ನವದೆಹಲಿ:ವಿಸ್ತಾರ ವಿಮಾನಯಾನ ಕಂಪನಿಯ ಟ್ವೀಟ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶವ್ಯಕ್ತವಾಗಿದೆ. ತನ್ನ ಸಿಬ್ಬಂದಿಯ ಜತೆ ನಿವೃತ್ತ ಮೇಜರ್ ಜನರಲ್ ಒಬ್ಬರ ಚಿತ್ರವನ್ನು ಟ್ವಿಟರ್‌ನಲ್ಲಿ ಭಾನುವಾರ ಪ್ರಕಟಿಸಿ ನಂತರ ಅದನ್ನು ಅಳಿಸಿ ಹಾಕಿದೆ. ಆದರೂ ನೆಟ್ಟಿಗರು ವಿಸ್ತಾರದ ಈ ನಡೆಯನ್ನು ಟೀಕಿಸಿದ್ದಾರೆ.
‘ಯಾರಿಗೆ ಅಗೌರವ ತೋರುವುದು ಇಲ್ಲವೇ ನೋವುಂಟು ಮಾಡುವುದನ್ನು ನಾವು ಬಯಸುವುದಿಲ್ಲ. ಇದರಿಂದಾಗಿ ನಾವು ಟ್ವೀಟ್ ಅನ್ನು ಅಳಿಸಿಹಾಕಿದ್ದೇವೆ’ ಎಂದು ವಿಸ್ತಾರ ತನ್ನ ಟ್ವಿಟರ್‌ನಲ್ಲಿ ಹೇಳಿಕೊಂಡಿದೆ.
ವಿಮಾನ ಆಸೀನರಾಗಿರುವನಿವೃತ್ತ ಮೇಜರ್ ಜನರಲ್ ಜಿ.ಡಿ.ಬಕ್ಷಿ ಅವರ ಹಿಂಬದಿ ಇಬ್ಬರು ಸಿಬ್ಬಂದಿ ನಿಂತಿರುವ ಚಿತ್ರವನ್ನು ಪ್ರಕಟಿಸಿತ್ತು. ಸಂಸ್ಥೆಯ ವಿಮಾನದಲ್ಲಿ ಬಕ್ಷಿ ಅವರು ಇರುವುದು ಗೌರವದ ಸಂಗತಿ ಎಂದು ಹೇಳಿಕೊಂಡಿತ್ತು. ಈ ಟ್ವೀಟ್‌ಗೆ ಸಾಕಷ್ಟು ಟೀಕೆಗಳನ್ನು ಜಾಲತಾಣ ಬಳಕೆದಾರರು ಮಾಡಿದ್ದರು.
‘ಕಾರ್ಗಿಲ್ ಯುದ್ಧದ ಹೀರೊ ಆಗಿರುವ ಜಿ.ಡಿ.ಬಕ್ಷಿ ಅವರು ನಮ್ಮ ವಿಮಾನಕ್ಕೆ ಬಂದಿದ್ದು ಗೌರವದ ವಿಷಯ. ಧನ್ಯವಾದಗಳು ಸಾರ್ ನೀವು ದೇಶಕ್ಕೆ ಸಲ್ಲಿಸಿದ ಸೇವೆಗೆ’ ಎಂಬ ಒಕ್ಕಣೆಯನ್ನು ಟ್ವೀಟ್‌ನಲ್ಲಿ ಬರೆಯಲಾಗಿತ್ತು.
ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರೂ ಟೀಕೆಗಳು ಮಾತ್ರ ನಿಲ್ಲಲಿಲ್ಲ. ‘'#BoycottVistara' ’ ಎಂಬ ಹ್ಯಾಸ್ ಟ್ಯಾಗ್ ಭಾನುವಾರ ಸಂಜೆಯ ಹೊತ್ತಿಗೆ ಟ್ರೆಂಡಿಂಗ್ ಆಗತೊಡಗಿತು.
ವಿಮಾನದ ಸಿಬ್ಬಂದಿ ಜತೆ ಖುಷಿಯಿಂದ ಇರುವ ಗ್ರಾಹಕರ ಚಿತ್ರಗಳನ್ನು ವಿಸ್ತಾರ ಪ್ರಕಟಿಸಿತ್ತು.
ನಿವೃತ್ತ ಜನರಲ್ ಇದ್ದ ಚಿತ್ರಕ್ಕೆ ಆಕ್ಷೇಪವ್ಯಕ್ತಪಡಿಸಿದ ದೆಹಲಿ ಬಿಜೆಪಿ ಘಟಕದ ವಕ್ತಾರ ತೇಜಿಂದರ್ ಸಿಂಗ್ ಬಗ್ಗಾ ಅವರು ವಿಸ್ತಾರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ತಾವು ಇನ್ನು ಮುಂದೆ ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ ಎಂದು ಬರೆದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.