ಬುಧವಾರ, ಆಗಸ್ಟ್ 21, 2019
28 °C

ಸೇನೆಯ ಅತ್ಯುನ್ನತ ಗೌರವಕ್ಕೆ ಪಾತ್ರರಾಗಲಿದ್ದಾರೆ ಅಭಿನಂದನ್, ಬಾಲಕೋಟ್ ಪೈಲಟ್‌ಗಳು

Published:
Updated:

ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಸೇನಾಪಡೆಯ ಅತ್ಯುನ್ನತ ಗೌರವ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ವರ್ಧಮಾನ್ ಅವರಿಗೆ ವೀರ್ ಚಕ್ರ ನೀಡಿ ಗೌರವಿಸುವ ಸಾಧ್ಯತೆ ಇದೆ. ಅದೇ ವೇಳೆ ಬಾಲಾಕೋಟ್‌ನಲ್ಲಿ  ಜೈಷ್- ಎ- ಮೊಹಮ್ಮದ್ ಉಗ್ರ  ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಮಿರಾಜ್ -2000 ಫೈಟರ್ ವಿಮಾನದ 5 ಪೈಲಟ್‌ಗಳಿಗೂ  ವಾಯುಸೇನೆಯ ಪದಕ ನೀಡಿ ಗೌರವಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಫೆಬ್ರುವರಿ 27ರಂದು ಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಪಾಕ್ ವಾಯುಪಡೆಯ ಯುದ್ಧವಿಮಾನಗಳೊಡನೆ ನಡೆದಿದ್ದ ಹೋರಾಟದಲ್ಲಿ ಅಭಿನಂದನ್ ತಮ್ಮ ಮಿಗ್–21 ಯುದ್ಧವಿಮಾನದಿಂದ ಪಾಕಿಸ್ತಾನದ ಎಫ್–16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಮಿಗ್–21 ಯುದ್ಧವಿಮಾನದಿಂದ ಪಾಕಿಸ್ತಾನದ ಎಫ್–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಘಟನೆ ಇದೇ ಮೊದಲು ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. 

ಪಾಕ್ ಯುದ್ದ ವಿಮಾನವನ್ನು ಹೊಡೆದುರುಳಿಸಿದ್ದ ನಂತರ ಶತ್ರುದೇಶದ ಕ್ಷಿಪಣಿಯೊಂದು ತಾಗಿ ಅಭಿನಂದನ್ ಅವರಿದ್ದ ಮಿಗ್ ವಿಮಾನ ಪತನಗೊಂಡಿತ್ತು. ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಹೊರಜಿಗಿದ ಅಭಿನಂದನ್ ನೆಲ ಮುಟ್ಟಿದ ಸ್ಥಳ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೇರಿತ್ತು.  ಸ್ಥಳೀಯರಿಂದ ತಪ್ಪಿಸಿಕೊಳ್ಳುವ ಯತ್ನ ವಿಫಲವಾದಾಗ ತಮ್ಮ ಬಳಿ ಇದ್ದ ದಾಖಲೆಗಳನ್ನು ಅಭಿನಂದನ್ ನಾಶಪಡಿಸಿದ್ದರು. ಸ್ಥಳೀಯರಿಂದ ಹಲ್ಲೆಗೊಳಗಾದ ಅಭಿನಂದನ್ ಅವರನ್ನು ನಂತರ ಪಾಕ್ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿತ್ತು.  ಜಿನಿವಾ ಒಪ್ಪಂದಕ್ಕೆ ಬದ್ಧವಾಗಿರಬೇಕಾದ ಅನಿವಾರ್ಯತೆ ಮತ್ತು ಅಂತರರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಸಂಸತ್ತಿನಲ್ಲಿ ‘ಅಭಿನಂದನ್ ಅವರನ್ನು ಶಾಂತಿಯ ಸಂಕೇತವಾಗಿ ಬಿಡುಗಡೆ ಮಾಡಲಾಗುವುದು’ ಎಂದು ಘೋಷಿಸಿದ್ದರು.

ಇದನ್ನೂ ಓದಿ:  
ತಾಯ್ನೆಲದಲ್ಲಿ ವಿಂಗ್ ಕಮಾಂಡರ್ ಅಭಿನಂದನ್: ಭಾವುಕ ಕ್ಷಣ, ಎಲ್ಲೆಲ್ಲೂ ಸಂಭ್ರಮ
‘ನಮ್ಮ ಗುರಿ ತಪ್ಪಿಲ್ಲ’: ಬಾಲಾಕೋಟ್‌ ದಾಳಿಯ ವಾಯುಪಡೆ ಪೈಲಟ್‌ಗಳ ಹೇಳಿಕೆ

Post Comments (+)