ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಾ ಉತ್ಸವ: ರಾಜ್ಯಪಾಲರ ಕಡೆಗಣನೆ ಆರೋಪ

ಟಿಎಂಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಜಗದೀಪ್ ಧನಕರ್
Last Updated 15 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರ ಆಯೋಜಸಿದ್ದ ದುರ್ಗಾಪೂಜೆ ಉತ್ಸವದಲ್ಲಿ ತಮ್ಮನ್ನು ಸಂಪೂರ್ಣ ಕಡೆಗಣಿಸಲಾಗಿತ್ತು ಎಂದು ರಾಜ್ಯಪಾಲ ಜಗದೀಪ್ ಧನಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ನಾಲ್ಕು ತಾಸು ಭಾಗಿಯಾಗಿದ್ದರೂ ಮಾಧ್ಯಮಗಳಲ್ಲಿ ತಮ್ಮನ್ನು ತೋರಿಸಿಲ್ಲ ಎಂದು ಅವರು ದೂರಿದ್ದಾರೆ. ರಾಜ್ಯಪಾಲರ ಆರೋಪಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಟಿಎಂಸಿ, ‘ರಾಜ್ಯಪಾಲರಿಗೆ ಪ್ರಚಾರದ ಹಂಬಲವಿದೆ’ ಎಂದು ತಿವಿದಿದೆ. ರಾಜ್ಯಪಾಲರು ತಮ್ಮ ಘನತೆಗೆ ತಕ್ಕಂತೆ ವರ್ತಿಸಬೇಕು ಎಂದೂ ಸಲಹೆ ನೀಡಿದೆ.

ಶುಕ್ರವಾರ ನಡೆದ ಉತ್ಸವದಲ್ಲಿ ತಮಗೆ ಮಾಡಲಾಗಿದ್ದ ಆಸನ ವ್ಯವಸ್ಥೆ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸಾಕಷ್ಟು ನೇರಪ್ರಸಾದ ಕಾರ್ಯಕ್ರಮಗಳಿದ್ದೂ, ಆ ಪೈಕಿ ಒಂದನ್ನೂ ನೋಡಲು ಸಾಧ್ಯವಾಗಲಿಲ್ಲ’ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

‘ಸರ್ಕಾರದ ನಡೆಯಿಂದ ನಾನು ಗಾಸಿಗೊಂಡಿದ್ದೇನೆ. ಇದು ಇಡೀ ಬಂಗಾಳ ಜನತೆಗೆ ಮಾಡಿದ ಅಪಮಾನ. ಇಂತಹ ಘಟನೆಗಳನ್ನು ಜನರು ಎಂದಿಗೂ ಅರಗಿಸಿಕೊಳ್ಳಲಾರರು. ನನಗೆ ಆಹ್ವಾನ ನೀಡಿದ ಬಳಿಕ ಕಡೆಗಣಿಸಲು ಹೇಗೆ ಸಾಧ್ಯ? ಈ ಪ್ರಸಂಗ ತುರ್ತುಪರಿಸ್ಥಿತಿಯನ್ನು ನೆನಪಿಗೆ ತರುತ್ತದೆ ಎಂದು ಕೆಲವರು ನನಗೆ ಹೇಳಿದರು’ ಎಂದು ರಾಜ್ಯಪಾಲರು ಹೇಳಿದ್ದಾರೆ.

‘ಕಡೆಗಣಿಸಿದ್ದಕ್ಕೆ ಕಾರಣವನ್ನು ಅವರನ್ನೇ ಕೇಳಿ. ಇಡೀ ಜಗತ್ತೇ ಇದನ್ನು ನೋಡಿದೆ. ನಾಲ್ಕು ಗಂಟೆಯ ಪೈಕಿ ಕೇವಲ ಒಂದು ಸೆಕೆಂಡ್‌ನಷ್ಟಾದರೂ ಟಿ.ವಿಯಲ್ಲಿ ನನ್ನನ್ನು ತೋರಿಸಿಲ್ಲ. ನಾನು ಅಸ್ಪೃಶ್ಯನಲ್ಲ. ಇಷ್ಟೊಂದು ಮಟ್ಟದ ಅಸಹಿಷ್ಣುತೆ ಒಳ್ಳೆಯದಲ್ಲ’ ಎಂದು ಧನಕರ್ ಹೇಳಿದ್ದಾರೆ.

ಟಿಎಂಸಿ ತಿರುಗೇಟು:ಅಸಂಬದ್ಧ ವಿಷಯ ಇಟ್ಟುಕೊಂಡು ಅದನ್ನು ದೊಡ್ಡದು ಮಾಡಲು ರಾಜ್ಯಪಾಲರು ಯತ್ನಿಸುತ್ತಿದ್ದಾರೆ ಎಂದು ಟಿಎಂಸಿ ಮುಖಂಡ ತಪಸ್ ರಾಯ್ ಆರೋಪಿಸಿದ್ದಾರೆ. ‘ಹಿಂದಿನ ವಾರದ ಘಟನೆ ಬಗ್ಗೆ ಈಗೇಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ? ಅವರಿಗೆ ಪ್ರಚಾರದ ಹುಚ್ಚಿದೆ’ ಎಂದು ಅವರು ಹೇಳಿದ್ದಾರೆ.

ರೆಡ್ ರೋಡ್‌ನಲ್ಲಿ ನಡೆದ ದುರ್ಗಾ ಉತ್ಸವದಲ್ಲಿ 70ಕ್ಕೂ ಹೆಚ್ಚು ದುರ್ಗಾಪೂಜಾ ಸಮಿತಿಗಳು ಭಾಗವಹಿಸಿದ್ದವು. ಉತ್ಸವದಲ್ಲಿ ಆಕರ್ಷಕ ಸ್ತಬ್ಧಚಿತ್ರಗಳ ಕಲಾ ಪ್ರದರ್ಶನ ಅನಾವರಣಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT