ಮಂಗಳವಾರ, ಸೆಪ್ಟೆಂಬರ್ 21, 2021
25 °C

ಚಿತ್ರಹಿಂಸೆ ಆರೋಪದ ಬಳಿಕ ಪತ್ನಿಯಿಂದ ವಿಚ್ಛೇದನ ಕೋರಿದ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ’ಪತಿ ‘ಚಿತ್ರಹಿಸೆ‘ ಮತ್ತು ’ಕಿರುಕುಳ‘ ನೀಡುತ್ತಿದ್ದಾರೆ‘ ಎಂದು ಉತ್ತರ ಪ್ರದೇಶದ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ತನ್ನ ಪತಿ ಬಾಬುರಾಮ್‌ ನಿಷಾದ್‌ ವಿರುದ್ಧ ಪತ್ನಿ ಆರೋಪ ಮಾಡಿದ್ದು, ಈಗ ಆ ಸಚಿವ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

ಬಾಬುರಾಮ್‌ ನಿಷಾದ್‌ ಅವರು ಉತ್ತರ ಪ್ರದೇಶದ ಹಿಂದುಳಿದ ವರ್ಗದ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು, ರಾಜ್ಯ ಸಚಿವ ಸ್ಥಾನಮಾನ ಹೊಂದಿದ್ದಾರೆ. ಅವರು, ಹಮೀದ್‌ಪುರ ಜಿಲ್ಲೆಯ ನ್ಯಾಯಾಲಯಕ್ಕೆ ಬುಧವಾರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ನನ್ನ ಪತಿಯಿಂದಲೇ ನನಗೆ ಜೀವ ಬೆದರಿಕೆ ಇದೆ, ನನ್ನನ್ನು ರಕ್ಷಿಸಿ ಎಂದು ಸಚಿವರ ಪತ್ನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 

ನನ್ನ ಪತಿ ನನ್ನನ್ನು ಹೊಡೆದಿದ್ದಾರೆ ಮತ್ತು ಕೊಲ್ಲುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ. ಜತೆಗೆ, ಗುಂಡು ಹಾರಿಸುವುದಾಗಿಯೂ ಹೇಳಿದ್ದಾರೆ. ಮದುವೆಯಾಗಿ 14 ವರ್ಷ ಕಳೆದಿವೆ. ಮದುವೆ ಆದ ದಿನದಿಂದಲೂ ’ಚಿತ್ರಹಿಂಸೆ‘ ನೀಡುತ್ತಲೇ ಬಂದಿದ್ದಾರೆ ಎಂದು ಪತ್ನಿಯು ಪತಿಯ ವಿರುದ್ಧ ದೂರಿದ್ದಾರೆ.

‘ಅವನು(ನಿಷಾದ್) ಗನ್ ಪಾಯಿಂಟ್‌ನಲ್ಲಿ ನನ್ನನ್ನು ಬೆದರಿಸುತ್ತಿದ್ದನು... ನನ್ನ ಮೇಲೆ ಮೂತ್ರ ವಿಸರ್ಜಿಸಿ ಕೆಟ್ಟದಾಗಿ ಥಳಿಸುತ್ತಿದ್ದ.... ಅವನು ನನ್ನ ಹೆತ್ತವರು ಮತ್ತು ಸಹೋದರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ...‘ ಎಂದು ತಾವು ಬರೆದ ಪತ್ರದಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ಕೆಲ ತಿಂಗಳ ಹಿಂದೆ ನಾನು ರಾಜ್ಯ ರಾಜಧಾನಿಯ ಕೈಸರ್ಬಾಗ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿರುವ ಪತ್ನಿ, ಪೊಲೀಸರು ಸಚಿವರೊಟ್ಟಿಗೆ ಉತ್ತಮ ಒಡನಾಟ ಹೊಂದಿದ್ದು, ನಿಷಾದ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ನನ್ನ ದೂರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದು, ತನ್ನ ಪರಿಸ್ಥಿತಿಯ ಕುರಿತು ಫೇಸ್‌ಬುಕ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಬರೆದುಕೊಂಡಿದ್ದಾರೆ.

ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ನನ್ನ ಮೇಲೆ ಮಾಡಿರುವ ಆರೋಪಗಳಿಗೆ ನಾನು ನ್ಯಾಯಾಲಯದಲ್ಲೇ ಉತ್ತರ ನೀಡುವೆ ಎಂದು ಆ ಮಹಿಳೆ ಹೇಳಿದ್ದಾರೆ.

ಪತ್ನಿ ಮಾಡಿರುವ ಆರೋಪಗಳನ್ನು ತಳ್ಳಿಹಾಕಿರುವ ಸಚಿವ ನಿಷಾದ್‌, ’ಪತ್ನಿ ತಮ್ಮೊಂದಿಗೆ ಯಾವಾಗಲು ಜಗಳವಾಡುತ್ತಿದ್ದರು ಮತ್ತು ಅವರು(ಪತ್ನಿ) ಯಾವಾಗಲೂ ಹಣವನ್ನು ಬಯಸುತ್ತಾರೆ.... ಮತ್ತು ಅವರು ಬಹಳಷ್ಟು ಖರ್ಚು ಮಾಡುತ್ತಾರೆ‘ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು