ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಧರ್ಮೀಯ ವಿವಾಹಕ್ಕೆ ವಿರೋಧವಿಲ್ಲ: ವಿಶ್ವ ಹಿಂದೂ ಪರಿಷತ್‌

ಮತಾಂತರ ಉದ್ದೇಶದ ‘ಲವ್‌ ಜಿಹಾದ್‌’ಗೆ ಆಕ್ಷೇಪವಿದೆ
Last Updated 1 ಜುಲೈ 2019, 1:01 IST
ಅಕ್ಷರ ಗಾತ್ರ

ಜಮ್ಮು: ‘ವಿಶ್ವಹಿಂದೂ ಪರಿಷತ್‌ ‘ಲವ್‌ ಜಿಹಾದ್‌’ ಅನ್ನು ವಿರೋಧಿಸುತ್ತದೆಯೇ ವಿನಾ ಅಂತರ ಧರ್ಮೀಯ ವಿವಾಹವನ್ನಲ್ಲ’ ಎಂದು ವಿಶ್ವಹಿಂದೂ ಪರಿಷತ್ತಿನ (ವಿಎಚ್‌ಪಿ) ರಾಷ್ಟ್ರೀಯ ವಕ್ತಾರ ಬನ್ಸಲ್‌ ಭಾನುವಾರ ಹೇಳಿದ್ದಾರೆ.

ವಿಶ್ವಹಿಂದೂ ಪರಿಷತ್ತಿನ ಕೇಂದ್ರೀಯ ಆಡಳಿತ ಸಮಿತಿಯ ಎರಡು ದಿನಗಳ ಸಮ್ಮೇಳನ ಸಮಾರೋಪದ ಬಳಿಕ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಅವರು, ‘ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೊಕಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡು ದಿನಗಳ ಸಮ್ಮೇಳನದಲ್ಲಿ ‘ಲವ್‌ ಜಿಹಾದ್‌’ ವಿಚಾರವಾಗಿ ಚರ್ಚೆ ನಡೆದಿದೆ. ಮುಸ್ಲಿಂ ಯುವಕನು ಹಿಂದೂ ಯುವತಿಯನ್ನು ವಿವಾಹವಾಗಿ, ಆಕೆಯನ್ನು ಮತಾಂತರ ಮಾಡುವ ‘ಲವ್‌ ಜಿಹಾದ್‌’ ಎಂಬ ಸಂಚಿಗೆ ನಮ್ಮ ವಿರೋಧವಿದೆ. ಸಮ್ಮೇಳನದಲ್ಲಿ 225 ಮಂದಿ ಹಿರಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು’ ಎಂದು ತಿಳಿಸಿದರು.

‘ಬೇರೆ ಬೇರೆ ಧರ್ಮಗಳಿಗೆ ಸೇರಿದ ಯುವಕ–ಯುವತಿ ವಿವಾಹವಾಗುವುದನ್ನು ನಾವು ಎಂದೂ ವಿರೋಧಿಸಿಲ್ಲ. ವಿವಾಹದ ಹಿಂದೆ ಕೆಟ್ಟ ಉದ್ದೇಶ ಇಲ್ಲದಿದ್ದರೆ ಅಂಥ ವಿವಾಹಕ್ಕೆ ನಮ್ಮ ವಿರೋಧ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಗೋಹತ್ಯೆಗೆ ಕಠಿಣ ಶಿಕ್ಷೆ:‘ಗೋಹತ್ಯೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಹಿಂದೂಗಳು ಪೂಜಿಸುವ ಪ್ರಾಣಿಗಳ ರಕ್ಷಣೆಗಾಗಿ ಪ್ರತ್ಯೇಕ
ಸಚಿವಾಲಯ ಆರಂಭಿಸಬೇಕು ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಬೇಕು ಎಂದು ಸಮ್ಮೇಳನದಲ್ಲಿ ಒತ್ತಾಯಿಸಲಾಗಿದೆ’ ಎಂದು ಬನ್ಸಲ್‌ ತಿಳಿಸಿದರು.

‘ಗೋವಿನ ಜೊತೆಗೆ ಹಿಂದೂಗಳಿಗೆ ಭಾವನಾತ್ಮಕ ಸಂಬಂಧವಿದೆ. ಅನ್ಯ ಧರ್ಮೀಯರು ನಮ್ಮ ಭಾವನೆಗಳನ್ನು ಗೌರವಿಸಬೇಕು. ಗೋವುಗಳು ಎಲ್ಲರಿಗೂ ಲಾಭದಾಯಕವಾಗಿರುತ್ತವೆ ಎಂಬ ಕಾರಣಕ್ಕಾದರೂ ಅವುಗಳ ಹತ್ಯೆಯನ್ನು ನಿಲ್ಲಿಸಬೇಕು’ ಎಂದರು.

ಗೋಹತ್ಯೆ ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾವು ಬಯಸುತ್ತೇವೆ. ದೇಶದಲ್ಲಿ ನಡೆದ ಗುಂಪು ಹಲ್ಲೆಯ ಪ್ರಕರಣಗಳನ್ನು ಉತ್ಪ್ರೇಕ್ಷೆ ಮಾಡಿ ಪ್ರಚಾರ ಮಾಡಲಾಗುತ್ತಿದೆ. ಬೇರೆ ಕಾರಣಕ್ಕೆ ನಡೆದ ಪ್ರಕರಣಗಳನ್ನೂ ಗೋರಕ್ಷಣೆಗಾಗಿ ನಡೆದ ಹತ್ಯೆ ಪ್ರಕರಣಗಳೆಂದು ಬಿಂಬಿಸಲಾಗುತ್ತಿದೆ. ಗೋವುಗಳ ರಕ್ಷಣೆಗೆ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಹತಾಶರಾದ ಕೆಲವರು ಬೀದಿಗಿಳಿದು ಹಲ್ಲೆ ನಡೆಸುತ್ತಾರೆ. ಇದನ್ನೂ ಸೇರಿದಂತೆ ಎಲ್ಲಾ ರೀತಿಯ ಹಿಂಸೆಯನ್ನು ನಾವು ವಿರೋಧಿಸುತ್ತೇವೆ. ಗೋವುಗಳನ್ನು ರಕ್ಷಿಸಲು ಮುಂದಾಗುವವರು ಮನುಷ್ಯರ ಹತ್ಯೆ ಮಾಡುವುದನ್ನು ಊಹಿಸಲೂ ಆಗದು. ಆದರೆ, ಗೋರಕ್ಷಕರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನೂ ಖಂಡಿಸಬೇಕು ಎಂದರು.

ಜಾರ್ಖಂಡ್‌ನಲ್ಲಿ ಈಚೆಗೆ ನಡೆದ ಗುಂಪುಹಲ್ಲೆಯಲ್ಲಿ ತಬ್ರೇಜ್‌ ಅನ್ಸಾರಿ ಎಂಬ ಯುವಕ ಸಾವನ್ನಪ್ಪಿರುವ ವಿಚಾರವನ್ನು ಪ್ರಸ್ತಾಪಿಸುತ್ತಾ, ‘ಈ ಸಾವು ಶಂಕಾಸ್ಪದವಾಗಿದೆ. ಆಪರಾಧ ಪಕ್ರಕರಣವೊಂದನ್ನು ಆ ದೃಷ್ಟಿಯಿಂದ ಮಾತ್ರ ನೋಡಬೇಕು’ ಎಂದರು.

ದಕ್ಷಿಣ ಭಾರತದ ಕೆಲವು ದೇವಸ್ಥಾನಗಳ ಆಡಳಿತ ಮಂಡಳಿಗೆ ಕ್ರೈಸ್ತ ಧರ್ಮೀಯರನ್ನು ನೇಮಕ ಮಾಡುವ ಮತ್ತು ದೇವಸ್ಥಾನದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿರುವ ವಿಚಾರವನ್ನೂ ಸಮ್ಮೇಳನದಲ್ಲಿ ಚರ್ಚಿಸಲಾಗಿದೆ. ದೇವಸ್ಥಾನಗಳ ಹಣವನ್ನು ಹಿಂದೂಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಅವರು ಒತ್ತಾಯಿಸಿದರು.

ಗುರು ನಾನಕರ 550ನೇ ಜಯಂತ್ಯುತ್ಸವವನ್ನು ಈವರ್ಷ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದೂ ಬನ್ಸಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT