ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಹಿಂದೂ ಮಹಾಸಭಾ ಸಂಸ್ಥಾಪಕನ ಹತ್ಯೆ: ಎರಡನೇ ಪತ್ನಿ ಸೇರಿ ಮೂವರ ಬಂಧನ

Last Updated 7 ಫೆಬ್ರುವರಿ 2020, 7:34 IST
ಅಕ್ಷರ ಗಾತ್ರ

ಲಖನೌ: ವಿಶ್ವ ಹಿಂದೂ ಮಹಾಸಭಾದ (VHM) ಸಂಸ್ಥಾಪಕ ಮುಖ್ಯಸ್ಥರಂಜೀತ್ ಬಚ್ಚನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪತ್ನಿ ಸೇರಿ ಮೂವರನ್ನು ಕೊಲೆ ಆರೋಪದಲ್ಲಿ ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಫೆಬ್ರುವರಿ 2ರಂದು ಮುಂಜಾನೆ ವಾಕಿಂಗ್‌ಗೆ ತೆರಳಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದರು. ದಾಳಿಯಲ್ಲಿ ಸೋದರಸಂಬಂಧಿ ಆದಿತ್ಯ ಶ್ರೀವಾತ್ಸವ ಕೂಡ ಗಾಯಗೊಂಡಿದ್ದರು.

ರಾಜ್ಯ ಖಜಾನೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎರಡನೇ ಪತ್ನಿ ಸ್ಮೃತಿ ಶ್ರೀವಾತ್ಸವ್ ಮತ್ತು ಪತಿ40 ವರ್ಷದ ಬಚ್ಚನ್ ನಡುವಿನ ಕೌಂಟುಂಬಿಕ ಕಲಹದಿಂದಾಗಿ ಹತ್ಯೆ ನಡೆದಿದೆ. ಇವರಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ ಮತ್ತು 2016ರಿಂದಲೂ ಪ್ರತ್ಯೇಕವಾಗಿವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಮೃತಿ ಶ್ರೀವಾತ್ಸವ ಮತ್ತು ಸ್ನೇಹಿತ ದೀಪೇಂದ್ರ ಕುಮಾರ್ ನಡುವೆ ಸಂಬಂಧವಿತ್ತು ಮತ್ತು ಮದುವೆಯಾಗಲು ನಿರ್ಧರಿಸಿದ್ದರು ಎಂದು ಲಖನೌ ಪೊಲೀಸ್ ಕಮಿಷನರ್ ಸುಜೀತ್ ಪಾಂಡೆ ತಿಳಿಸಿದ್ದಾರೆ.

ಬಚ್ಚನ್ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು. ತನಗೆ ಈಗಾಗಲೇ ವಿವಾಹವಾಗಿರುವುದನ್ನು ತಿಳಿಸದೆ 2015ರ ಜನವರಿ 18ರಂದು ಸ್ಮೃತಿ ಶ್ರೀವಾತ್ಸವ್ ಅವರನ್ನು ಮದುವೆಯಾಗಿದ್ದರು. ಈ ವಿಚಾರ ತಿಳಿದ ಸ್ಮೃತಿ ಪತಿಯಿಂದ ದೂರವಾಗಿ ಬದುಕುತ್ತಿದ್ದರು. ಜನವರಿ 17ರಂದು ಸ್ಮೃತಿ ಅವರ ಮನೆಗೆ ಭೇಟಿ ನೀಡಿದ್ದ ಬಚ್ಚನ್, ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸುವಂತೆ ಬಲವಂತ ಮಾಡಿದ್ದರು. ಅದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದಾಗ ಆಕೆ ಮೇಲೆ ಹಲ್ಲೆ ಮಾಡಿದ್ದರು ಎಂದು ಕಮಿಷನರ್ ತಿಳಿಸಿದ್ದಾರೆ.

ಬಚ್ಚನ್ ಅವರನ್ನು ಕೊಲ್ಲಲು ಸ್ಮೃತಿ ಮತ್ತು ದೀಪೇಂದ್ರ ಕುಮಾರ್ ಸೇರಿ ಯೋಜನೆ ರೂಪಿಸಿದ್ದರು. ಅದಕ್ಕಾಗಿ ದೀಪೇಂದ್ರ ಅವರ ಚಾಲಕ ಸಂಜಿತ್ ಗೌತಮ್ ಮತ್ತು ಸೋದರ ಜಿತೇಂದ್ರರನ್ನು ನೇಮಿಸಿದ್ದರು. ಫೆಬ್ರುವರಿ 1 ಮತ್ತು 2ರ ರಾತ್ರಿ ಆರೋಪಿಗಳು ಲಖನೌಗೆ ತಲುಪಿ ಮುಂಜಾನೆ 5.30ಕ್ಕೆ ಬಚ್ಚನ್ ವಾಕಿಂಗ್‌ಗೆ ತೆರಳುತ್ತಿದ್ದಾಗ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಬಳಿಕ ಜಿತೇಂದ್ರ ಮತ್ತು ದೀಪೇಂದ್ರ ಬೇರೆ ಬೇರೆ ಮಾರ್ಗಗಳ ಮೂಲಕ ರಾಯ್‌ಬರೇಲಿಗೆ ತೆರಳಿದ್ದಾರೆ. ಅಲ್ಲಿಂದ ರೈಲಿನ ಮೂಲಕ ಮುಂಬೈಗೆ ತೆರಳಿದ್ದಾರೆ. ಸ್ಮೃತಿ ಮತ್ತು ದೀಪೇಂದ್ರ ಅವರ ಫೋನ್ ಕರೆಗಳನ್ನು ಪರಿಶೀಲಿಸಿದಾಗ ಇಬ್ಬರ ನಡುವಿನ ಸಂಬಂಧ ಬೆಳಕಿಗೆ ಬಂದಿದೆ. ದೀಪೇಂದ್ರನನ್ನು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಗಡಿಯಲ್ಲಿ ಬಂಧಿಸಿದ್ದರೆ, ಸ್ಮೃತಿಯನ್ನು ಆಕೆಯ ನಿವಾಸದಲ್ಲಿ ಬಂಧಿಸಲಾಗಿದೆ. ದೀಪೇಂದ್ರನ ಕಾರು ಚಾಲಕನನ್ನು ರಾಯ್‌ಬರೇಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT