್ನೇಹಿತ: ಡೊನಾಲ್ಡ್ ಟ್ರಂಪ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Donald Trump

ಅಹಮದಾಬಾದ್: ‘ಅಮೆರಿಕ ಭಾರತವನ್ನು ಗೌರವಿಸುತ್ತದೆ, ಪ್ರೀತಿಸುತ್ತದೆ ಹಾಗೂ ಎಂದೆಂದಿಗೂ ಭಾರತದ ವಿಶ್ವಾಸಿ ಸ್ನೇಹಿತನಾಗಿರುತ್ತದೆ’ ಎಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಎರಡು ದಿನಗಳ ಭಾರತ ಭೇಟಿಯಲ್ಲಿರುವ ಅವರು ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ: 

ಹಿಂದೂಗಳು, ಮುಸ್ಲಿಮರು, ಸಿಖ್ಖರು, ಜೈನರು ಮತ್ತು ಮುಸ್ಲಿಮರು ಅಕ್ಕಪಕ್ಕದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿರುವ ಅಪರೂಪದ ದೇಶ ಭಾರತ. ಒಂದು ದೊಡ್ಡ ದೇಶವಾಗಿ ನೀವು ಒಂದಾಗಿ ನಿಂತಿದ್ದೀರಿ. ಅಮೆರಿಕದಲ್ಲಿರುವ ಭಾರತೀಯರು ನಮಗೆ ಉತ್ತಮ ಸ್ನೇಹಿತರು, ನೆರೆಯವರು ಆಗಿದ್ದಾರೆ. ನಮ್ಮ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಅದಕ್ಕಾಗಿ ಅಮೆರಿಕದ ಎಲ್ಲ ಜನರೂ ನಿಮಗೆ ಧನ್ಯವಾದ ಹೇಳುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.

‘ನಮ್ಮದು ಜಗತ್ತಿನ ಬಲಿಷ್ಠ ಸೇನೆ’: ಅಮೆರಿಕದಲ್ಲಿ ಈಗ ಖುಷಿಯ ಸಮಯ ಆರಂಭವಾಗಿದೆ. ನಿರುದ್ಯೋಗದ ಪ್ರಮಾಣ ಇತಿಹಾಸದಲ್ಲಿಯೇ ಅತ್ಯಂತ ಕನಿಷ್ಠಮಟ್ಟಕ್ಕೆ ಮುಟ್ಟಿದೆ. ಸೇನೆ ಸಂಪೂರ್ಣವಾಗಿ ಹೊಸತನ ಮೈಗೂಡಿಸಿಕೊಂಡಿದೆ. ನಮ್ಮದು ಜಗತ್ತಿನ ಅತ್ಯಂತ ಶಕ್ತ ಸೇನೆ. ಅದಕ್ಕಾಗಿಯೇ ನಾವು ಇಲ್ಲಿಗೆ ಬಂದು ನಮ್ಮ ಉತ್ತಮ ಸಂಸ್ಕೃತಿಯನ್ನು ಬೆಳಗಲು ಯತ್ನಿಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಡಿಡಿಎಲ್‌ಜೆ ಚಿತ್ರ ಸ್ಮರಿಸಿದ ಅಮೆರಿಕದ ಎರಡನೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಒದಗಿಸಲು ನಾವು ಬದ್ಧರಾಗಿದ್ದೇವೆ. ಇಸ್ಲಾಮಿಕ್ ಉಗ್ರರ ಸವಾಲುಗಳಿಗೆ ನಾವು ಜತೆಗೂಡಿ ಉತ್ತರ ಕಂಡುಕೊಂಡೆವು ಎಂದೂ ಅವರು ಹೇಳಿದ್ದಾರೆ.

‘3 ಶತಕೋಟಿ ಡಾಲರ್ ರಕ್ಷಣಾ ಒಪ್ಪಂದ’: ಜಗತ್ತಿನ ಅತ್ಯುತ್ತಮ ಸೇನಾ ಉಪಕರಣಗಳನ್ನು ನಾವು ತಯಾರಿಸುತ್ತೇವೆ. ನಾಳೆ 3 ಶತಕೋಟಿ ಡಾಲರ್‌ ಮೊತ್ತದ ರಕ್ಷಣಾ ಉಪಕರಣಗಳನ್ನು ಭಾರತಕ್ಕೆ ಮಾರುತ್ತಿದ್ದೇವೆ. ಅತ್ಯುತ್ತಮ ಹೆಲಿಕಾಪ್ಟರ್‌ಗಳು ಮತ್ತು ಇತರ ಉಪಕರಣಗಳು ಇದರಲ್ಲಿ ಸೇರಿವೆ ಎಂದು ಅವರು ತಿಳಿಸಿದ್ದಾರೆ.

‘ಮೋದಿ ಹತ್ರ ಚೌಕಾಸಿ ಕಷ್ಟ’: ಭಾರತದೊಂದಿಗೆ ಅಮೆರಿಕ ಅದ್ಭುತ ಒಪ್ಪಂದವೊಂದಕ್ಕೆ ಸಹಿ ಹಾಕಲಿದೆ ಎಂದು ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. ಒಪ್ಪಂದದ ಬಗ್ಗೆ ಮಾತನಾಡುವ ಸಂದರ್ಭ, ‘ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಚೌಕಾಸಿ ಮಾಡೋದು ತುಂಬಾ ಕಷ್ಟ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಗುಜರಾತ್‌ನ ಹೆಮ್ಮೆಯಲ್ಲ. ಪರಿಶ್ರಮ ಮತ್ತು ಬದ್ಧತೆಗೆ ಪ್ರತೀಕ. ಭಾರತೀಯರು ತಾವು ಅಂದುಕೊಂಡದ್ದನ್ನು ಸಾಧಿಸಬಲ್ಲರು. ಭಾರತವನ್ನು ಮೋದಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಬಣ್ಣಿಸಿದ್ದಾರೆ.

ನಾವು ಈ ಸಂದರ್ಭವನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುತ್ತೇವೆ. ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಇಂದು ಪ್ರಧಾನಿಯಾಗಿದ್ದಾರೆ. ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಎಲ್ಲರೂ ನಮ್ಮನ್ನು ಪ್ರೀತಿಸುವಂತೆ ಬಾಳುವುದು ತುಂಬಾ ಕಷ್ಟ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಡಿಡಿಎಲ್‌ಜೆ ಎಲ್ಲರಿಗೂ ಇಷ್ಟ’: ಡಿಡಿಎಲ್‌ಜೆ ಮತ್ತು ಶೋಲೆಯಂಥ ಬಾಲಿವುಡ್ ಚಿತ್ರಗಳು, ಭಾಂಗ್ರಾ ನೃತ್ಯವನ್ನು ಜಗತ್ತಿನೆಲ್ಲೆಡೆ ಜನರು ಇಷ್ಟಪಡುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.

ಕೊನೆಯಲ್ಲಿ ದೇವರ ಸ್ಮರಣೆ: ಡೊನಾಲ್ಡ್‌ ಟ್ರಂಪ್ ದೇವರ ಸ್ಮರಣೆಯೊಂದಿಗೆ ಭಾಷಣ ಮುಕ್ತಾಯಗೊಳಿಸಿದರು. ‘ಭಾರತ ಮತ್ತು ಅಮೆರಿಕಕ್ಕೆ ದೇವರ ಆಶೀರ್ವಾದ ಸಿಗಲಿ’ (ಗಾಡ್‌ ಬ್ಲೆಸ್ ಇಂಡಿಯಾ, ಗಾಡ್‌ ಬ್ಲೆಸ್ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕ) ಎಂಬುದು ಟ್ರಂಪ್ ಭಾಷಣದ ಕೊನೆಯ ನುಡಿಗಳಾಗಿವೆ.

ಭಾರತ–ಅಮೆರಿಕ ಗೆಳೆತನ ಚಿರಾಯುವಾಗಲಿ: ಮೋದಿ

ಟ್ರಂಪ್ ಭಾಷಣದ ನಂತರ ಮತ್ತೊಮ್ಮೆ ಮಾತನಾಡಿದ ನರೇಂದ್ರ ಮೋದಿ ‘ಭಾರತ–ಅಮೆರಿಕ ಗೆಳೆತನ ಚಿರಾಯುವಾಗಲಿ’ ಎಂದು ಘೋಷಿಸಿದ್ದಾರೆ.

ಜಗತ್ತಿನ ಅತಿದೊಡ್ಡ ಕ್ರೀಡಾಂಗಣದಿಂದ ನೀವು ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದೀರಿ. ನಾವು ಹೊಸ ಭಾರತವನ್ನು ಕಟ್ಟುತ್ತಿದ್ದೇವೆ. ನಾವು ಕೇವಲ ಜಗತ್ತಿನ ದೊಡ್ಡ ಕ್ರೀಡಾಂಗಣವೊಂದೇ ಅಲ್ಲ, ಅತಿದೊಡ್ಡ ಆರೋಗ್ಯ ಸೇವೆ ವ್ಯವಸ್ಥೆಯನ್ನೂ ರೂಪಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು